More

    ಹೆಚ್ಚು ಸ್ಥಾನ ಗೆದ್ದರೆ ಒತ್ತಡ ಹಾಕಬಹುದು

    ಚಿತ್ರದುರ್ಗ: ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ರಾಜ್ಯಕ್ಕೆ ಅನುದಾನ ತರುವಲ್ಲಿ ಒತ್ತಡ ಹೇರಲು ಹೆಚ್ಚು ಸ್ಥಾನ ಗೆಲ್ಲಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಈ ಭಾಗದ ಜನರ ಜೀವನಾಡಿ. ಆದರೆ, ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಸತತ ಅನ್ಯಾಯ ಆಗುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸಿದರೆ, ಕಾಂಗ್ರೆಸ್ ಅಧಿಕ ಸ್ಥಾನ ಪಡೆಯಲಿದೆ ಎಂದರು.

    ಏ. 4ರಂದು ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ. ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಒನಕೆ ಓಬವ್ವ ವೃತ್ತದವರೆಗೂ ಮೆರವಣಿಗೆ ನಡೆಯಲಿದೆ. ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಪಂಚ ಕಲ್ಯಾಣ ಯೋಜನೆ ಈಡೇರಿಸಿದ್ದೇವೆ. ಇವು ಕಾಂಗ್ರೆಸ್ ಕೈಹಿಡಿಯುವ ವಿಶ್ವಾಸವಿದೆ. ನನ್ನನ್ನು ಹೊರತುಪಡಿಸಿ ಕ್ಷೇತ್ರದಲ್ಲಿ ಏಳು ಮಂದಿ ಕೈ ಶಾಸಕರಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.

    ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ನೀರು, ಮೇವು ಸಮಸ್ಯೆ ಉಂಟಾಗಿದ್ದು, ಸಮರ್ಪಕ ಪೂರೈಕೆಗೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನ ಏಕೆ ನೀಡಿಲ್ಲ. ಬಿಜೆಪಿಗರಿಗೆ ನಾಡಿನ ಜನರ ಕುರಿತು ಕಾಳಜಿ ಇಲ್ಲ ಎಂದು ದೂರಿದರು.

    ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಭದ್ರಾ 12ಸಾವಿರ ಹೆಕ್ಟೇರ್ ಪ್ರದೇಶದ ಕಾಮಗಾರಿಯುಳ್ಳ ಯೋಜನೆ ಆಗಿದ್ದು, ಸ್ವಯಂ ಘೋಷಿತ ರಾಷ್ಟ್ರೀಯ ಯೋಜನೆ ಮಾಡಬಹುದಿತ್ತು. ಅದಕ್ಕಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 5,300 ಕೋಟಿ ರೂ. ಮೀಸಲಿಟ್ಟು, ವರ್ಷವಾದರೂ ಏಕೆ ನೀಡಲಿಲ್ಲ. ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಈ ಹಿಂದಿನ ಸಿಎಂ ಆಗಲಿ, ಕ್ಷೇತ್ರದ ಸಂಸದರಾಗಲಿ ಒತ್ತಡ ಹಾಕಿ ಅನುದಾನವೇಕೆ ತರಲಿಲ್ಲ ಎಂದು ಪ್ರಶ್ನಿಸಿದರು.

    ಕಳೆದ ಬಾರಿ ಸೋತರೂ ಆ ಭಾವನೆ ಎಂದಿಗೂ ಕಾಡಿಲ್ಲ. ಕ್ಷೇತ್ರದ ಯಾವುದೇ ಮೂಲೆಗೆ ಹೋದರೂ ಜನ ಪ್ರೀತಿಯಿಂದ ಕಾಣುತ್ತಾರೆ. ಗೆಲ್ಲುವ ವಾತಾವರಣ ನಿರ್ಮಾಣವಾಗಿದ್ದು, ಜನಾಶೀರ್ವಾದ ದೊರೆಯುವ ವಿಶ್ವಾಸವಿದೆ ಎಂದರು.

    ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕೇಂದ್ರದಿಂದ ಭಾರಿ ಅನ್ಯಾಯ ಆಗುತ್ತಲೇ ಇದೆ. ತೆರಿಗೆಯಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲು ಸರಿಯಾಗಿ ನೀಡುತ್ತಿಲ್ಲ. ಈ ವಿಚಾರವಾಗಿ ಹಿಂದೆ ದೆಹಲಿಯಲ್ಲಿ ಪ್ರತಿಭಟಿಸಿದರೂ ಸ್ಪಂದಿಸಿಲ್ಲ. ಹೀಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದ ಅವರು, ವೇದಾವತಿ ನದಿಗೆ ವಿ.ವಿ.ಸಾಗರದಿಂದ ನೀರು ಹರಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

    ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಒಗ್ಗಟ್ಟಿನಿಂದ ಶ್ರಮಿಸಲು ಪಕ್ಷದ ಕಾರ್ಯಕರ್ತರು, ಮುಖಂಡರು ಈಗಾಗಲೇ ತೀರ್ಮಾನಿಸಿದ್ದೇವೆ. ಕಾಂಗ್ರೆಸ್ ಕೊಡುಗೆ ಕುರಿತು ಹೆಚ್ಚು ಪ್ರಚಾರ ಮಾಡುವ ಮೂಲಕ ಮನೆ-ಮನೆಗೆ ತಲುಪಿ, ಮತದಾರರಲ್ಲಿ ಅರಿವು ಮೂಡಿಸಿದರೆ, ಗೆಲುವು ಕಷ್ಟವಲ್ಲ ಎಂದರು.

    ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ಹಾಲಸ್ವಾಮಿ, ಶಿವಣ್ಣ, ಮರುಳಾರಾಧ್ಯ, ಅಲ್ಲಾಭಕ್ಷಿ, ಡಿ.ಟಿ.ವೆಂಕಟೇಶ್, ನರಸಿಂಹರಾಜು, ಎನ್.ಡಿ.ಕುಮಾರ್, ಸಂಪತ್‌ಕುಮಾರ್, ನರಸಿಂಹರಾಜು, ಬಾಲಕೃಷ್ಣ ಯಾದವ್, ಪ್ರಕಾಶ್ ರಾಮನಾಯ್ಕ, ಜಯಣ್ಣ, ವೆಂಕಟೇಶ್, ಮಧುಗೌಡ, ರವಿ, ಲೋಕೇಶ್, ಕುಮಾರ್, ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts