More

    ಹಿಪ್ಪುನೇರಳೆಗೆ ಕೀಟ ಬಾಧೆ ; ತೇವಾಂಶ ಹೆಚ್ಚಳದಿಂದ ಕೆಂಪುತಲೆ ಹುಳು ಸಮಸ್ಯೆ

    ಚಿಕ್ಕಬಳ್ಳಾಪುರ: ರೇಷ್ಮೆಗೂಡಿಗೆ ಬೇಡಿಕೆ ಮತ್ತು ದರ ಹೆಚ್ಚಾಗಿರುವುದರ ನಡುವೆ ಜಿಲ್ಲೆಯಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ಕೆಂಪು ತಲೆ ಹುಳುವಿನ ಸಮಸ್ಯೆ ಕಾಡುತ್ತಿರುವುದು ಬೆಳೆಗಾರರನ್ನು ಚಿಂತೆಗೆ ದೂಡಿದೆ.

    ಕೀಟಬಾಧೆ ಸಾಮಾನ್ಯವಾಗಿ ಪ್ರತಿ ವರ್ಷ ತೇವಾಂಶ ಹೆಚ್ಚಳ ಮತ್ತು ಮಂಜಿನ ವಾತಾವರಣವಿರುವ ಸಂದರ್ಭದಲ್ಲಿ ಕಾಡುತ್ತದೆ. ಈಗಾಗಲೇ ಅತಿವೃಷ್ಟಿಗೆ ಹಲವೆಡೆ ರೇಷ್ಮೆತೋಟ ಕೊಳೆತು ಹಾಳಾಗಿದ್ದು, ಅಲ್ಪಸ್ವಲ್ಪ ಇರುವುದನ್ನು ಉಳಿಸಿಕೊಳ್ಳಲು ಬೆಳೆಗಾರರು ಕಸರತ್ತು ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೆಂಪು ತಲೆ ಹುಳು ಕಾಟವನ್ನೂ ಎದುರಿಸುವಂತಾಗಿದೆ.

    ಹುಳುಗಳು ನಿಧಾನವಾಗಿ ಎಲೆಯನ್ನು ತಿಂದು ಹಾಕುತ್ತಿವೆ. ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಅಗತ್ಯ ಔಷಧಗಳ ಸಿಂಪಡಣೆೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ, ಸೂಚನೆ ಪಾಲಿಸಿದರೂ ಹವಾಮಾನ ವೈಪರೀತ್ಯದಿಂದ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಕಟಾವಿನ ಸಂದರ್ಭದಲ್ಲಿ ಔಷಧ ಹೆಚ್ಚು ಸಿಂಪಡಿಸುವಂತಿಲ್ಲ. ಈ ಕಾರಣಕ್ಕೆ ಹುಳು ಬಾಧಿತ ಹಿಪ್ಪುನೇರಳೆ ಗಿಡದ ಕೊಂಬೆಯನ್ನು ಕಿತ್ತು ಹಾಕಿ, ಹುಳುವಿನ ಸಮೇತ ಮಣ್ಣಿನಲ್ಲಿ ಹೂಳಲಾಗುತ್ತಿದೆ. ಈ ಸಮಸ್ಯೆ ನವೆಂಬರ್ ಎರಡನೇ ವಾರದಿಂದ ಜನವರಿ ಅಂತ್ಯದವರೆಗೂ ತಪ್ಪುವುದಿಲ್ಲ ಎನ್ನುವುದು ರೈತರಲು ಅಳಲು.

    ಸೊಪ್ಪಿನ ದರ ಏರಿಕೆ: ಪ್ರಸ್ತುತ ಹಿಪ್ಪುನೇರಳೆ ಸೊಪ್ಪಿನ ದರ ಏರಿಕೆಯಾಗಿದೆ. ಕಳೆದ 15 ದಿನಗಳ ಹಿಂದೆ ಮೂಟೆ 300 ರಿಂದ 350 ರೂ.ಗಳಿಗೆ ಮಾರಾಟವಾಗುತ್ತಿತ್ತು. ಆದರೆ, ಇದೀಗ 400 ರಿಂದ 550 ರೂ.ಗೆ ಏರಿಕೆಯಾಗಿದೆ. ಮಳೆಯಿಂದ ಹಲವೆಡೆ ಸೊಪ್ಪು ನಾಶವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೇಷ್ಮೆ ಕೃಷಿಕರು ಹುಳು ಸಾಕಣೆಗೆ ದೇವನಹಳ್ಳಿ, ವಿಜಯಪುರ ಸೇರಿ ವಿವಿಧೆಡೆ ತೆರಳಿ ದುಬಾರಿ ದರಕ್ಕೆ ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ 16,218 ರೇಷ್ಮೆ ಬೆಳೆಗಾರರಿದ್ದು 14,158 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಸೊಪ್ಪನ್ನು ಬೆಳೆಯಲಾಗುತ್ತದೆ. ಆದರೆ, ಈಗ ಪೂರೈಕೆ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗಿದ್ದು ನೂರು ಮೊಟ್ಟೆ ರೇಷ್ಮೆಹುಳು ಸಾಕಲು ಕನಿಷ್ಠ 35 ಮೂಟೆಗಳ ಸೊಪ್ಪು ಅಗತ್ಯವಿದೆ. ಸೊಪ್ಪಿಗಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗವಂತಾಗಿದೆ.

    ಹುಳು ಸಮಸ್ಯೆ ನಿವಾರಣೆ: ಹಿಪ್ಪುನೇರಳೆ ಸೊಪ್ಪಿನಲ್ಲಿ ಹುಳು ಕಂಡು ಬಂದಾಗ 1.5 ಎಂ.ಎಲ್ ರೋಗಾರ್ ಔಷಧವನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. 25 ದಿನ ಬಿಟ್ಟು ರೇಷ್ಮೆ ಹುಳುವಿಗೆ ಸೊಪ್ಪು ಹಾಕಬೇಕು. ಒಳ್ಳೆಯ ಫಸಲು ಬಂದ ಸಂದರ್ಭದಲ್ಲಿ ಔಷಧ ಸಿಂಪಡನೆಗೆ ಬಳಕೆ ಮಿತಿ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

    ಜಿಲ್ಲೆಯಲ್ಲಿ ಅತಿವೃಷ್ಟಿಗೆ ಬೆಳೆ ನಾಶವಾಗಿರುವುದರ ನಡುವೆ ರೇಷ್ಮೆ ತೋಟದಲ್ಲಿ ಕೆಂಪು ತಲೆ ಹುಳುವಿನ ಸಮಸ್ಯೆ ಹೆಚ್ಚಾಗಿದೆ. ಹವಮಾನ ವೈಪರೀತ್ಯಕ್ಕೆ ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ನಷ್ಟ ಅನುಭವಿಸುವಂತಾಗಿದೆ.
    ಯಲುವಹಳ್ಳಿ ಮಂಜುನಾಥ್, ರೇಷ್ಮೆ ಕೃಷಿಕ

    ಪ್ರಸ್ತುತ ಅತಿವೃಷ್ಟಿ, ಹುಳು ಕಾಟ ಸೇರಿ ನಾನಾ ಸಮಸ್ಯೆಗಳಿಂದ ರೇಷ್ಮೆ ಸೊಪ್ಪು ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ದುಬಾರಿ ದರ ತೆತ್ತರೂ ಸಿಗುತ್ತಿಲ್ಲ.
    ಅಣಕನೂರು ರಮೇಶ್, ರೇಷ್ಮೆ ಕೃಷಿಕ

    ಹವಾಮಾನ ವೈಪರೀತ್ಯದಿಂದ ರೇಷ್ಮೆ ಸೇರಿದಂತೆ ಹಲವು ಬೆಳೆಗಳಿಗೆ ರೋಗ ಮತ್ತು ಕೀಟಬಾಧೆ ಸಮಸ್ಯೆ ಸಹಜವಾಗಿ ಕಾಡುತ್ತದೆ. ಇದಕ್ಕೆ ಸಕಾಲದಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು.
    ರಾಮಚಂದ್ರ, ರೇಷ್ಮೆ ಕೃಷಿ ವಿಜ್ಞಾನಿ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts