More

    ಹುಣಸೂರಿನಲ್ಲಿ ದೈವಗಳ ಆರಾಧನೆ

    ಶಿವು ಹುಣಸೂರು: ಕರಾವಳಿಯ ಧಾರ್ಮಿಕ ಆರಾಧನಾ ಪದ್ಧತಿಗಳಲ್ಲಿ ಪ್ರಮುಖವಾಗಿರುವ ದೈವಗಳ ಪೂಜೆ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕಾಣಸಿಗುವುದು ಅಪರೂಪ. ಅಂತಹ ಅಪರೂಪದ ದೈವಗಳ ಆರಾಧನೆ ಹುಣಸೂರು ನಗರದಲ್ಲಿ ಕಳೆದ ಮೂರೂವರೆ ದಶಕಗಳಿಂದ ಸದ್ದಿಲ್ಲದೆ ನಡೆದಿದೆ.

    ನಗರದ ವಿ.ಪಿ. ಬೋರೆ ಬಡಾವಣೆಯ ಶ್ರೀ ಕಲ್ಲುರ್ಟಿ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ದೈವಗಳ ಆರಾಧನೆ ಮೂರು ದಶಕಗಳಿಂದ ನಡೆದಿದೆ. ಸಹೋದರರಾದ ಶ್ರೀನಿವಾಸ್, ಲೋಕೇಶ್ ಮತ್ತು ರಾಮಕೃಷ್ಣರ ಕುಟುಂಬ ಕಲ್ಲುರ್ಟಿ ದೈವದ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.

    ದೈವ ನೆಲೆಸಿದ್ದು ಹೇಗೆ?: 35 ವರ್ಷಗಳ ಹಿಂದೆ ಈ ಸಹೋದರರ ಅಜ್ಜಿ ಚಿಕ್ಕಾಡ್ಯ ಸಿದ್ದಮ್ಮ ಅವರು ತಮ್ಮ ಕುಟುಂಬದಲ್ಲಿ ಕಷ್ಟ-ಕೋಟಲೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಬೇಸತ್ತು ದೇವರ ಮೊರೆ ಹೋಗಿದ್ದರು. ಆ ವೇಳೆ ಮನೆಯ ಆಜುಬಾಜಿನಲ್ಲಿದ್ದ ಮುಸ್ಲಿಂ ಕುಟುಂಬವೊಂದು ಕೊಡಗಿನ ಬಳಿ ದೈವಗಣಗಳ ಆರಾಧನೆ ನಡೆದಿದ್ದು, ಅಲ್ಲಿಗೆ ಹೋಗಿ ಸಮಸ್ಯೆ ತಿಳಿಸಿದರೆ ಪರಿಹಾರ ಸಾಧ್ಯವೆಂದು ಸಲಹೆ ನೀಡಿದ್ದರು. ಅದರಂತೆ ಸಿದ್ದಮ್ಮ ಸೋಮವಾರಪೇಟೆಯ ಐಗೂರು, ಪಣಗುಬೈಲು ಮುಂತಾದ ಕಡೆ ಸಂಚರಿಸಿ ದೈವಗಳಿರುವ ಸ್ಥಳದಲ್ಲಿ ಅರ್ಚಕರ ಬಳಿ ಸಮಸ್ಯೆಯನ್ನು ನಿವೇದಿಸಿಕೊಂಡಾಗ ಅರ್ಚಕರು ಪ್ರಸಾದದೊಂದಿಗೆ ಹುಣಸೂರಿಗೆ ಬಂದು ಮನೆಯ ಬಳಿ ದೈವವೊಂದನ್ನು ಸ್ಥಾಪಿಸಿ ಕೊಟ್ಟು ಪೂಜೆ ಸಲ್ಲಿಸಲು ಸೂಚಿಸಿದ್ದರು.

    ಅದರಂತೆ ಸಿದ್ದಮ್ಮ ಮತ್ತವರ ಕುಟುಂಬ ತಮ್ಮ ಕುಟುಂಬಕ್ಕೆ ಸೀಮಿತವಾಗಿ ಕಲ್ಲುರ್ಟಿ ದೈವದ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದರು. ಸಿದ್ದಮ್ಮ ಅವರ ಕಾಲಾನಂತರ ಅವರ ಮೊಮ್ಮಕ್ಕಳಾದ ಈ ಮೂವರು ಸಹೋದರರು ಮೂಲದೈವದ ಬಳಿಯೇ ದೇವಾಲಯವೊಂದನ್ನು ನಿರ್ಮಿಸಿ ಐಗೂರು ಅರ್ಚಕರ ಸಲಹೆ ಸೂಚನೆಗಳಂತೆ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ.

    ನಂಬಿದವರನ್ನು ಕೈಬಿಡದ ದೈವ: ಕುಟುಂಬಕ್ಕೆ ಸೀಮಿತವಾಗಿದ್ದ ದೈವ ಬರಬರುತ್ತಾ ಸಾರ್ವಜನಿಕರ ದೈವವಾಗಿಯೂ ಪರಿವರ್ತಿತವಾಯಿತು. ಸಹೋದರರಲ್ಲಿ ಒಬ್ಬರಾದ ಲೋಕೇಶ್ ತಿಳಿಸುವಂತೆ, ಕುಟುಂಬದವರು ನಾವೆಲ್ಲರೂ ಸೇರಿ ಪೂಜೆ ಸಲ್ಲಿಸುವಾಗ ಸಾರ್ವಜನಿಕರೂ ಬಂದು ನೋಡಿ ಪ್ರಭಾವಗೊಂಡು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಅರುಹುತ್ತಿದ್ದರು. ನಾವು ದೈವದ ಮುಂದೆ ನಿಂತು ಪೂಜೆ ಸಲ್ಲಿಸಿ ಗಂಧಪ್ರಸಾದ ಕೊಟ್ಟು ಕಳುಹಿಸುತ್ತಿದ್ದೆವು. ನಂಬಿದ ಭಕ್ತರ ಇಷ್ಟಾರ್ಥಗಳನ್ನು ಶ್ರೀ ಕಲ್ಲುರ್ಟಿ ಪಾಷಾಣಮೂರ್ತಿ ದೈವ ನೆರವೇರಿಸುತ್ತಾ ಬಂದಿದೆ. ಮಕ್ಕಳಾಗದವರಿಗೆ ಸಂತಾನಾಭಿವೃದ್ಧಿ, ಮದುವೆ, ವ್ಯಾಪಾರ, ಮನಶಾಂತಿ… ಹೀಗೆ ಹಲವಾರು ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಭಕ್ತಿಭಾವದಿಂದ ದೈವಕ್ಕೆ ಪೂಜೆ ಸಲ್ಲಿಸಿ ನೀಡಿದ ಪ್ರಸಾದ ಭಕ್ತರ ಮನಕ್ಕೆ ನೆಮ್ಮದಿ ನೀಡುತ್ತಿದೆ ಎನ್ನುತ್ತಾರೆ. ಭಕ್ತರು, ದಾನಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ನೆರವಿನಿಂದ ದೈವಸ್ಥಾನಕ್ಕೆ ಸುಸಜ್ಜಿತ ಕಟ್ಟಡ ದೊರಕಿದೆ.

    5 ವರ್ಷದಿಂದ ಭೂತಕೋಲ ಆಚರಣೆ; ಕಳೆದ 5 ವರ್ಷಗಳಿಂದ ದೇವಾಲಯದ ಆವರಣದಲ್ಲಿ ಪ್ರತಿ ಶಿವರಾತ್ರಿಯ ಜಾಗರಣೆಯಂದು ದೈವ ಆರಾಧನೆಯ ಪದ್ಧತಿಯಲ್ಲಿ ಪ್ರಮುಖವಾದ ಭೂತಕೋಲ ಆಯೋಜಿಸಲಾಗುತ್ತಿದೆ. ದೈವಗಳ ನರ್ತನ ಸೇವೆಯನ್ನು ಭೂತಕೋಲ ಎಂದು ಕರೆಯಲಾಗುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದರೆ ತಾವು ನಂಬಿದ ದೈವಕ್ಕೆ ನರ್ತನ ಸೇವೆ ನೀಡುವುದಾಗಿ ಹರಕೆ ಹೊತ್ತಿರುತ್ತಾರೆ. ಅಂತೆಯೆ, ಐಗೂರಿನ ಅರ್ಚಕ ಧರ್ಮಪ್ಪ ಮತ್ತವರ ತಂಡ ಹುಣಸೂರಿಗೆ ಆಗಮಿಸಿ ರಾತ್ರಿಯಿಡೀ ಭೂತಕೋಲ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

    ಜನವೋ ಜನ…: ಕರಾವಳಿಯ ಭೂತಕೋಲ ಸಂಸ್ಕೃತಿಯನ್ನು ಬಿಂಬಿಸುವ ಮೂಲಕ ವಿಶ್ವಾದ್ಯಂತ ಮನೆ ಮಾತಾದ ‘ಕಾಂತಾರ’ ಸಿನಿಮಾ ಎಲ್ಲರ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಅದರ ಪ್ರಭಾವವೋ ಏನೋ ಎನ್ನುವಂತೆ ಫೆ.19ರ ಶಿವರಾತ್ರಿಯಂದು ಆಯೋಜನೆಗೊಂಡಿದ್ದ ಜೋಡಿ ದೈವಗಳಾದ ಶ್ರೀ ಕಲ್ಲುರ್ಟಿ ಪಾಷಾಣಮೂರ್ತಿ ಮತ್ತು ಶ್ರೀ ಕಲ್ಕುಡ ದೈವದ ಕೋಲದಲ್ಲಿ (ನರ್ತನ ಸೇವೆ) ಜನಸಾಗರವೇ ನೆರೆದಿತ್ತು. ನೆರೆದ ಭಕ್ತಗಣ ರಾತ್ರಿಯಿಡೀ ದೈವದ ನರ್ತನ ಕಂಡು ಸಂತಸಪಟ್ಟರು, ನಿಬ್ಬೆರಗಾದರು, ಭಕ್ತಿಪರವಶರಾದರು.

    ಪ್ರತಿಫಲಾಪೇಕ್ಷೆ ಹೊಂದಿಲ್ಲ: ನಮ್ಮ ಕುಟುಂಬಕ್ಕಾಗಿ ದೈವದ ಮೊರೆ ಹೋದ ನಾವು ಕುಟುಂಬ ವ್ಯಾಪ್ತಿಯಲ್ಲೇ ಆಚರಿಸಿಕೊಂಡು ಬಂದಿದ್ದೆವು. ಇದೀಗ ದೈವದ ಪ್ರಭಾವಳಿ ಸಾರ್ವಜನಿಕರಿಗೂ ತಿಳಿದ ಪರಿಣಾಮ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ಅವರ ಅಪೇಕ್ಷೆಯಂತೆ ಪೂಜೆ ಸಲ್ಲಿಸಿ ಪ್ರಸಾದ ನೀಡುತ್ತಿದ್ದೇವೆ. ದೇವಾಲಯಕ್ಕೆ ಭಕ್ತರು ನೀಡುವ ಧನಸಹಾಯ ದೇವಾಲಯದ ಅಭಿವೃದ್ಧಿಗಾಗಿ ಮತ್ತು ಶಿವರಾತ್ರಿಯ ಕಾರ್ಯಕ್ರಮಕ್ಕಾಗಿ ಬಳಸುತ್ತಿದ್ದೇವೆ. ಯಾವುದೇ ಪ್ರತಿಫಲಾಪೇಕ್ಷೆಯನ್ನಿಟ್ಟುಕೊಂಡು ಮಾಡುತ್ತಿಲ್ಲ, ಎಲ್ಲರಿಗೂ ಒಳಿತಾಗಲಿ.
    ರಾಮಕೃಷ್ಣ, ಅರ್ಚಕ, ಶ್ರೀ ಕಲ್ಲುರ್ಟಿ ಪಾಷಾಣಮೂರ್ತಿ ದೈವಸ್ಥಾನ, ಹುಣಸೂರು

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts