More

    ಹುಬ್ಬಳ್ಳಿಯಲ್ಲಿ ಮತ್ತೆ ಗರ್ಜಿಸಿದ ಜೆಸಿಬಿಗಳು

    ಹುಬ್ಬಳ್ಳಿ; ನಗರದ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಅತಿಕ್ರಮಿಸಿ, ಪಾಲಿಕೆ ಜಾಗ ಒತ್ತುವರಿ ಮಾಡಿಕೊಂಡು ಹಕ್ಕು ಸ್ಥಾಪಿಸಿಕೊಂಡಿದ್ದವರಿಗೆ ಬಿಸಿ ಮುಟ್ಟಿಸುವ ಕಾರ್ಯಾಚರಣೆಯನ್ನು ಇತ್ತೀಚೆಗೆ ಆರಂಭಿಸಿರುವ ಧಾರವಾಡ ಜಿಲ್ಲಾಡಳಿತ, ಮಂಗಳವಾರವೂ ಮುಂದುವರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸ್ವತಃ ಉಪಸ್ಥಿತರಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್​ನಲ್ಲಿ ಕಾರ್ಯಾಚರಣೆ ನಡೆಸಲಾಯಿತು.

    ಸಂಜೆ 5 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿಯವರು ಯಾವುದೇ ಪೂರ್ವ ಮಾಹಿತಿ ನೀಡದೆ ಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ಪ್ರತ್ಯಕ್ಷರಾಗಿದ್ದರು. ಪೊಲೀಸ್, ಪಾಲಿಕೆ, ಭೂಮಾಪನ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಅವರು ಜತೆಗಿದ್ದರು. ದುರ್ಗದಬೈಲ ಪ್ರದೇಶದ ರಸ್ತೆ, ಶಹಾಬಜಾರ್​ನಿಂದ ದುರ್ಗದಬೈಲ್ ರಸ್ತೆ ಮತ್ತು ಶಹಾಬಜಾರ್​ನಿಂದ ತಬೀಬಲ್ಯಾಂಡ್ ಮುಖ್ಯ ರಸ್ತೆ ಹಾಗೂ ಇದಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಅಂದಾಜು ಮೂರು ಗಂಟೆ ಕಾಲ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದರು.

    ಜೆಸಿಬಿ ಗರ್ಜನೆ ಸಂಜೆ ಆರಂಭವಾಗಿದ್ದರಿಂದ ಹೆಚ್ಚೆಂದರೆ ಅರ್ಧ ಗಂಟೆ ಕೆಲಸ ನಡೆಸಿ ಅಧಿಕಾರಿಗಳ ತಂಡ ವಾಪಸಾಗುತ್ತದೆ ಎಂದು ಹೆಚ್ಚಿನವರು ಭಾವಿಸಿದಂತೆ ಇತ್ತು. ಆದರೆ, ಸಂಜೆ 5 ಗಂಟೆಗೆ ಆರಂಭವಾದ ತೆರವು ಕಾರ್ಯಾಚರಣೆ ರಾತ್ರಿ 8 ಗಂಟೆಯಾದರೂ ಮುಗಿದಿರಲಿಲ್ಲ. ಮೂರು ಕಿ.ಮೀ.ನಷ್ಟು ರಸ್ತೆಯ ಇಕ್ಕೆಲದಲ್ಲಿ ಫುಟ್​ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಅಂದಾಜು 50 ಡಬ್ಬಾ ಅಂಗಡಿ, ಗೂಡಂಗಡಿ, ಒತ್ತುವರಿ ಮಾಡಿ ನಿರ್ವಿುಸಿದ್ದ ಮೆಟ್ಟಿಲುಗಳು, ಅನಧಿಕೃತವಾಗಿ ರಸ್ತೆ ಮೇಲೆ ಅಳವಡಿಸಿದ್ದ ಅಂಗಡಿ, ಮುಂಗಟ್ಟುಗಳ ನಾಮಫಲಕಗಳನ್ನು ತೆರವುಗೊಳಿಸಲಾಯಿತು.

    ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪ ಪೊಲೀಸ್ ಆಯುಕ್ತ ಆರ್.ಬಿ. ಬಸರಗಿ, ಹುಬ್ಬಳ್ಳಿ ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ನಗರ ಭೂಮಾಪನ ಇಲಾಖೆ ಅಧಿಕಾರಿಗಳು, ಕಂದಾಯ, ಪಾಲಿಕೆ ಸಿಬ್ಬಂದಿ ಪಾಲ್ಗೊಂಡಿದ್ದರು.

    ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಶ್ಲಾಘನೆ: ರಸ್ತೆ ಹಾಗೂ ಸಾರ್ವಜನಿಕ ಜಾಗ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಮುಕ್ತ ಕಂಠದಿಂದ ಶ್ಲಾಘಿಸಿದೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಮಹಾನಗರ ಪಾಲಿಕೆ ಅಯುಕ್ತರಿಗೆ ಪತ್ರ ಬರೆದಿರುವ ಕೆಸಿಸಿಐ ಕಾರ್ಯದರ್ಶಿ ಅಶೋಕ ಗಡಾದ, ಒತ್ತುವರಿಯಿಂದ ಆಗುತ್ತಿರುವ ಕಿರಿಕಿರಿ ಕುರಿತು ಈ ಹಿಂದೆ ಸಂಸ್ಥೆಯಿಂದ ಪತ್ರವನ್ನೂ ಬರೆಯಲಾಗಿತ್ತು ಎಂದಿದ್ದಾರೆ. ಫುಟ್​ಪಾತ್​ಗಳಿಗೆ ಪೇವರ್ಸ್ ಅಳವಡಿಕೆ, ಇ- ಟಾಯ್ಲೆಟ್ ಮತ್ತಿತರ ಸೌಲಭ್ಯಗಳಿಂದ ಸ್ಮಾರ್ಟ್ ಸಿಟಿಯಾಗಿ ಬದಲಾಗುವ ಸಂದರ್ಭದಲ್ಲೇ ಅತಿಕ್ರಮಣ, ಫುಟ್​ಪಾತ್​ನಲ್ಲೇ ದಿಢೀರ್ ಅಂಗಡಿ ಮೇಲೇಳುವುದು ಇತ್ಯಾದಿಗಳು ಬೇಸರ ಮೂಡಿಸಿದ್ದವು. ಆದ್ದರಿಂದ ತೆರವು ಕಾರ್ಯಾಚರಣೆ ಪ್ರಾರಂಭಿಸಿರುವುದು ಅತ್ಯಂತ ಪ್ರಶಸ್ತವಾಗಿದೆ. ಇದು ಮುಂದುವರಿಯಬೇಕೆಂದು ಸಂಸ್ಥೆ ಅಪೇಕ್ಷಿಸುತ್ತದೆ ಎಂದು ತಿಳಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆಯವರು ಪರ್ಯಾಯ ಜಾಗ ಒದಗಿಸಲಿ. ಹಾಗೆಯೇ, ಟೆಂಡರ್ ಶ್ಯೂರ್ ರಸ್ತೆ ಪಕ್ಕದ ಸೈಕಲ್ ಪಾತ್ ಆ ಉದ್ದೇಶಕ್ಕಷ್ಟೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಒಮ್ಮೆ ತೆರವು ಕಾರ್ಯಾಚರಣೆ ನಡೆದಲ್ಲಿ ಮತ್ತೆ ಅತಿಕ್ರಮಣ ಆಗದಂತೆ ಹದ್ದಿನ ಕಣ್ಣಿಡಬೇಕು ಎಂದು ಕೆಸಿಸಿಐ ಒತ್ತಾಯಿಸಿದೆ.

    ಹುಬ್ಬಳ್ಳಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆ, ಪಾಲಿಕೆ ಜಾಗ ಒತ್ತುವರಿ ಆಗಿರುವುದನ್ನು ಸಂಪೂರ್ಣ ತೆರವುಗೊಳಿಸುವವರೆಗೂ ಕಾರ್ಯಾಚರಣೆ ಮುಂದುವರಿಯುತ್ತದೆ. | ನಿತೇಶ ಪಾಟೀಲ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts