More

    ಹಾವೇರಿ ನೆಲದ ಸಾಹಿತಿ ಡಾ. ಜಿ.ಎಸ್. ಆಮೂರ

    ಹಾವೇರಿ: ನಾಡಿನ ಹಿರಿಯ ಲೇಖಕ, ವಿಮರ್ಶಕ ಡಾ. ಜಿ.ಎಸ್. ಆಮೂರ ಅವರು ಹಾವೇರಿ ನೆಲದ ಪ್ರತಿಭೆ. ಜಿಲ್ಲೆಯ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಯಲ್ಲಿ 8-5-1925ರಂದು ಜನಿಸಿದ್ದರು.

    ಆಮೂರ ಅವರ ತಾಯಿಯ ತವರು ಮನೆಯಾದ ಬೊಮ್ಮನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ನಗರದ ಮುನ್ಸಿಪಲ್ ಹೈಸ್ಕೂಲ್​ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ಆ ಕಾಲದಲ್ಲಿಯೇ ಬಾಂಬೆ ಎಸ್​ಎಸ್​ಸಿ ಬೋರ್ಡ್​ಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ರ್ಯಾಂಕ್ ಪಡೆದು ಪಾಸಾಗಿದ್ದರು.

    ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿ ಪಡೆದ ನಂತರ ಧಾರವಾಡದಲ್ಲಿ ನೆಲೆಸಿದ್ದರು. ವಿದ್ಯಾರ್ಥಿ ದೆಶೆಯಲ್ಲಿರುವಾಗ ಇಲ್ಲಿಯ ರಾಜೇಂದ್ರ ನಗರದಲ್ಲಿರುವ ಕಾನಡೆ ಬಿಲ್ಡಿಂಗ್​ನಲ್ಲಿ ವಾಸವಾಗಿದ್ದರು. ಅವರ ಸಹೋದರಿ ಸುನಂದಾ ಆಮೂರ ನಗರದ ಎಸ್​ಎಂಎಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಾವೇರಿಗೆ ಜಿ.ಎಸ್. ಆಮೂರ ಅವರ ಒಡನಾಟ ತುಂಬ ಅಪರೂಪವಾಗಿತ್ತು. ವೃತ್ತಿ ಜೀವನ ಆರಂಭದ ನಂತರ ಅವರ ಕುಟುಂಬವೆಲ್ಲ ಧಾರವಾಡಕ್ಕೆ ಶಿಫ್ಟ್ ಆಗಿತ್ತು. ಈಗ ಅವರು ಜನಿಸಿದ ಮನೆಯಲ್ಲಿ ಯಾರೂ ವಾಸವಿಲ್ಲ. ಹೀಗಾಗಿ ಮನೆಯೂ ಬಿದ್ದಿದೆ. ನಗರದ ಹಾವನೂರು ಪ್ರತಿಷ್ಠಾನ ಏರ್ಪಡಿಸುತ್ತಿದ್ದ ಕಾದಂಬರಿ ಪ್ರಶಸ್ತಿ ಪ್ರದಾನಕ್ಕೆ 2004ರಲ್ಲಿ ಹಾವೇರಿಗೆ ಬಂದು ಹೋಗಿದ್ದರು. ಅದರ ನಂತರ 2012ರಲ್ಲಿ ಸಾಹಿತಿ ಸತೀಶ ಕುಲಕರ್ಣಿ ಅವರ ಸಮಗ್ರ ಕಾವ್ಯ ಸತೀಶ ಸಮಗ್ರ ಸಂಪುಟ ಬಿಡುಗಡೆಗೊಳಿಸಿದ್ದರು. ಅವರೊಂದಿಗೆ ಕವಿ ಚನ್ನವೀರ ಕಣವಿ, ವಿಮರ್ಶಕ ಡಾ. ಚಂದ್ರಶೇಖರ ನಂಗಲಿ, ಡಾ. ಸರಜೂ ಕಾಟ್ಕರ್, ಕವಿಪ್ರನಿ ನೌಕರರ ಸಂಘದ ವಿಜಯಕುಮಾರ ಮುದಕಣ್ಣನವರ ಇತರರಿದ್ದರು.

    ನಿಧನಕ್ಕೆ ಸಂತಾಪ: ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ನಿಧನಕ್ಕೆ ಜಿಲ್ಲೆಯ ವಿವಿಧ ಸಾಹಿತಿಗಳು ಮತ್ತು ಸಂಘಟನೆಗಳು ಸಂತಾಪ ಸೂಚಿಸಿವೆ. ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿದ ಆಮೂರರು ಅಜಾತಶತೃ ಸಾಹಿತಿಯಾಗಿದ್ದರು. ಸಮಚಿತ್ತ ಸಮಭಾವದಿಂದ ಸಾಹಿತ್ಯದ ಯಾವ ಪ್ರಕಾರಕ್ಕೂ ಅಂಟಿಕೊಳ್ಳದೇ ಸಾಹಿತಿ ಮತ್ತು ಸಾಹಿತ್ಯವನ್ನು ಒಂದಂತರದ ದೂರದಲ್ಲಿದ್ದು ತಮ್ಮ ಓದು ಮತ್ತು ಅಧ್ಯಯನಗಳ ಮೂಲಕ ತೂಗಿ ನೋಡಿದವರು ಆಮೂರ ಅವರು ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಬಣ್ಣಿಸಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಸಾಹಿತಿಗಳಾದ ವಿರೂಪಾಕ್ಷಪ್ಪ ಕೋರಗಲ್ಲ, ಬ.ಫ. ಯಲಿಗಾರ, ಗಂಗಾಧರ ನಂದಿ, ಸಂಕಮ್ಮ ಸಂಕಣ್ಣನವರ, ಡಾ. ಶ್ರೀಶೈಲ ಹುದ್ದಾರ, ಚಂ.ಸು. ಪಾಟೀಲ. ಮಾರುತಿ ಶಿಡ್ಲಾಪುರ, ಉದಯ ನಾಸಿಕ್, ಅಶೋಕ ಹಳ್ಳಿಯವರ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts