More

    ಹಿರಿಯ ನಾಗರಿಕರ ವೇದಿಕೆಯ 5 ಬೇಡಿಕೆ ಈಡೇರಿಸುವೆ ಎಂದ ಕೆಎಂಶಿ

    ಹಾಸನ: ಹಿರಿಯ ನಾಗರಿಕರ ವೇದಿಕೆಯ 5 ಬೇಡಿಕೆಗಳಾದ ದಂತ ವೈದ್ಯಕೀಯ, ಅಲೈಡ್ ಕಾಲೇಜು, ಹಿಮ್ಸ್ ಕಟ್ಟಡಕ್ಕೆ ಸೋಲರ್ ವ್ಯವಸ್ಥೆ, ಏರ್ ಆಂಬ್ಯುಲೆನ್ಸ್ ಹಾಗೂ ಉತ್ತಮ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಸರ್ಕಾರದ ಗಮನ ಸೆಳೆದು ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇನೆ ಎಂದು ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದರು.

    ನಗರದ ಭಾರತ್ ಸ್ಕೌಟ್ ಆಂಡ್ ಗೈಡ್ಸ್ ಸಮುದಾಯ ಭವನದಲ್ಲಿ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಮತ್ತು ಭಾರತೀಯ ವೈದ್ಯರ ಸಂಘ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ, ಜನಪ್ರಿಯ ಆಸ್ಪತ್ರೆ, ಹಾಸನಾಂಬ ಡೆಂಟಲ್ ಕಾಲೇಜು, ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ, ಶ್ರೀ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ರೋಗ ಎದುರಿಸುವ ಶಕ್ತಿಯನ್ನು ರೋಗಿಗಳು ಹೊಂದಬೇಕು. ವೈದ್ಯರ ಸಲಹೆ ಪಡೆದರೆ ಯಾವುದೇ ಕಠಿಣ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದು ಎಂದರು.

    ಹಿರಿಯ ನಾಗರಿಕರ ವೇದಿಕೆ ವಿಸ್ತಾರಗೊಳ್ಳಬೇಕು. ಸಂಘಟನೆ ದೊಡ್ಡದಾಗಿ ಬೆಳೆದು ಜಿಲ್ಲೆ ಹಾಗೂ ಗ್ರಾಮಗಳ ಅಭಿವೃದ್ದಿಯ ಚಿಂತನೆ ಆಗಬೇಕು. ಅರಸೀಕೆರೆಯಲ್ಲಿ ವೇದಿಕೆ ಮಾಡಿಕೊಂಡಿಲ್ಲ. ಆದರೆ 150 ಜನ ಸೇರಿ ರೈಲ್ವೆ ನಿಲ್ದಾಣದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಅದಕ್ಕೆ ಅಂತಿಮ ರೂಪ ಕೊಡುತ್ತಾರೆ. ಅರಸೀಕೆರೆಯಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಬಗ್ಗೆ ಹೇಳಿದರು. ಫ್ಲೋರೈಡ್ ನೀರು ಕುಡಿದರೆ 18 ಕಾಯಿಲೆ ಬರುತ್ತವೆ ಎಂದು ಅದರ ಗಂಭೀರತೆ ತಿಳಿಸಿದರು. ಬಳಿಕ ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡಿದೆ. ಆಗ ಸಿದ್ದರಾಮಯ್ಯ ಅವರು 350 ಕೋಟಿ ರೂ. ಮಂಜೂರು ಮಾಡಿದರು. ಇದಕ್ಕೆಲ್ಲಾ ಕಾರಣರಾದವರು ಹಿರಿಯ ನಾಗರಿಕರು ಎಂದು ನೆನಪಿಸಿಕೊಂಡರು.

    ಡೆಂಟಲ್ ಕಾಲೇಜ ಅನ್ನು ಅರಸೀಕೆರೆ ಮತ್ತು ಹಾಸನಕ್ಕೆ ತರೋಣ. ನಾನು ಸಿಎಂ ಜತೆಗೆ ಮಾತನಾಡುತ್ತೇನೆ. ಅಲೈಡ್ ಕಾಲೇಜು ಹಾಸನಕ್ಕೆ ಬರಬೇಕು. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡೋಣ. ಸೋಲಾರ್ ಅಳವಡಿಸುವುದು ಸುಲಭ. ಅದಕ್ಕಾಗಿ ಸಂಸ್ಥೆಯನ್ನು ತೆರೆಯಲಾಗಿದೆ. ಒಂದು ಕ್ರೀಡಾಂಗಣದ ಜತೆಗೆ ಇನ್ನೊಂದು ಕ್ರೀಡಾಂಗಣ ಇಲ್ಲಿ ಇರಬೇಕಾಗಿತ್ತು. ಇಲ್ಲೊಂದು ಸ್ಟೇಡಿಯಂ ತರುತ್ತೇನೆ. ಜತೆಗೆ ಇಲ್ಲಿನ ಅಭಿವೃದ್ಧಿಗೆ ಪೂರಕ ಕೆಲಸ ಮಾಡುವುದಾಗಿ ಹೇಳಿದರು.

    ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಮಾತನಾಡಿ, ಹಿರಿಯ ನಾಗರಿಕರ ವೇದಿಕೆ ಪ್ರಾರಂಭ ಮಾಡಿದ ನಂತರ ದುದ್ದ ಹಾಸನ ರಸ್ತೆ ವಿಚಾರವಾಗಿ ಹೋರಾಟ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ಕೆಲಸ ಮಾಡಿಕೊಟ್ಟರು. ಬರಗಾಲದಿಂದ ಅಂತರ್ಜಲ ಕುಸಿದಾಗ ಸಂಘಟನೆಯವರೆಲ್ಲ ಸೇರಿ ಬೀದಿಗಿಳಿದೆವು. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ರೂ. ಕೊಟ್ಟರು. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಆಗಬೇಕೆಂದರೆ ಸಿದ್ದರಾಮಯ್ಯ ಅವರೇ ಬರಬೇಕಾಯಿತು ಎಂದರು.

    ಇದೇ ವೇಳೆ ತಜ್ಞ ವೈದ್ಯರಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ವೈ.ಎಸ್.ವೀರಭದ್ರಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣ, ವನಜಾಕ್ಷಿ, ಹಿಮ್ಸ್ ನಿರ್ದೇಶಕ ಡಾ.ಎಸ್.ವಿ. ಸಂತೋಷ್, ಡಾ. ಜಗದೀಶ್, ಹೇಮಾಲತಾ ಪಟ್ಟಾಬಿ, ಐಎಂಎ ಜಿಲ್ಲಾಧ್ಯಕ್ಷ ಡಾ. ಎಚ್.ಆರ್. ದೇವದಾಸ್, ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಡಾ. ಅಬ್ದುಲ್ ಬಷೀರ್, ಮಾಜಿ ಶಾಸಕ ಬಿ.ವಿ. ಕರೀಗೌಡ, ಡಾ.ಭಾರತಿ ರಾಜಶೇಖರ್, ಮಹಾಲಕ್ಷ್ಮೀ, ಡಾ. ಲೋಕೇಶ್, ಡಾ. ಯತೀಶ್, ಹನುಮಂತೇಗೌಡ, ಗಿರೀಶ್ ಇತರರು ಉಪಸ್ಥಿತರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts