More

    ಹಿಂದುಳಿದ ಸಮಾಜದ ಹೋರಾಟಕ್ಕೆ ಸಿದ್ಧ  – ಕಾಗೋಡು ತಿಮ್ಮಪ್ಪ -ಲಂಬಾಣಿ ಸೇವಾ ಸಂಘದ ಸನ್ಮಾನ ಕಾರ್ಯಕ್ರಮ

    ದಾವಣಗೆರೆ: ನಾನು ಚಳವಳಿಗಳಿಂದಲೇ ಬಂದವನು. ಹಿಂದುಳಿದ ಸಮಾಜಗಳ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ, ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಹೇಳಿದರು.
    ಇಲ್ಲಿನ ಸರಸ್ವತಿ ಬಡಾವಣೆಯ ಬಂಜಾರ ದೇವಸ್ಥಾನ ಆವರಣದಲ್ಲಿ ಬಂಜಾರ ಸೇವಾ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಲಂಬಾಣಿ ತಾಂಡಾ ಸೇರಿ ಹಿಂದುಳಿದ ಸಮಾಜದ ಕಾಲನಿಗಳಲ್ಲಿ ಮೂಲ ಸೌಕರ್ಯಗಳ ಕೊರತೆಗಳಿದ್ದಲ್ಲಿ ಮುಖಂಡರು ನಿರ್ದಿಷ್ಟ ಪಟ್ಟಿ ಮಾಡಿ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಸಲ್ಲಿಸಿ. ಸರ್ಕಾರ ಸ್ಪಂದಿಸದಿದ್ದಲ್ಲಿ ನಿಮ್ಮೊಂದಿಗೆ ನಾನೂ ಹೋರಾಟಕ್ಕೆ ಇಳಿಯುವೆ ಎಂದು ಅಭಯ ಹೇಳಿದರು.
    ಸಮಾಜದಲ್ಲಿ ಬದಲಾವಣೆ ಆಗಬೇಕಾದರೆ ಹೋರಾಟ ಅಗತ್ಯ. ಅದಿಲ್ಲದೆ ಯಾವ ಕೆಲಸವೂ ಆಗದು. ಲಂಬಾಣಿ ಸಮಾಜದಲ್ಲಿ ಮನೆ, ಹಕ್ಕುಪತ್ರ, ಕುಡಿವ ನೀರು ಮೊದಲಾದ ಸೌಕರ್ಯಗಳ ಕೊರತೆಗಳಿರುವುದು ನನ್ನ ಗಮನಕ್ಕಿದೆ.
    ಜನಪ್ರತಿನಿಧಿಗಳು, ಮುಖಂಡರು ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಬೇಕು. ಕೇವಲ ದಾಖಲಾತಿಗಳ ಸಾಂಕೇತಿಕ ಪ್ರದರ್ಶನದಿಂದ ಪ್ರಯೋಜನವಿಲ್ಲ. ಜನರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟಕ್ಕಿಳಿಯಬೇಕು ಎಂದು ಸೂಚ್ಯವಾಗಿ ಹೇಳಿದರು.
    ಜನರು ಬದುಕಲಾಗದಂತಹ ಊರು, ನೆಲ ಇದ್ದರೆ ಈ ಹಿಂದೆ ಮಾಡಿದ ಕಾನೂನಿನ ಫಲವೇನು ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಾರ್ವಜನಿಕರಿಗೆ ನಿಜವಾದ ಹಕ್ಕು ಸಿಗದಿದ್ದಲ್ಲಿ ಕಾನೂನು ತಿದ್ದುಪಡಿ ಮಾಡಲೂ ಅವಕಾಶವಿದೆ ಎಂದು ಹೇಳಿದರು.
    ನಮ್ಮ ದೇಶ ಅನೇಕ ಜಾತಿ-ಧರ್ಮಗಳಿದ ಕೂಡಿದೆ. ಸಂಘಟಿತ ಹೋರಾಟ ಮಡಿದಾಗಲೇ ಅಭಿವೃದ್ಧಿ ಕಾಣಬಹುದು. ಕಂದಾಯ ಗ್ರಾಮಗಳ ಕುರಿತಾದ ಕಾನೂನಿನಲ್ಲಿ ಹಟ್ಟಿ ಎಂದಿದ್ದರೂ ಗೊಲ್ಲರಹಟ್ಟಿ, ಕೊರಚರ ಹಟ್ಟಿ ಎಲ್ಲದಕ್ಕೂ ಸಂಬಂಧಿಸಿದೆ. ಇಷ್ಟಕ್ಕೂ ಅಲ್ಲಿ ಸಮಸ್ಯೆಗಳು ಉಳಿದಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದರು.
    ಕಾಗೋಡು ಹೋರಾಟ, ಗೇಣಿದಾರರ ಪರ ಚಳವಳಿ ನಡೆಸಿದ್ದೇನೆ. ಗೋಪಾಲಗೌಡ, ಜಯಪ್ರಕಾಶ ನಾರಾಯಣ ಅವರೊಂದಿಗೆ ಬೆಳೆದುಬಂದಿದ್ದೇನೆ. ಹೋರಾಟದಿಂದಲೇ ಜನರಿಗೆ ನ್ಯಾಯ ಕೊಡಿಸಿದ್ದೇನೆ. ರಾಜಕೀಯದಲ್ಲಿ ಸೋಲಾಯಿತು. ಆದರೂ ಸಾರ್ವಜನಿಕರ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.
    ವಕೀಲ ಎನ್. ಜಯದೇವನಾಯ್ಕ ಮಾತನಾಡಿ ಬುದ್ದಿಜೀವಿ, ಚಿಂತಕ ಹಾಗೂ ಉತ್ತಮ ಮುಖಂಡರಿಗೆ ಈ ದೇಶದಲ್ಲಿ ರಾಜಕೀಯದ ಅವಕಾಶಗಳಿಲ್ಲ. ಇಂದಿನ ರಾಜಕೀಯ ಕಲುಷಿತವಾಗಿದೆ. ಪಕ್ಷ ಉಳಿಸಬೇಕು. ನಾನು ಅಧಿಕಾರದಲ್ಲಿರಬೇಕು ಎಂಬ ಎರಡೇ ಸಿದ್ಧಾಂತಗಳು ಎಲ್ಲ ಪಕ್ಷಗಳಲ್ಲೂ ಇವೆ ಎಂದು ಬೇಸರ ವ್ಯಕ್ತಪಡಿಸಿದರು.
    ಕಾಗೋಡು ತಿಮ್ಮಪ್ಪ ಅವರು ಹಾಡಿ, ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿಸಲು ಕಾಗೋಡು ತಿಮ್ಮಪ್ಪ ಶ್ರಮ ಹಾಕಿದರು. ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದರೂ ಇದು ಜಾರಿಗೆ ಬಂದಿಲ್ಲ. ಸ್ವತಃ ತಿಮ್ಮಪ್ಪ ಅವರು ಇಳಿವಯಸ್ಸಿನಲ್ಲೂ ಸಮಾಜದ ಸಮಸ್ಯೆಗಳಿಗೆ ಹೋರಾಡುವುದಾಗಿ ಹೇಳಿದ್ದಾರೆ. ಆದರೆ ಸಮುದಾಯಗಳು ಮಾತ್ರ ಹೊದ್ದು ಮಲಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕೆ.ಶಿವಮೂರ್ತಿ ಅವರು ಸಚಿವರಾದಾಗ ಲಂಬಾಣಿ ಸಮುದಾಯ ಬೆಳೆಯಬಹುದು ಎಂದುಕೊಂಡಿದ್ದೆವು. ಅವರು ರಾಜ್ಯದ ಸಿಎಂ ಆಗುವಷ್ಟು ಎತ್ತರಕ್ಕೆ ಬೆಳೆಯಬಹುದಾಗಿತ್ತು. ಆದರೆ ಹಾಗಾಗಲಿಲ್ಲ ಎಂದೂ ಹೇಳಿದರು.
    ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ ಕಂದಾಯ ಗ್ರಾಮಗಳ ಕುರಿತು ಕೆ. ಶಿವಮೂರ್ತಿ ಅವರ ಪ್ರಸ್ತಾವಕ್ಕೆ ಕಾಗೋಡು ತಿಮ್ಮಪ್ಪ ಜೀವ ತುಂಬಿದರು. ಅವರು ರೈತರು, ದಲಿತರ ಪರ ಸಮಸ್ಯೆ, ವಸತಿ ಹಕ್ಕು, ಅರಣ್ಯ ಹಕ್ಕು ಇತ್ಯಾದಿ ಹೋರಾಟಗಳಿಗೂ ವಿಧಾನಸಭೆ ಹೊರಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
    ಮಾಜಿ ಶಾಸಕ ಕೆ. ಶಿವಮೂರ್ತಿ ನಾಯ್ಕ, ಲಂಬಾಣಿ ಸಮಾಜದ ಮುಖಂಡ ನಂಜಾನಾಯ್ಕ, ಅರುಣ್ ನಾಯ್ಕ, ಸತೀಶ್‌ನಾಯ್ಕ, ಕಾವ್ಯಾ, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts