More

    ಹೆಚ್ಚುತ್ತಿದೆ ಕರೊನಾ 2ನೇ ಅಲೆ

    ಹಾವೇರಿ: ರಾಜ್ಯದಲ್ಲಿ ಕರೊನಾ ಮಹಾಮಾರಿಯ ಎರಡನೇ ಅಲೆಯ ಆತಂಕ ಹೆಚ್ಚುತ್ತಿದ್ದಂತೆ ಜಿಲ್ಲೆಯಲ್ಲಿಯೂ ಕಳೆದ ಒಂದು ವಾರದಿಂದ ಕರೊನಾ ಪ್ರಕರಣಗಳ ಪ್ರಮಾಣ ನಿರೀಕ್ಷೆಗೂ ಮೀರಿ ಹೆಚ್ಚುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ಅಪ್ಪಳಿಸುವ ಆತಂಕ ಎದುರಾಗಿದೆ.
    ಜಿಲ್ಲಾಡಳಿತವೂ 2ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಕಳೆದೊಂದು ವಾರದಿಂದ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿತ್ಯ ಎರಡಂಕಿ ದಾಟುತ್ತಿದೆ. ಅಲ್ಲದೆ, ಏರಿಕೆ ಕ್ರಮದಲ್ಲಿಯೇ ಸೋಂಕಿತರ ಸಂಖ್ಯೆಯಿದೆ. ಇದು ಮೊದಲ ಅಲೆಗಿಂತಲೂ ಹೆಚ್ಚಿರುವುದರಿಂದ ಜಿಲ್ಲಾಡಳಿತ ಹಾಗೂ ಸಾರ್ವಜನಿಕರಲ್ಲಿ ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಮೊದಲ ಅಲೆಗೆ 195 ಜನರು ಮೃತಪಟ್ಟಿದ್ದರು. 2ನೇ ಅಲೆ ಆರಂಭಗೊಂಡ ನಂತರ ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಕರೊನಾಕ್ಕೆ ಈವರೆಗೆ ಜಿಲ್ಲೆಯಲ್ಲಿ 197 ಜನರು ಬಲಿಯಾದಂತಾಗಿದೆ.
    ಏರಿಕೆಯಾಗುತ್ತಿರುವ ಸಕ್ರಿಯ ಪ್ರಕರಣಗಳು…
    ಜಿಲ್ಲೆಯಲ್ಲಿ ಕಳೆದ ಶುಕ್ರವಾರ (ಏ. 10ರಂದು) ಸಕ್ರಿಯ ಪ್ರಕರಣಗಳ ಸಂಖ್ಯೆ 81ರಷ್ಟಿತ್ತು. ಈ ಶುಕ್ರವಾರಕ್ಕೆ ಅದು 261ಕ್ಕೆ ಏರಿಕೆಯಾಗಿದೆ. ಇದರಲ್ಲಿ 254 ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದರೆ, 7 ಜನ ಹೋಮ್ ಐಸೋಲೇಷನ್​ನಲ್ಲಿದ್ದಾರೆ.
    ಕರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳಿಗೆ ಮೊರೆ ಹೋಗಿದೆ. ಜಿಲ್ಲೆಯ ಹಾವೇರಿ ಹಾಗೂ ರಾಣೆಬೆನ್ನೂರ ನಗರದಲ್ಲಿ ಮಾಸ್ಕ್ ಧರಿಸದೇ ಸಂಚರಿಸುವವರಿಗೆ 200 ರೂ. ದಂಡ ವಿಧಿಸಲು ಪೊಲೀಸ್ ಇಲಾಖೆಗೆ ಅನುಮತಿ ನೀಡಲಾಗಿದೆ. ಇನ್ನುಳಿದ ತಾಲೂಕು ಕೇಂದ್ರಗಳಲ್ಲಿ 100 ರೂ. ಗಳ ದಂಡ ವಸೂಲಿಗೆ ಆದೇಶಿಸಲಾಗಿದೆ. ಮದುವೆ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕರೊನಾ ಮಾರ್ಗಸೂಚಿ ಪಾಲನೆಗೆ ಕಣ್ಗಾವಲಿಡಲು ತಾಲೂಕು ಆಡಳಿತಗಳಿಗೆ ಸೂಚಿಸಲಾಗಿದೆ.

    ಚಿಕಿತ್ಸೆ ಅಗತ್ಯ ವ್ಯವಸ್ಥೆ: ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ 6 ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಬೆಡ್, ವೆಂಟಿಲೇಟರ್, ಆಕ್ಸಿಜನ್, ಐಸಿಯು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಸಾಪುರದಲ್ಲಿರುವ ವಸತಿ ನಿಲಯದಲ್ಲಿ ಕೇರ್ ಸೆಂಟರ್ ತೆರೆಯಲು ಸಿದ್ಧತೆ ನಡೆದಿದೆ.

    ಕೆಲ ಸಾರ್ವಜನಿಕರಲ್ಲಿಲ್ಲ ಭೀತಿ: ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆ ಜೋರಾಗಿ ಸದ್ದು ಮಾಡುತ್ತಿದ್ದರೂ ಕೆಲ ಸಾರ್ವಜನಿಕರು ಮಾತ್ರ ಪರಸ್ಪರ ಅಂತರ ಕಾಯುವುದು, ಮಾಸ್ಕ್ ಧರಿಸುವುದನ್ನು ಮರೆಯುತ್ತಿದ್ದಾರೆ. ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಕೈಗೊಂಡಿರುವುದರಿಂದ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರನ್ನು ಕುರಿಗಳಂತೆ ತುಂಬಲಾಗುತ್ತಿದೆ. ಇದು ಸಹ ಕರೊನಾ ಇನ್ನಷ್ಟು ವೇಗವಾಗಿ ಹರಡಲು ಅನುಕೂಲ ಮಾಡಿಕೊಟ್ಟಂತಾಗಿದೆ. ಜಿಲ್ಲಾಡಳಿತ ಅದರ ಬಗ್ಗೆಯೂ ಗಮನಹರಿಸಿ ವಾಹನಗಳಲ್ಲಿಯೂ ಇಂತಿಷ್ಟೇ ಪ್ರಯಾಣಿಕರನ್ನು ಸಾಗಿಸಬೇಕು ಎಂದು ಸೂಚನೆಯನ್ನು ಹೊರಡಿಸಬೇಕಿದೆ.

    ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕಾಸ್ಪತ್ರೆಗಳಲ್ಲಿ ಆಕ್ಸಿಜನ್ ಸಹಿತ ಬೆಡ್​ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಹಾವೇರಿ ತಾಲೂಕಿನ ಬಸಾಪುರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಅಗತ್ಯಬಿದ್ದರೆ ರಾಣೆಬೆನ್ನೂರು ತಾಲೂಕಿನಲ್ಲೊಂದು ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ 540 ಆಕ್ಸಿಜನ್ ಸಹಿತ ಬೆಡ್​ಗಳ ವ್ಯವಸ್ಥೆಯಿದೆ. 950ಕ್ಕೂ ಹೆಚ್ಚು ಬೆಡ್​ಗಳ ವ್ಯವಸ್ಥೆ ಹೊಂದಲಾಗಿದೆ. ತಾಲೂಕಾಸ್ಪತ್ರೆಗಳಲ್ಲಿ 190 ಜಂಬೋ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಹೊಂದಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್ ಆಕ್ಸಿಜನ್ ಟ್ಯಾಂಕ್ ಅಳವಡಿಸಲಾಗಿದೆ.
    | ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ ಹಾವೇರಿ

    ಕೋಟ್..
    ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕರು ಹಿಂದಿನ ಬಾರಿಯಂತೆ ಈ ಸಾರಿಯೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸೋಂಕಿತರ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದೇ ಕೊರತೆಯೂ ಸದ್ಯಕ್ಕಿಲ್ಲ.
    | ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಡಿಎಚ್​ಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts