More

    ಹುಬ್ಬಳ್ಳಿ-ಧಾರವಾಡದಲ್ಲಿ ಫುಟ್​ಪಾತ್ ಅತಿಕ್ರಮಣ ತೆರವು

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ/ಧಾರವಾಡ

    ಅವಳಿ ನಗರದ ವಿವಿಧೆಡೆ ಮಹಾನಗರ ಪಾಲಿಕೆಯಿಂದ ಮಂಗಳವಾರ ಏಕಕಾಲಕ್ಕೆ ಫುಟಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಯಿತು. ಹು-ಧಾ ಮಹಾನಗರ ಪಾಲಿಕೆಯ ಆಯಾ ವಲಯ ಕಚೇರಿಗಳ ಅಧಿಕಾರಿಗಳು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿ ನೂರಾರು ಡಬ್ಬಿ ಅಂಗಡಿಗಳನ್ನು ತೆರವುಗೊಳಿಸಿದರು. ರಸ್ತೆ ಬದಿ, ಫುಟಪಾತ್ ಮೇಲೆ ಇಟ್ಟುಕೊಂಡಿದ್ದ ಡಬ್ಬಿ ಅಂಗಡಿಗಳನ್ನು ಟ್ರ್ಯಾಕ್ಟರ್​ಗಳಲ್ಲಿ ಹಾಕಿಕೊಂಡು ಬೇರೆಡೆ ಸಾಗಿಸಿದರು.

    ಹುಬ್ಬಳ್ಳಿಯಲ್ಲಿ ಕೇಶ್ವಾಪುರದ ಕುಸುಗಲ್ ಮುಖ್ಯರಸ್ತೆ, ಸುಳ್ಳ ಮುಖ್ಯರಸ್ತೆ, ಹಳೇ ಹುಬ್ಬಳ್ಳಿ ದುರ್ಗಬೈಲ್ ವೃತ್ತ, ಭೈರಿದೇವರಕೊಪ್ಪ, ಶ್ರೀನಗರ, ಉಣಕಲ್ ಕೆರೆ ಎದುರು, ಎಪಿಎಂಸಿ, ಅಮರಗೋಳ, ಆರ್​ಟಿಒ ಕಚೇರಿ ಬಳಿ ಅಂಗಡಿಗಳನ್ನು ತೆರವುಗೊಳಿಸಲಾಯಿತು. ದೇಶಪಾಂಡೆನಗರ ಗುಜರಾತ್ ಭವನ ಎದುರು ತರಕಾರಿ ಮಾರಾಟಗಾರರನ್ನು ತೆರವುಗೊಳಿಸಿದರು. ಸಿಬಿಟಿ, ಶಹಾ ಬಜಾರ್ ಪ್ರದೇಶದಲ್ಲಿ ಕಟ್ಟಡಕ್ಕೆ ಹೊಂದಿಕೊಂಡು ನಿರ್ಮಾಣ ಮಾಡಲಾಗಿದ್ದ ಶೆಡ್, ಸೀಟ್​ಗಳನ್ನು ಅಂಗಡಿಕಾರರೇ ತೆರವು ಮಾಡಿದರು.

    ಧಾರವಾಡದ ಜುಬಿಲಿ ವೃತ್ತ, ಅಂಜುಮನ್ ಕಾಂಪ್ಲೆಕ್ಸ್, ರೈಲ್ವೆ ಸ್ಟೇಷನ್ ರಸ್ತೆ ಮತ್ತಿತರೆಡೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅಂದಾಜು 50 ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು. ಕಾರ್ಯಾಚರಣೆ ವೇಳೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ನೋಟಿಸ್ ನೀಡದೇ ಏಕಾಏಕಿ ಅಂಗಡಿಗಳನ್ನು ತೆರವು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಕೇಶ್ವಾಪುರ ಹಾಗೂ ಧಾರವಾಡದಲ್ಲಿ ಕೆಲವರು ತಗಾದೆ ತೆಗೆದು ಪ್ರತಿಭಟನೆಗೆ ಮುಂದಾದರು. ಅಲ್ಲದೆ, ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದೂ ಆಗ್ರಹಿಸಿದರು. ಆದರೆ, ಪಾಲಿಕೆ ಅಧಿಕಾರಿಗಳು ಅದ್ಯಾವುದಕ್ಕೆ ಕಿವಿಗೊಡದೇ ಕಾರ್ಯಾಚರಣೆ ನಡೆಸಿದರು. ಗೂಡಂಗಡಿಕಾರರು ಫುಟಪಾತ್ ಅತಿಕ್ರಮಣ ಮಾಡಿಕೊಂಡಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ಹೀಗಾಗಿ ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅಧಿಕಾರಿಗಳ ಸಭೆ ನಡೆಸಿ ಫುಟಪಾತ್ ಅತಿಕ್ರಮಣ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts