More

    ಹಾಸ್ಟೆಲ್ ಮಕ್ಕಳಿಗೆ ಶಾಲೆಯಲ್ಲಿ ವಾಸ್ತವ್ಯ!, ಶಿಥಿಲಗೊಂಡಿದೆ ವಿದ್ಯಾರ್ಥಿನಿಲಯ, 3 ವರ್ಷದಿಂದ ಖಾಲಿ ಬಿದ್ದಿದೆ ಕಟ್ಟಡ

    ಶಿವು ತೂಬಗೆರೆ
    ಬಡಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸಲು ಸರ್ಕಾರ ರೂಪಿಸುವ ಯೋಜನೆಗಳು ಹೇಗೆಲ್ಲ ಮಣ್ಣುಪಾಲಾಗುತ್ತವೆ ಎಂಬುದಕ್ಕೆ ಇಲ್ಲಿನ ವಿದ್ಯಾರ್ಥಿನಿಲಯ ಸಾಕ್ಷಿಯಾಗಿದೆ. ಕಟ್ಟಿದ 20 ವರ್ಷಕ್ಕೆ ಶಿಥಿಲಗೊಂಡಿರುವ ಕಟ್ಟಡಕ್ಕೆ 3 ವರ್ಷದಿಂದ ಬೀಗ ಬಿದ್ದಿದೆ. ಹಾಸ್ಟೆಲ್ ಆಸರೆ ಅರಸಿ ಬಂದ ವಿದ್ಯಾರ್ಥಿಗಳು ಪ್ರೌಢಶಾಲೆಯೊಂದರ ಕೊಠಡಿಯಲ್ಲಿ ವಾಸ್ತವ್ಯ ಹೂಡಬೇಕಿದೆ.

    ದೊಡ್ಡಬಳ್ಳಾಪುರ ತಾಲೂಕು ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೂಬಗೆರೆಯಲ್ಲಿನ ದೇವರಾಜ ಅರಸು ಹಿಂದುಳಿದ ಕಲ್ಯಾಣ ಬಾಲಕರ ವಿದ್ಯಾರ್ಥಿನಿಲಯದ ವಸ್ತುಸ್ಥಿತಿ ಇದು. 25ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಾಲಿಗೆ ಹಾಸ್ಟೆಲ್ ಇದ್ದರೂ ವಾಸ್ತವ್ಯಕ್ಕಿಲ್ಲದಂತಾಗಿದೆ. ಯಾವಾಗ ಕಟ್ಟಡ ಕುಸಿದು ಬೀಳುವುದೋ ಎಂಬ ಆತಂಕದಲ್ಲಿ ತಾತ್ಕಾಲಿವಾಗಿ ಸಮೀಪದ ಪ್ರೌಢಶಾಲೆಗೆ ಸ್ಥಳಾಂತರಗೊಂಡ ಮಕ್ಕಳು ಇಂದಿಗೂ ಅದೇ ಶಾಲೆಯಲ್ಲಿ ದಿನದೂಡುತ್ತಿದ್ದಾರೆ. ಉತ್ತಮ ಶಿಕ್ಷಣ, ವಸತಿ ಸೌಲಭ್ಯದ ಕನಸಿನೊಂದಿಗೆ ರಾಯಚೂರು, ಗುಲ್ಬರ್ಗ ಸೇರಿ ರಾಜ್ಯದ ವಿವಿಧ ಕಡೆಯಿಂದ ಬಂದ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯವಿಲ್ಲದೆ ನರಳುವ ಪರಿಸ್ಥಿತಿ ಎದುರಾಗಿದೆ.

    3 ವರ್ಷದ ಆದೇಶ ನನೆಗುದಿಗೆ: ಕೇವಲ 20 ವರ್ಷದ ಹಿಂದೆ ನಿರ್ಮಾಣವಾದ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದು ಈ ಕಟ್ಟಡದ ಕಳಪೆ ಕಾಮಗಾರಿಯನ್ನು ಬೊಟ್ಟುಮಾಡಿ ತೋರಿಸುತ್ತಿದೆ. ಕಟ್ಟಡ ನಿರ್ಮಾಣ ಗುತ್ತಿಗೆದಾರರು ಸಂಬಂಧಪಟ್ಟ ಅಧಿಕಾರಿಗಳ ಒಳಒಪ್ಪಂದದ ಪರಿಣಾಮ ಹಾಸ್ಟೆಲ್ ಆಸರೆಯಲ್ಲಿರಬೇಕಾದ ಮಕ್ಕಳು ಶಾಲೆ ಕೊಠಡಿಯಲ್ಲಿ ಕಾಲಕಳೆಯುವಂತಾಗಿದೆ. 2019ರಲ್ಲಿ ಶಿಥಿಲಗೊಂಡ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚೆಗಳು ನಡೆದಿದ್ದರೂ ಕೋವಿಡ್ ಕಾರಣ ಹೇಳಿ ಅಧಿಕಾರಿಗಳು ಮುಂದೂಡುತ್ತಲೇ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಭೂತಬಂಗಲೆ: ಪ್ರಸ್ತುತ ತೂಬಗೆರೆ ದೇವರಾಜ ಅರಸು ಹಿಂದುಳಿದ ಕಲ್ಯಾಣ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ ನವೀಕರಣಕ್ಕೂ ಸಾಧ್ಯವಿಲ್ಲದಂಥ ಪರಿಸ್ಥಿತಿಗೆ ಬಂದಿದೆ. ಮೂರು ವರ್ಷದಿಂದ ಬೀಗಬಿದ್ದಿರುವ ಕಟ್ಟಡ ಭೂತಬಂಗಲೆಯಂತಾಗಿದೆ, ಗೋಡೆಗಳು, ಮೇಲ್ಛಾವಣಿ ಬಿರುಕುಬಿಟ್ಟಿದೆ. ಜೋರು ಮಳೆಬಂದರೆ ಯಾವಾಗ ಬೇಕಾದರೂ ಕಟ್ಟಡ ಕುಸಿಯಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಕಲ್ಯಾಣ ಅಧಿಕಾರಿಗಳು ಬಿಜಿ: ತೂಬಗೆರೆ ದೇವರಾಜ ಅರಸು ಹಿಂದುಳಿದ ಕಲ್ಯಾಣ ಬಾಲಕರ ವಿದ್ಯಾರ್ಥಿನಿಲಯದ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಂಬಂಧಪಟ್ಟ ತಾಲೂಕು ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಅವರ ಮೊಬೈಲ್ ಯಾವಾಗಲೂ ಬಿಜಿ ಇರುತ್ತದೆ. ಯಾವ ಕೆಲಸದಲ್ಲಿ ಬಿಜಿ ಇರುತ್ತಾರೋ ಗೊತ್ತಿಲ್ಲ. ಈ ಹಾಸ್ಟೆಲ್‌ಗೆ ಕಾಯಕಲ್ಪ ಸಿಗಬೇಕು, ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡಬಾರದು ಎಂದು ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.

    ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ ಶಿಥಿಲಗೊಂಡು ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ವಾಸ್ತವ್ಯ ಹೂಡಿರುವ ಮಾಹಿತಿ ಬಂದಿಲ್ಲ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಲಾಗುವುದು. ಸದನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿ ಶೀಘ್ರ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು.
    ನಿಸರ್ಗ ನಾರಾಯಣಸ್ವಾಮಿ, ಶಾಸಕ

    ಕಟ್ಟಿದ ಕಟ್ಟಡ 20 ವರ್ಷವೂ ಪೂರೈಸದೆ ಹಾಳು ಬಿದ್ದಿರುವುದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ನೇರ ಹೊಣೆ ಹೊರಬೇಕು. ತೂಬಗೆರೆಯಲ್ಲಿರುವ ವಿದ್ಯಾರ್ಥಿನಿಲಯ 3 ವರ್ಷದಿಂದ ಖಾಲಿ ಬಿದ್ದರೂ ಅದನ್ನು ಮರುನಿರ್ಮಾಣ ಮಾಡುವಂತಹ ಬಗ್ಗೆ ಯಾರಿಗೂ ಗಮನವಿಲ್ಲ. ಮುಂದಿನ ಶೈಕ್ಷಣಿಕ ಅಭ್ಯಾಸಕ್ಕಾಗಿ ಬರುವ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಗೊಂದಲ ಉಂಟಾಗಿದೆ.
    ಕೃಷ್ಣಪ್ಪ, ತೂಬಗೆರೆ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts