More

    ಹುಣಸಗಿ ಜನರಿಗೆ ಪಬ್ಲಿಕ್ ಗಾರ್ಡನ್ ನೋ ಯೂಸ್

    ಹುಣಸಗಿ: ಧೂಳು ತಿನ್ನುತ್ತಿರುವ ಆಸನಗಳು, ಒಣಗಿ ನಿಂತು ಯಾವ ಕ್ಷಣದಲ್ಲಾದರೂ ನೆಲಕಚ್ಚುವ ಸ್ಥಿತಿಯಲ್ಲಿರುವ ವೃಕ್ಷಗಳು, ಆಗಾಗ ಕಾಣಿಸಿಕೊಳ್ಳುವ ವಿಷ ಜಂತುಗಳು.

    ಈ ದೃಶ್ಯ ಕಂಡು ಬರುವುದು ಯಾವುದೋ ಕಾಡಿನಲ್ಲಿ ಅಲ್ಲ. ಪಟ್ಟಣದ ನಾರಾಯಣಪುರ ಮುಖ್ಯರಸ್ತೆ ಬಳಿಯ ಕೆಬಿಜೆಎನ್ಎಲ್ನ ಸಾರ್ವಜನಿಕ ಉದ್ಯಾನವನದಲ್ಲಿ. ಸತತ 2 ವರ್ಷದಿಂದ ಉದ್ಯಾನವನಕ್ಕೆ ಬೀಗ ಹಾಕಿದ ಕಾರಣ ನಿರ್ವಹಣೆ ಇಲ್ಲದೆ ಮರ-ಗಿಡಗಳು ಸಂಪೂರ್ಣ ಒಣಗಿದರೆ, ಇಲ್ಲಿನ ಆಸನಗಳು ಧೂಳು ತಿನ್ನುತ್ತಿವೆ. ಅಲ್ಲದೆ ಆಗಾಗ ವಿಷ ಜಂತುಗಳು ಸಹ ಕಾಣಿಸಿಕೊಳ್ಳುತ್ತಿವೆ.

    ಕೋವಿಡ್ ಮೊದಲ ಅಲೆ ಅಬ್ಬರಿಸಿದ ಸಂದರ್ಭದಲ್ಲಿ ಈ ಉದ್ಯಾನವನಕ್ಕೆ ಬೀಗ ಹಾಕಿದ್ದು, ಈವರೆಗೆ ತೆರೆದಿಲ್ಲ. ಈ ಮೊದಲು ಪಟ್ಟಣದ ಜನತೆ ಬೆಳಗ್ಗೆ ವಾಯು ವಿಹಾರಕ್ಕೆ ಬರುತ್ತಿದ್ದರು. ಸಂಜೆ ಬೇಸರ ಕಳೆಯಲು ಕುಟುಂಬ ಸಮೇತ ಬರುತ್ತಿದ್ದರು. ಅಲ್ಲದೆ ವೃದ್ಧರಿಗೆ ಯೋಗ, ಪ್ರಾಣಾಯಾಮ ಮಾಡಲು ಈ ಉದ್ಯಾನವನ ಸೂಕ್ತ ಸ್ಥಳವಾಗಿತ್ತು.

    ಇನ್ನೂ 2 ವರ್ಷದ ಹಿಂದೆ ನಿಗಮದಿಂದ 20 ಲಕ್ಷ ರೂ. ಖರ್ಚು ಮಾಡಿ ಉದ್ಯಾನವನದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಇದರ ನಿರ್ವಹಣೆಗಾಗಿ ಇಲ್ಲಿ ಸಿಬ್ಬಂದಿ ಇದ್ದಾರೆ. ಕಾವಲುಗಾರ, ಜಾಡಮಾಲಿ ಇದ್ದರೂ ಸಹ ಉದ್ಯಾನವನದ ಬೀಗ ತೆಗೆಯದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಅಲೆ ಕಡಿಮೆಯಾಗಿದ್ದು, ಉದ್ಯಾನವನದ ಬಾಗಿಲು ತೆರೆಯಿರಿ ಎಂದು ಅನೇಕ ಬಾರಿ ಸಾರ್ವಜನಿಕರು ನಿಗಮದ ಅಧಿಕಾರಿ ಮತ್ತು ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

    ಲಕ್ಷಾಂತರ ರೂ. ನೀರಿನಂತೆ ಖರ್ಚು ಮಾಡಿ ಇದೀಗ ಉದ್ಯಾನವನ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿರಿಸದಿರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ನಜರ್ ಹರಿಸಿ ಸಮಸ್ಯೆ ಬಗೆಹರಿಸುವುದು ಅವಶ್ಯ ಎನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts