More

    ಹೂಳು ತುಂಬಿಕೊಂಡ ಬಾಂದಾರ

    ಲಕ್ಷ್ಮೇಶ್ವರ: ಅಂತರ್ಜಲ ವೃದ್ಧಿಸಲು ಹರಿಯುವ ನೀರು ತಡೆದು ತಾಲೂಕಿನಲ್ಲಿನ ಹಳ್ಳಗಳಿಗೆ ಅಡ್ಡವಾಗಿ ನಿರ್ವಿುಸಿದ ಬಾಂದಾರಗಳಲ್ಲಿ ಈಗ ಹೂಳು ತುಂಬಿ, ಆಳೆತ್ತರ ಹುಲ್ಲು ಬೆಳೆದಿದೆ. ಇದರಿಂದ ಸರ್ಕಾರದ ಉದ್ದೇಶ ಈಡೇರದೆ ಜನರಿಗೆ ಉಪಯೋಗವೂ ಆಗದಂತಾಗಿದೆ.

    ತಾಲೂಕಿನಾದ್ಯಂತ ಕಳೆದ ಐದು ವರ್ಷಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 57, ಕೃಷಿ ಇಲಾಖೆಯಿಂದ 22, ಜಿಪಂನಿಂದ 190 ಬಾಂದಾರಗಳು ನಿರ್ವಣಗೊಂಡಿವೆ. ತಾಲೂಕಿನ ಬಟ್ಟೂರ, ಬಡ್ನಿ, ದೊಡ್ಡೂರು, ತಾರಿಕೊಪ್ಪ, ಆದ್ರಳ್ಳಿ, ಶ್ಯಾಬಳ, ಉಂಡೇನಹಳ್ಳಿ, ಆದ್ರಳ್ಳಿ, ಯಳವತ್ತಿ, ಮಾಢಳ್ಳಿ, ಸೂರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಹಳ್ಳಗಳಿಗೆ ಬಾಂದಾರ ನಿರ್ವಿುಸಲಾಗಿದೆ. ಪ್ರಾರಂಭದಲ್ಲಿ ಬಾಂದಾರಗಳು ತುಂಬಿದ್ದರಿಂದ ಸಾಕಷ್ಟು ರೈತರ ಕೊಳವೆಬಾವಿಗಳು ಮರುಪೂರಣಗೊಂಂಡು ಜನ-ಜಾನುವಾರುಗಳಿಗೆ ಅನುಕೂಲವಾಗಿತ್ತು.

    ಸಣ್ಣ ನೀರಾವರಿ ಇಲಾಖೆಯಿಂದ ಲಕ್ಷ್ಮೇಶ್ವರ ತಾಲೂಕಿನ ಗೊಜನೂರಿನಿಂದ ಸಂಕದಾಳವರೆಗಿನ ದೊಡ್ಡ ಹಳ್ಳಕ್ಕೆ 12 ಕೋಟಿ ರೂ. ವೆಚ್ಚದಲ್ಲಿ 18 ಸರಣಿ ಬಾಂದಾರಗಳನ್ನು ನಿರ್ವಿುಸಲಾಗಿದೆ. ಈ ಪೈಕಿ ಕೆಲವು ಮಳೆಯಿಂದ ಕೊಚ್ಚಿ ಹೋಗಿದ್ದರೆ, ಇನ್ನುಳಿದವು ಹೂಳು ತುಂಬಿ, ಆಳೆತ್ತರ ಹುಲ್ಲು (ಆಪು) ಬೆಳೆದಿದೆ.

    ಬಾಂದಾರ ನಿರ್ವಿುಸಿದ ನಂತರ ಸಣ್ಣ ನೀರಾವರಿ, ಕೃಷಿ ಇಲಾಖೆ, ಜಿಪಂ ಇತ್ತ ಗಮನಹರಿಸಿಲ್ಲ. ಕಿತ್ತು ಹೋದ ಬಾಂದಾರಗಳ ಮರು ನಿರ್ವಣವೂ ಆಗಿಲ್ಲ. ಈಗ ಈ ಬಾಂದಾರಗಳಿಗೆ ಹೊಂದಿಕೊಂಡ ಜಮೀನುಗಳ ರೈತರಿಗೆ ಅನುಕೂಲಕ್ಕಿಂತ ಹಾನಿಯೇ ಹೆಚ್ಚಾಗಿದೆ.

    ಬಾಂದಾರ ನಿರ್ಮಾಣ ಸಂದರ್ಭದಲ್ಲಿ ನಮ್ಮ ಅಲ್ಪಸ್ವಲ್ಪ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಆದರೀಗ ಬಾಂದಾರಗಳಲ್ಲಿ ಹೂಳು, ಹುಲ್ಲು, ಕಸಕಡ್ಡಿ ತುಂಬಿ ಹನಿ ನೀರು ನಿಲ್ಲದಂತಾಗಿವೆ. ಕೆಲ ಬಾಂದಾರಗಳು ಒಡೆದು ಜಮೀನು ಕೊಚ್ಚಿ ಹೋಗಿದೆ. ಸಂಬಂಧಪಟ್ಟವರಿಗೆ ಅನೇಕ ಬಾರಿ ವಿನಂತಿಸಿದ್ದರೂ ಪ್ರಯೋಜನವಾಗಿಲ್ಲ. ಸದ್ಯ ನಿಲ್ಲುವ ನೀರು ಕೊಳಚೆಯಂತಾಗಿದ್ದು, ಬಳಸಿದರೆ ಮೈ-ಕೈ ತುರಿಕೆಯುಂಟಾಗುತ್ತದೆ. ಎಲ್ಲ ಬಾಂದಾರಗಳನ್ನು ಸ್ವಚ್ಛಗೊಳಿಸಬೇಕು.

    | ನಿಂಗಪ್ಪ ಹರಿಜನ, ನಿಂಗಪ್ಪ ಬಟ್ಟೂರ

    ಬಟ್ಟೂರ ರೈತರು

    2021-22ನೇ ಸಾಲಿನ ಬಜೆಟ್​ನಲ್ಲಿ ಬಾಂದಾರ ದುರಸ್ತಿ ಮತ್ತು ಹೂಳೆತ್ತುವ ಕಾರ್ಯಕ್ಕೆ ಅನುದಾನ ಮೀಸಲಿರಿಸುವಂತೆ ಹಿರಿಯ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಕೋರಲಾಗಿದೆ. ಬಾಂದಾರಗಳಿರುವ ವ್ಯಾಪ್ತಿಯ ಗ್ರಾಪಂಗಳಿಗೆ ಹೂಳೆತ್ತುವ ಕಾರ್ಯ ಕೈಗೊಳ್ಳುವಂತೆ ತಾಪಂ ಇಒಗೆ ಮನವಿ ಸಲ್ಲಿಸಲಾಗುವುದು.

    | ಗಣಪತ್​ಸಿಂಗ್

    ಸಣ್ಣ ನೀರಾವರಿ ಇಲಾಖೆ ಎಇ

    ಬಾಂದಾರಗಳ ಹೂಳು ತೆಗೆಸಲು ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒಗಳಿಗೆ ಸೂಚಿಸಲಾಗುವುದು. ಸದ್ಯ ಬಾಂದಾರದಲ್ಲಿ ನೀರಿದ್ದು ನರೇಗಾ ಯೋಜನೆಯಡಿ ಬೇಸಿಗೆಯಲ್ಲಿ ಬಾಂದಾರಗಳನ್ನು ಹೂಳೆತ್ತಲಾಗುವುದು.

    | ಆರ್.ವೈ. ಗುರಿಕಾರ

    ಲಕ್ಷ್ಮೇಶ್ವರ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts