More

    ಹೆದ್ದಾರಿಯಲ್ಲಿ ಗುಂಡಿಗಳದ್ದೇ ಕಾರುಬಾರು

    ಹಾಸನ-ಬೇಲೂರು ಮಾರ್ಗದಲ್ಲಿ ತಪ್ಪದ ಗೋಳು

    ಬೇಲೂರು: ಕಳೆದ ಮೂರು ತಿಂಗಳಿಂದ ಸುರಿದ ಬಾರಿ ಮಳೆಗೆ ಹಾಸನ-ಬೇಲೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿ ಬಿದ್ದಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಸ್ಥಳೀಯರು, ವಾಹನ ಚಾಲಕರು ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಧಿಕಾರಿಗಳಿಗೆ ಗುಮಡಿ ಮುಚ್ಚುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.


    ವಿಶ್ವ ವಿಖ್ಯಾತ ಪ್ರವಾಸಿ ತಾಣ ಬೇಲೂರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಮತ್ತು ಭಕ್ತರು ಹಾಸನ-ಬೇಲೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಮೂಲಕ ವಾಹನಗಳಲ್ಲಿ ಸಂಚರಿಸುತ್ತಾರೆ. ಆದರೆ, ಈ ರಸ್ತೆಯಲ್ಲಿ ಹಾಸನದಿಂದ ಬೇಲೂರಿಗೆ ಬರುವಷ್ಟರಲ್ಲಿ ಸವಾರರು ಹಾಗೂ ಚಾಲಕರು ಸಾಕಾಗಿ ಹೋಗಿರುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಂತೂ ಕೇಳುವ ಹಾಗಿಲ್ಲ. ಪ್ರವಾಸಿ ತಾಣಗಳಾದ ಬೇಲೂರು, ಹಳೇಬೀಡು, ಮೂಡಿಗೆರೆ, ಧರ್ಮಸ್ಥಳ, ಉಡುಪಿ, ಚಿಕ್ಕಮಗಳೂರು, ಕಳಸ ಹೊರನಾಡು ಸೇರಿದಂತೆ ಇತರೆ ಸ್ಥಳಗಳಿಗೆ ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಿಂದ ಬಿಡುವಿಲ್ಲದಂತೆ ಒಂದರ ಹಿಂದೆ ಒಂದರಂತೆ ವಾಹನಗಳು ಚಲಿಸುತ್ತಲೇ ಇರುತ್ತವೆ.

    ಆದರೆ, ಕಳೆದ ಎರಡು ಮೂರು ತಿಂಗಳು ನಿರಂತರವಾಗಿ ಸುರಿದ ಬಾರಿ ಮಳೆಯಿಂದಾಗಿ ಸುಮಾರು 10 ಕಿಲೋ ಮೀಟರ್‌ಗೂ ಹೆಚ್ಚು ದೂರದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಂಡಿಯುದ್ದದ ಗುಂಡಿಗಳು ಬಿದ್ದಿವೆ. ಆದರೆ, ಇಲಾಖೆಯಿಂದ ತಾತ್ಕಾಲಿಕವಾಗಿ ಜಲ್ಲಿ ಕಲ್ಲುಗಳಿಂದ ಮುಚ್ಚಿದ್ದ ಗುಂಡಿಗಳು ಸಾಕಷ್ಟು ವಾಹನಗಳ ಓಡಾಟದಿಂದ ಮೇಲೆದ್ದು ಕಲ್ಲುಗಳೆಲ್ಲ ರಸ್ತೆ ಪಕ್ಕಕ್ಕೆ ಸರಿದಿದ್ದು, ಪುನ: ಗುಂಡಿಗಳು ಬಾಯ್ತೆರೆದು ಕುಳಿತಿವೆ.


    ಇದರಿಂದ ವಿವಿಧ ವಾಹನಗಳ ಚಾಲಕರು ಹಾಗೂ ಸವಾರರು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಹಲವಾರು ಅಪಘಾತಗಳೂ ಸಂಭವಿಸುವಂತೆ ಮಾಡಿವೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಗುಂಡಿ ಮುಚ್ಚಲು ಕ್ರಮಕೈಗೊಳ್ಳಬೇಕಾಗಿ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಗುಂಡಿ ಬಿದ್ದಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ತಕ್ಷಣ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಗುಂಡಿ ಮುಚ್ಚಿಸಿದರೆ ಸುರಕ್ಷಿತ ಪ್ರಯಾಣಕ್ಕೆ ಸಹಕಾರಿಯಾಗುತ್ತದೆ.
    ಐ.ಜಿ.ಲೋಕೇಶ್, ಮಾಜಿ ಅಧ್ಯಕ್ಷರು, ಇಬ್ಬೀಡು ಗ್ರಾಮ ಪಂಚಾಯಿತಿ, ಬೇಲೂರು

    ಮಳೆಯಿಂದಾಗಿ ಹೆದ್ದಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದಲ್ಲಿಗೆ ಜಲ್ಲಿ ತುಂಬಿ ತಾತ್ಕಾಲಿಕವಾಗಿ ಮುಚ್ಚಿದ್ದೇವೆ. ಆದರೆ, ಈಗ ಮಳೆ ಬರುತ್ತಿರುವುದರಿಂದ ಮಳೆ ಸಂಪೂರ್ಣವಾಗಿ ನಿಂತ ನಂತರ ಡಾಂಬರ್‌ನಿಂದ ಮುಚ್ಚುತ್ತೇವೆ. ಅನುದಾನಕ್ಕಾಗಿ ಎಸ್ಟೀಮೇಟ್ ಮಾಡಿ ಕಳುಹಿಸಿದ್ದೇವೆ. ಇದರ ಜತೆಗೆ ಅಪಘಾತ ವಲಯದಲ್ಲಿ ಹಂಪ್ಸ್ ಹಾಕುವುದಕ್ಕೂ ಕ್ರಮ ಕೈಗೊಳ್ಳುತ್ತೇವೆ.
    ಸಂತೋಷ್ ಯಲಗಿ, ಎಇ, ರಾಷ್ಟ್ರೀಯ ಹೆದ್ದಾರಿ ರಸ್ತೆ ಉಪ ವಿಭಾಗ ಹಾಸನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts