More

    ಹಾನಿಗೊಳಗಾದ ಮನೆಗಳಿಗೆ ಶೀಘ್ರ ಪರಿಹಾರ

    ಯಳಂದೂರು: ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.


    ತಾಲೂಕಿನಾದ್ಯಂತ ಸತತ ಮಳೆ ಹಾಗೂ ಸುವರ್ಣಾವತಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಪಟ್ಟಣ ಸೇರಿದಂತೆ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಕೃಷಿ ಭೂಮಿ, ಮನೆಗಳು, ಅಂಗಡಿ ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದ ಹಾನಿಯಾಗಿತ್ತು. ಈಗ ನದಿ ನೀರಿನ ಪ್ರಮಾಣ ತಗ್ಗಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


    ಪಟ್ಟಣದ ಮೊತ್ತದ ಕೇರಿ ಬೀದಿಯ ನಿವಾಸಿಗಳು ಮನೆಗಳನ್ನು ಕಳೆದುಕೊಂಡಿದ್ದು, ಮಹಿಳೆಯರು ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಬಿ. ಕಾವೇರಿ, ಸುವರ್ಣಾವತಿ ನದಿ ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಇದರಿಂದ ಸಾವಿರಾರು ಕುಟುಂಬಗಳ ಜನರು ಸಂತ್ರಸ್ತರಾಗಿದ್ದಾರೆ. ಮಳೆ ನೀರು ನುಗ್ಗಿದ್ದ ಸ್ಥಳಗಳಲ್ಲಿ ಒಟ್ಟು 16 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾನಿಗೊಳಗಾದ ಮನೆಗಳಿಗೆ ಆದಷ್ಟು ಬೇಗ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ಮಾಡಬಾರದು ಎಂದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.


    ಸುವರ್ಣಾವತಿ ನದಿಯಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದ ಪ್ರವಾಹ ಹೆಚ್ಚಾಗಿ ಅನೇಕ ಬಡಾವಣೆಗಳಿಗೆ ನುಗ್ಗಿ ಹಾನಿ ಮಾಡಿದೆ. ಸಂಪರ್ಕ ಕಲ್ಪಿಸುವ ಕಾಲುವೆಗಳಲ್ಲೂ ಹೂಳು ತುಂಬಿದೆ. ಹೂಳನ್ನು ತೆಗೆದರೆ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು ಎಂದು ಸ್ಥಳೀಯರು ಸಲಹೆ ನೀಡಿದರು. ಈ ಬಗ್ಗೆ ಗಮನಹರಿಸಲಾಗುವುದು ಎಂದು ಉಸ್ತುವಾರಿ ಕಾರ್ಯದರ್ಶಿ ಭರವಸೆ ನೀಡಿದರು.


    ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಆನಂದಪ್ಪ ನಾಯಕ್, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್, ರಾಜಸ್ವ ನಿರೀಕ್ಷಕ ಯದುಗಿರಿ, ಬಿಇಒ ಕಾಂತರಾಜು, ಪಂಚಾಯತ್‌ರಾಜ್ ಎಇಇ ಹರೀಶ್‌ಕುಮಾರ್, ಪಪಂ ಸದಸ್ಯರಾದ ಬಿ.ರವಿ, ಮಂಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts