More

    ಹೆಚ್ಚಿನ ನೀರು ಬಳಕೆ ಇಳುವರಿ ಇಳಿಕೆ -ಬಿ.ವೈ. ಭಂಡಿವಡ್ಡರ್ ಹೇಳಿಕೆ -ಜಲ ಮೂಲಗಳ ಸಂರಕ್ಷಣೆ ಕಾರ್ಯಾಗಾರ

    ದಾವಣಗೆರೆ: ಬಹುತೇಕ ರೈತರು ಹೆಚ್ಚಿನ ನೀರು ಬಳಸಿ ಪೋಲು ಮಾಡುತ್ತಿದ್ದಾರೆ. ಇದರಿಂದ ಜಮೀನಿನಲ್ಲಿ ಲವಣದ ಅಂಶ ಹೆಚ್ಚುವ ಜತೆಗೆ ಇಳುವರಿಯೂ ಕಡಿಮೆಯಾಗುತ್ತಿದೆ ಎಂದು ಧಾರವಾಡದ ಜಲ ಹಾಗೂ ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ನಿರ್ದೇಶಕ ಬಿ.ವೈ. ಭಂಡಿವಡ್ಡರ್ ತಿಳಿಸಿದರು.
    ನಗರದ ಯು.ಬಿ.ಡಿ.ಟಿ. ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಮಡಿದ್ದ ನೀರಾವರಿ ನಿರ್ವಹಣೆ ಹಾಗೂ ಜಲ ಮೂಲಗಳ ಸಂರಕ್ಷಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಶೇ.50-60ರಷ್ಟು ರೈತರು ನೀರು ಯಥೇಚ್ಛವಾಗಿ ಬಳಸುತ್ತಿದ್ದಾರೆ. ಬೆಳೆಗಳ ಬೇರುಗಳಿಗೆ ಉಸಿರುಗಟ್ಟಿದ ವಾತಾವರಣ ಆಗುತ್ತಿದೆ. ನೀರು ಹೆಚ್ಚಾದಾಗ, ಅದು ಜಮೀನಿನ ಅಡಿ ಇರುವ ಲವಣಾಂಶವನ್ನು ಕರಗಿಸಿ ಮೇಲೆ ತರುತ್ತದೆ. ಇದು ಜಮೀನಿನ ಫಲವತ್ತತೆ ಕೂಡ ಕಸಿಯಲಿದೆ ಎಂದು ವಿವರಿಸಿದರು.
    ನೀರಾವರಿ ಅಚ್ಚುಕಟ್ಟಿನ ಮೇಲ್ಭಾಗದ ರೈತರು ಅತಿಯಾಗಿ ನೀರು ಬಳಸಿದಾಗ ಕೊನೆ ಭಾಗದ ರೈತರಿಗೆ ನೀರು ಕಡಿಮೆಯಾಗುತ್ತದೆ. ಹೊಲಗಳಿಗೆ ನೀರು ಹರಿಸುವ ಪದ್ಧತಿ ಹೆಚ್ಚು ಸೂಕ್ತವಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ನೀರಿನ ದಕ್ಷತೆ ಶೇ.95ರಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದರು.
    ವಸತಿ ಪ್ರದೇಶಗಳಲ್ಲಿ ಮಳೆ ಕೊಯ್ಲು ಮೂಲಕ ನೀರು ಸಂರಕ್ಷಿಸಬೇಕು. ಕಟಾವಿನ ವೇಳೆ ಧಾನ್ಯಗಳನ್ನು ಸಂರಕ್ಷಿಸುವ ರೀತಿಯಲ್ಲೇ, ಮಳೆಗಾಲದಲ್ಲಿ ಪ್ರತಿ ಹನಿ ನೀರನ್ನೂ ಉಳಿಸಿಕೊಳ್ಳಬೇಕು. ನೀರಿನ ರಕ್ಷಣೆಗಾಗಿ ಪ್ರತಿಯೊಬ್ಬರೂ ಜಲ ಯೋಧರ ರೀತಿ ಕಾರ್ಯನಿರ್ವಹಿಸಬೇಕು ಎಂದವರು ಕಿವಿಮಾತು ಹೇಳಿದರು.
    ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮಿ ಸಂಸ್ಥೆಯ ಸಂಚಾಲಕಿ ಸುವರ್ಣ ದೊಡ್ಡಮನಿ, ಭೂಮಿಯ ಮೇಲೆ ಲಭ್ಯವಿರುವ ನೀರಿನ ಪೈಕಿ ಶೇ.3ರಷ್ಟು ಮಾತ್ರ ಕುಡಿಯಲು ಯೋಗ್ಯ. ಈ ನೀರಿನಲ್ಲೂ ಶೇ.1.2ರಷ್ಟು ಮಾತ್ರ ನದಿಗಳಲ್ಲಿದೆ. ಉಳಿದದ್ದು ಮಂಜುಗಡ್ಡೆ ಸ್ವರೂಪದಲ್ಲಿದೆ. ಹೀಗಾಗಿ ಸೀಮಿತ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ ಎಂದರು.
    ವಾಲ್ಮಿ ಸಂಸ್ಥೆಯ ಉಪನ್ಯಾಸಕ ಪ್ರೊ. ಜಿ. ಭೀಮಾನಾಯಕ್ ಮಾತನಾಡಿ, ದೇಶದಲ್ಲಿ 18 ಕೋಟಿ ಮನೆಗಳಿವೆ. ನೀರಿನ ಕೊರತೆಯಿಂದಾಗಿ ದೇಶದ ಕೋಟ್ಯಂತರ ಮನೆಗಳಿಗೆ ನಲ್ಲಿ ನೀರು ತಲುಪಿಲ್ಲ ಎಂದು ಹೇಳಿದರು.
    ಯು.ಬಿ.ಡಿ.ಟಿ. ಕಾಲೇಜಿನ ಪ್ರಾಂಶುಪಾಲ ಡಿ.ಪಿ. ನಾಗರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಡೀನ್ ಡಾ. ಕೆ. ಮಂಜುನಾಥ, ಯು.ಬಿ.ಡಿ.ಟಿ. ಸಿವಿಲ್ ವಿಭಾಗದ ಮುಖ್ಯಸ್ಥೆ ಎಚ್. ಈರಮ್ಮ, ವಾಲ್ಮಿ ಸಹಾಯಕ ಉಪನ್ಯಾಸಕ ಹನುಮಂತಪ್ಪ, ಯು.ಬಿ.ಡಿ.ಟಿ. ಸಹಾಯಕ ಉಪನ್ಯಾಸಕಿ ತೇಜಸ್ವಿನಿ ಭಾಗವತ್, ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಾಳೆ, ವಾಲ್ಮಿ ಸಹ ಉಪನ್ಯಾಸಕ ಬಸವರಾಜ ಎಚ್. ಪೂಜಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts