More

    ಹಿನ್ನೀರಿನಿಂದ ಮುಳುಗಡೆ ಭೀತಿ!

    ಮುಂಡರಗಿ: ಸಾಂಸ್ಕೃತಿಕ ನೆಲೆಬೀಡಾಗಿರುವ ತಾಲೂಕಿನಲ್ಲಿ ಪುರಾತನ, ಐತಿಹಾಸಿಕ ದೇವಾಲಯಗಳಿವೆ. ಈ ಪೈಕಿ ಎರಡು ಪ್ರಮುಖ ದೇವಾಲಯಗಳು ಸಿಂಗಟಾಲೂರ ಬ್ಯಾರೇಜ್​ನ ಹಿನ್ನೀರಿಗೆ ಮುಳುಗಡೆ ಆಗುತ್ತಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

    ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಕ್ರಿ.ಶ. 16ನೇ ಶತಮಾನದಲ್ಲಿ ವಿಜಯ ನಗರೋತ್ತರ ಶೈಲಿಯಲ್ಲಿ ಉತ್ತರಾಭಿಮುಖವಾಗಿ ನಿರ್ವಣಗೊಂಡ ಶ್ರೀ ಗೋಣಿಬಸವೇಶ್ವರ ದೇವಾಲಯ (ಮಠ) ಹಾಗೂ ಬಿದರಳ್ಳಿಯಲ್ಲಿ ಉದ್ಭವ ಮೂರ್ತಿ ಎನ್ನಲಾಗುತ್ತಿರುವ ಶ್ರೀ ರೇಣುಕಾದೇವಿ ದೇವಸ್ಥಾನ ಈಗ ಮುಳುಗಡೆ ಸ್ಥಿತಿಯಲ್ಲಿವೆ.

    ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ನಿರ್ವಿುಸಲಾಗಿದೆ. ಬ್ಯಾರೇಜ್ ಹಿನ್ನೀರಿಗೆ ತಾಲೂಕಿನ ಬಿದರಳ್ಳಿ, ಗುಮ್ಮಗೋಳ, ವಿಠಲಾಪುರ ಹಾಗೂ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿವೆ. ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ, ಈವರೆಗೂ ಈ ನಾಲ್ಕು ಗ್ರಾಮಗಳು ಸ್ಥಳಾಂತರಗೊಂಡಿಲ್ಲ. ಹೀಗಾಗಿ, ಸದ್ಯ 1.98 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಒಂದು ವೇಳೆ ನಾಲ್ಕು ಗ್ರಾಮಗಳು ಸ್ಥಳಾಂತರಗೊಂಡರೆ ಬ್ಯಾರೇಜ್​ನಲ್ಲಿ 3.12 ಟಿಎಂಸಿ ನೀರನ್ನು ಸಂಗ್ರಹಿಸಲಾಗುತ್ತದೆ. ಆಗ ಬ್ಯಾರೇಜ್​ನ ಹಿನ್ನೀರಿಗೆ ಗುಮ್ಮಗೋಳದ ಶ್ರೀ ಗೋಣಿಬಸವೇಶ್ವರ, ಬಿದರಳ್ಳಿ ಗ್ರಾಮದ ಶ್ರೀ ರೇಣುಕಾದೇವಿ ದೇವಸ್ಥಾನಗಳು ಮುಳುಗಡೆಯಾಗಲಿವೆ.

    ಸರ್ಕಾರ ಈ ಎರಡೂ ಪುರಾತನ ದೇವಾಲಯಗಳ ಸುತ್ತಲೂ ಕೂಡಲಸಂಗಮ ಮಾದರಿಯಲ್ಲಿ ತಡೆಗೋಡೆ ನಿರ್ವಿುಸಬೇಕು. ದರ್ಶನಕ್ಕೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು ಎಂಬುದು ಈ ಭಾಗದ ಭಕ್ತರ ಒತ್ತಾಯವಾಗಿದೆ.

    ಗೋಣಿಬಸವೇಶ್ವರ ದೇವಾಲಯ ಐತಿಹಾಸಿಕ ಪರಂಪರೆ ಹೊಂದಿದೆ. ಜೀವಂತ ಸಮಾಧಿ ಗದ್ದುಗೆಯ ಮಠ ಇದಾಗಿದೆ. ಸರ್ಕಾರ ಈ ಪರಂಪರೆ ಉಳಿಸಬೇಕು. ಪ್ರತಿವರ್ಷ ಜಾತ್ರೆ, ಕಾರ್ತಿಕೋತ್ಸವ ನಡೆಯುತ್ತದೆ. ನಿತ್ಯ ಭಕ್ತರು ದರ್ಶನ ಪಡೆಯುತ್ತಾರೆ. ಗೋಣಿಬಸವೇಶ್ವರರ 777 ಶಾಖಾಮಠಗಳಿವೆ. ಇವುಗಳಲ್ಲಿ ಇದೇ ಮೂಲ ಮಠ. ಸರ್ಕಾರ ಇದನ್ನು ಸಂರಕ್ಷಿಸಿ ಭಕ್ತರ ನಂಬಿಕೆ, ಪರಂಪರೆ ಉಳಿಸಬೇಕು.

    | ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಗುಮ್ಮಗೋಳ

    ಶ್ರೀ ರೇಣುಕಾದೇವಿ ದೇವಸ್ಥಾನ ಪುರಾತನ ಇತಿಹಾಸ, ಉದ್ಭವ ಮೂರ್ತಿ ಹೊಂದಿದೆ. ಉದ್ಭವ ಮೂರ್ತಿ ಸ್ಥಳಾಂತರಿಸುವುದು ಸರಿಯಲ್ಲ. ಅಪಾರ ಭಕ್ತ ಸಮೂಹ ಹೊಂದಿರುವ ದೇವಸ್ಥಾನ ಮುಳುಗಡೆಯಾಗದಂತೆ ಕೂಡಲಸಂಗಮ ಮಾದರಿಯಲ್ಲಿ ಸಂರಕ್ಷಿಸಬೇಕು.

    | ರವೀಂದ್ರಗೌಡ ಪಾಟೀಲ

    ಶ್ರೀ ರೇಣುಕಾದೇವಿ ದೇವಸ್ಥಾನ

    ಟ್ರಸ್ಟ್ ಕಮಿಟಿ ಅಧ್ಯಕ್ಷ

    ಶ್ರೀ ಗೋಣಿಬಸವೇಶ್ವರ, ಶ್ರೀ ರೇಣುಕಾದೇವಿ ದೇವಸ್ಥಾನ ಸಂರಕ್ಷಣೆ ಮಾಡಬೇಕೆನ್ನುವುದು ಭಕ್ತರ ಒತ್ತಾಸೆ. ಎರಡು ದೇವಾಲಯಗಳ ಸುತ್ತಲೂ ತಡೆಗೋಡೆ ನಿರ್ವಿುಸಿ ದರ್ಶನಕ್ಕೆ ಅನುಕೂಲವಾಗುವಂತೆ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಇದನ್ನು ಸಿಂಗಟಾಲೂರ ಏತ ನೀರಾವರಿ ಸಮಗ್ರ ಪರಿಷ್ಕೃತ ಯೋಜನಾ ವರದಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಸರ್ಕಾರದ ಅನುಮೋದನೆ ದೊರೆತ ಬಳಿಕ ಕೆಲಸ ಮಾಡಲಾಗುವುದು.

    | ವಿನಯ ಬಿ.ಎಂ.

    ಎಇಇ, ಪುನರ್ವಸತಿ ಪುನರ್ ನಿರ್ಮಾಣ ಉಪವಿಭಾಗ, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts