More

    ಹೆಕ್ಟೇರ್​ಗೆ 35 ಸಾವಿರ ರೂ. ಪರಿಹಾರ ನೀಡಿ

    ಗದಗ: ಬೆಳೆ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ರೈತ ಸೇನಾ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

    ರೈತ ಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ‘2019-20ನೇ ಸಾಲಿನಲ್ಲಿ ಅತಿವೃಷ್ಠಿಯಿಂದ ಬೆಳೆಗಳು ಹಾಳಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಲ್ಲದೆ, ಪ್ರಸಕ್ತ ವರ್ಷ ಕರೊನಾ ವೈರಸ್​ನಿಂದ ರೈತರು ಆರ್ಥಿಕವಾಗಿ ಮತ್ತಷ್ಟು ಕುಸಿದಿದ್ದರಿಂದ ಬದುಕು ಸಾಗಿಸುವುದೇ ಸವಾಲಾಗಿದೆ. ಆದ್ದರಿಂದ ಪ್ರತಿ ರೈತರಿಗೆ 2 ಲಕ್ಷ ರೂ. ವರೆಗೆ ಸಾಲ ಮನ್ನಾ ಮಾಡಬೇಕು. ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾಗಿರುವ ರೈತರಿಗೆ ಪ್ರತಿ ಹೆಕ್ಟೇರ್​ಗೆ 35 ಸಾವಿರ ರೂ. ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

    2017-18ನೇ ಸಾಲಿನ ಬೆಳೆ ಹಾನಿ ಪರಿಹಾರ ನೀಡಿಲ್ಲ. ಬೆಳೆ ಹಾನಿ ಪರಿಹಾರದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಬಳಿಕ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರಿಗೆ ಮನವಿ ಸಲ್ಲಿಸಲಾಯಿತು.

    ಸಂಘಟನೆ ಪದಾಧಿಕಾರಿಗಳಾದ ಅಂದಾನಗೌಡ ಪಾಟೀಲ, ವೀರಬಸಪ್ಪ ಹೂಗಾರ, ಫಕೀರಪ್ಪ ಜೋಗಣ್ಣವರ, ಮಲ್ಲಣ್ಣ ಅಲೇಕಾರ, ಗುರು ರಾಯನಗೌಡರ, ಸಿದ್ಧಲಿಂಗೇಶ ದರನಗೌಡ, ಕಿರಣ ಪಾಟೀಲ ಇತರರಿದ್ದರು.

    ಹೆಸರುಕಾಳು ಖರೀದಿ ಕೇಂದ್ರಕ್ಕಾಗಿ ಪ್ರಸ್ತಾವ ಸಲ್ಲಿಕೆ

    ಗದಗ: ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿಸಲು ಖರೀದಿ ಕೇಂದ್ರ ಆರಂಭಿಸಬೇಕು ಎಂದು ರಾಜ್ಯ ಸರ್ಕಾರ ಗುರುವಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ಆಗಸ್ಟ್ 10ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ನಿರ್ಣಯದಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 92,877 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಪ್ರತಿ ಹೆಕ್ಟೇರ್​ಗೆ 6 ಕ್ವಿಂಟಾಲ್​ನಂತೆ ಒಟ್ಟು 56 ಸಾವಿರ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ. ಜಿಲ್ಲೆಯಾದ್ಯಂತ ಹೆಸರು ಉತ್ಪನ್ನ ಕೊಯ್ಲು ಆರಂಭವಾಗಿದ್ದು, ಗದಗ, ಮುಂಡರಗಿ, ನರಗುಂದ, ರೋಣ, ಹೊಳೆಆಲೂರ ಹಾಗೂ ಲಕ್ಷ್ಮೇಶ್ವರ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಎಫ್​ಎಕ್ಯೂ ಗುಣಮಟ್ಟದ ಹೆಸರು ಉತ್ಪನ್ನವನ್ನು ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲು ಖರೀದಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ. ಎಫ್​ಎಕ್ಯೂ ಗುಣಮಟ್ಟದ ಹೆಸರು ಪ್ರತಿ ಕ್ವಿಂಟಾಲ್​ಗೆ 7,196 ರೂ. ಕನಿಷ್ಟ ಬೆಂಬಲ ಬೆಲೆ (ಎಂಎಸ್​ಪಿ) ಗಿಂತ ಕಡಿಮೆ ಬೆಲೆ ಇದೆ. ಹೀಗಾಗಿ ಮಾರುಕಟ್ಟೆ ಬೆಲೆ ಕುಸಿದಿರುವುದರಿಂದ ಜಿಲ್ಲೆಯ ರೈತರು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಬೇಡಿಕೆ ಇದೆ. ಜಿಲ್ಲೆಯ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಅನಾಮಧೇಯ ಬೀಜಗಳಿಂದ ಎಚ್ಚರ

    ಗದಗ: ಜಿಲ್ಲೆಯ ರೈತರಿಗೆ ಅನಧಿಕೃತ, ಅನಾಮಧೇಯ ಮೂಲಗಳಿಂದ ಬರುವ ಬೀಜ, ಪೊಟ್ಟಣಗಳ ಪಾರ್ಸಲ್​ಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಬಾರದು. ಸಂಶಯಾಸ್ಪದ ಬೀಜದ ಪೊಟ್ಟಣಗಳ ಪಾರ್ಸಲ್​ಗಳನ್ನು ಹತ್ತಿರದ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಇಲ್ಲವೇ ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ. ಎಸ್.್ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೆ ಅನಾಮಧೇಯ ವ್ಯಕ್ತಿಗಳಿಂದ ಹಾಗೂ ಮೂಲಗಳಿಂದ ಬೀಜಗಳ ಪೊಟ್ಟಣಗಳು ಪಾರ್ಸಲ್ ಬಂದಿಲ್ಲ. ಒಂದು ವೇಳೆ ಇಂತಹ ಅನಾಮಧೇಯ ಬೀಜಗಳ ಪೊಟ್ಟಣಗಳು ಕಂಡುಬಂದರೆ ಕೃಷಿ ಇಲಾಖೆ ಇಲ್ಲವೇ ಪೊಲೀಸ್ ಇಲಾಖೆಗೆ ತಿಳಿಸಬೇಕು. ರೈತರು ಪ್ರಮಾಣೀಕೃತ, ನಂಬಿಕೆಯ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಬೇಕು ಎಂದು ತಿಳಿಸಿದ್ದಾರೆ. ಅನಾಮಧೇಯ ವ್ಯಕ್ತಿ ಹಾಗೂ ಮೂಲಗಳಿಂದ ರೈತರಿಗೆ ಬೀಜಗಳ ಪೊಟ್ಟಣಗಳು ಬರುತ್ತಿರುವ ಬಗ್ಗೆ ಕೇಂದ್ರ ಸರ್ಕಾರದಿಂದ ಪತ್ರ ಬಂದಿದ್ದು, ಈ ಬಗ್ಗೆ ರೈತರು ಜಾಗೃತರಾಗಿ, ಅವುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮುಂಗಾರು ಬೆಳೆ ಸಮೀಕ್ಷೆಗೆ ಸಲಹೆ

    ಗದಗ: 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ರೈತರ ಬೆಳೆ ಸಮೀಕ್ಷೆ ಆಪ್ ಮೂಲಕ ತ್ವರಿತವಾಗಿ ದಾಖಲಿಸಬೇಕು. ಇದರಿಂದ ರೈತರಿಗೆ ಅನುಕೂಲ ಆಗಲಿದ್ದು, ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹದ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಹಾಗೂ ಬೆಳೆಸಾಲ ಪಡೆಯಲು ನೆರವಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts