More

    ಹಾಸನದಲ್ಲಿ ಸಡಿಲಗೊಳ್ಳುತ್ತಿರುವ ರೇವಣ್ಣ ಹಿಡಿತ?

    ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಗೊಂದಲ ಸೃಷ್ಟಿ

    -ಎ. ಆರ್. ವೆಂಕಟೇಶ್ ಹಾಸನ
    ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರ ವಿವಿಧ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರ ನಿಯಂತ್ರಣ ಮೀರಿ ಪಕ್ಷದ ಚಟುವಟಿಕೆಗಳು ನಡೆಯಲಾರಂಭಿಸಿವೆ. ಜಿಲ್ಲೆಯಲ್ಲಿ ಪಕ್ಷದ ಮೇಲೆ ಎಚ್.ಡಿ. ರೇವಣ್ಣ ಹೊಂದಿದ್ದ ಸಂಪೂರ್ಣ ಹಿಡಿತ ನಿಧಾನವಾಗಿ ಸಡಿಲಗೊಳ್ಳತೊಡಗಿದೆ.
    ಸೆ.13 ರಂದು ಹಾಸನದಲ್ಲಿ ನಡೆದ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಅವರ 71ನೇ ಹುಟ್ಟುಹಬ್ಬ ಕಾರ್ಯಕ್ರಮ ಕುರಿತು ಎಚ್.ಡಿ. ರೇವಣ್ಣ ಗುರುವಾರ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಗುರುವಾರ ರೇವಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಪ್ರಕಾಶ್ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸದಿರುವ ಕುರಿತು ಕೇಳಿದ ಪ್ರಶ್ನೆಗೆ ಗರಂ ಆದರು. ನನಗೆ ಆ ವಿಷಯವೇ ಗೊತ್ತಿಲ್ಲ ಎಂದು ಸಿಟ್ಟಿನಿಂದ ನುಡಿದರು.
    ಹುಟ್ಟು ಹಬ್ಬ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದ ಟಿಕೆಟ್ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಪುತ್ರ ಎಚ್.ಪಿ. ಸ್ವರೂಪ್ ಅವರಿಗೆ ಎಂಬುದಾಗಿ ಪರೋಕ್ಷ ಸೂಚನೆ ನೀಡಿರುವುದಾಗಿ ತಿಳಿಸಿದಾಗ, ’ಅದೇನೂ ನನಗೆ ಗೊತ್ತಿಲ್ಲ, ನನಗೆ ಯಾರೂ ಫೋನ್ ಮಾಡಿಲ್ಲ’ ಎಂದು ಅಸಮಾಧಾನದಿಂದ ನುಡಿದು ಎದ್ದು ಹೋದರು.
    ಇತ್ತೀಚೆಗೆ ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹಾಸನ ಕ್ಷೇತ್ರದ ಟಿಕೆಟ್ ವಿಚಾರ ಬೇಕೆಂದೇ ವಿಳಂಬ ಮಾಡಲಾಗುತ್ತಿದೆ ಎಂಬುದಾಗಿ ಎಚ್.ಪಿ. ಸ್ವರೂಪ್ ಬೆಂಬಲಿಗರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಕೆರಳಿದ ಎಚ್.ಡಿ. ರೇವಣ್ಣ ಕಾರ್ಯಕರ್ತರನ್ನು ಕುಡುಕರು ಎಂದು ಜರೆದು ಸ್ವರೂಪ್ ಬೆಂಬಲಿಗರ ಕೋಪ ಹೆಚ್ಚಿಸಿದ್ದರು.

    ರೇವಣ್ಣ ಅಪ್ಪಣೆ ಇಲ್ಲದೆ ನಡೆದ ಪ್ರಥಮ ಕಾರ್ಯಕ್ರಮ:
    ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಸೇಡು ತೀರಿಸಿಕೊಳ್ಳಲು ಎಂಬಂತೆ ಸೆ.13ರಂದು ನಡೆದ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಅವರ 71ನೇ ಜನ್ಮದಿನದ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಸಾಲದ್ದಕ್ಕೆ ರೇವಣ್ಣ ಅವರ ಸಹೋದರ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಅವರ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್‌ಗೆ ಶಕ್ತಿ ತುಂಬಿ ಹೋಗಿರುವುದು ರೇವಣ್ಣ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
    ತಮ್ಮ ಅನುಮತಿ ಇಲ್ಲದೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಸಹೋದರ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಿರುವುದು ರೇವಣ್ಣ ಅವರ ಕೋಪಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ, ಕುಮಾರಸ್ವಾಮಿ ಪ್ರವೇಶದಿಂದ ಜಿಲ್ಲೆಯಲ್ಲಿ ಜೆಡಿಎಸ್ ಮೇಲಿನ ತಮ್ಮ ಹಿಡಿತ ಸಡಿಲಗೊಳ್ಳುವ ಆತಂಕವೂ ರೇವಣ್ಣ ಅವರಿಗೆ ಎದುರಾಗಿದೆ.

    ಎಚ್‌ಡಿಕೆ ರಂಗ ಪ್ರವೇಶ:
    ಹಾಸನ ಜಿಲ್ಲಾ ಜೆಡಿಎಸ್‌ನಲ್ಲಿ ಎಚ್.ಡಿ. ರೇವಣ್ಣ ಅವರದೇ ಅಂತಿಮ ಮಾತು. ಯಾರೂ ಅವರ ತೀರ್ಮಾನಕ್ಕೆ ತಿರುಗಿ ಮಾತನಾಡಿದ್ದಿಲ್ಲ. ಅಲ್ಲದೆ ಇದುವರೆಗೂ ಹಾಸನ ಜಿಲ್ಲೆಯ ರಾಜಕೀಯದಲ್ಲಿ ತಮ್ಮ ಸಹೊದರ ಎಚ್.ಡಿ. ಕುಮಾರಸ್ವಾಮಿ ಮಧ್ಯೆಪ್ರವೇಶ ಮಾಡಲು ರೇವಣ್ಣ ಬಿಟ್ಟಿರಲಿಲ್ಲ. ಕುಮಾರಸ್ವಾಮಿ ಸಿಎಂ ಆದರೂ ಹಾಸನ ಜಿಲ್ಲೆಯ ಮಟ್ಟಿಗೆ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದುದು ಮಾತ್ರ ಎಚ್.ಡಿ. ರೇವಣ್ಣ. ಆದರೆ ಈಗ ಜಿಲ್ಲೆಯ ರಾಜಕೀಯ ಬೆಳವಣಿಗೆಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಪಾತ್ರ ವಹಿಸುತ್ತಿರುವುದು ರೇವಣ್ಣ ಅವರನ್ನು ಕೆರಳಿಸಿದೆ.
    ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನದ ಉಸ್ತುವಾರಿ ತಮ್ಮದೇ ಎಂಬುದಾಗಿ ಬಹಿರಂಗವಾಗಿ ಎಚ್‌ಡಿಕೆ ಸಾರಿ ಹೇಳಿರುವುದು ಪಕ್ಷ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದರೆ, ರೇವಣ್ಣ ಕುಟುಂಬದಲ್ಲಿ ಅಸಮಾಧಾನ ಬುಗಿಲೆದ್ದಿದೆ ಎಂದು ಹೇಳಲಾಗುತ್ತಿದೆ.

    ಹಾಸನ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಭವಾನಿ:
    ಹಾಸನ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ತಮ್ಮ ಪತ್ನಿ, ಜಿಪಂ ಮಾಜಿ ಸದಸ್ಯೆ ಭವಾನಿ ಅವರನ್ನು ಕಣಕ್ಕಿಳಿಸಲು ರೇವಣ್ಣ ಆಲೋಚನೆ ನಡೆಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ತೀರ್ಮಾನಿಸದೆ ಕೊನೆಕ್ಷಣದವರೆಗು ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿತ್ತು. ಆದರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ನಾಯಕತ್ವ ಇಲ್ಲದೆ ಸೊರಗುತ್ತಿದೆ ಎಂಬುದು ಕಾರ್ಯಕರ್ತರ ಅಸಮಾಧಾನವಾಗಿತ್ತು.
    ಇತ್ತೀಚೆಗೆ ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭವಾನಿ ರೇವಣ್ಣ ಅವರನ್ನೇ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪರೋಕ್ಷವಾಗಿ ಬಿಂಬಿಸಲು ಎಲ್ಲಾ ಸಿದ್ಧತೆ ನಡೆದಿತ್ತು. ಒಂದು ಮಾರುತಿ ವ್ಯಾನ್ ತುಂಬ ಭವಾನಿ ರೇವಣ್ಣ ಅವರ ಭಾವಚಿತ್ರ ಇರುವ ಪ್ಲೆಕಾರ್ಡ್‌ಗಳನ್ನು ತಂದು ಅವುಗಳನ್ನು ಮಹಿಳಾ ಕಾರ್ಯಕರ್ತರ ಕೈಗೆ ಕೊಟ್ಟು ಪ್ರದರ್ಶಿಸುವ ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ. ಆದರೆ ಈ ವಿಷಯ ತಿಳಿದ ಎಚ್.ಪಿ. ಸ್ವರೂಪ್ ಅಭಿಮಾನಿಗಳು ಗದ್ದಲ ಎಬ್ಬಿಸಿ ರೇವಣ್ಣ ತಂತ್ರ ಫಲಿಸದಂತೆ ನೋಡಿಕೊಂಡಿದ್ದರು.

    ಸೂತ್ರದಾರಿ ಎಚ್‌ಡಿಕೆ?
    ಹಾಸನ ಜಿಲ್ಲೆಯ ಜೆಡಿಎಸ್‌ನಲ್ಲಿ ಈಗ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳ ಸೂತ್ರದಾರಿಯೇ ರೇವಣ್ಣ ಅವರ ಸಹೋದರ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಂದು ಹೇಳಲಾಗುತ್ತಿದೆ. ಈಗಾಗಲೇ ರೇವಣ್ಣ ಶಾಸಕ, ಒಬ್ಬ ಪುತ್ರ ಸಂಸದ, ಮತ್ತೊಬ್ಬ ಪುತ್ರ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಈಗ ಪತ್ನಿಯೂ ಶಾಸಕರಾದರೆ ಜೆಡಿಎಸ್ ಕಾರ್ಯಕರ್ತರ ಅಸಮಾಧಾನದ ಕಟ್ಟೆ ಒಡೆಯುತ್ತದೆ ಎಂಬುದನ್ನು ಅರಿತು ಎಚ್‌ಡಿಕೆ ಹಾಸನ ಜಿಲ್ಲೆಯ ರಂಗ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಎಚ್‌ಡಿಕೆ ಮತ್ತು ಎಚ್‌ಡಿಆರ್ ಕುಟುಂಬಗಳ ನಡುವೆ ಇದುವರೆಗೂ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಹಿರಂಗವಾದಂತಾಗಿದೆ.
    ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್ ಅಭಿಮಾನಿಗಳು ಟಿಕೆಟ್ ವಿಷಯವಾಗಿ ಗದ್ದಲ ಎಬ್ಬಿಸಿದ್ದು, ನಂತರ ರೇವಣ್ಣ ಅನುಪಸ್ಥಿತಿಯಲ್ಲಿ ಪ್ರಕಾಶ್ ಹುಟ್ಟುಹಬ್ಬದ ನೆಪದಲ್ಲಿ ಬೃಹತ್ ಸಮಾವೇಶ ನಡೆಸಿದ್ದು, ಎಲ್ಲವೂ ಪೂರ್ವಯೋಜಿತ ಎಂಬುದಾಗಿ ಪಕ್ಷದ ಮೂಲಗಳು ಹೇಳುತ್ತಿವೆ. ಅಲ್ಲದೆ, ಸಮಾವೇಶಕ್ಕೆ ಹಣದ ನೆರವು ಒದಗಿಸಿದ್ದ ಸಹ ಸ್ವತಃ ಎಚ್.ಡಿ. ಕುಮಾರಸ್ವಾಮಿ ಎಂದು ಸಹ ಹೇಳಲಾಗುತ್ತಿದೆ.

    ‘‘ಯಾವ ಹುಟ್ಟು ಹಬ್ಬೂ ಗೊತ್ತಿಲ್ಲ, ನನಗೆ ಯಾರೂ ಫೋನು ಮಾಡಿಲ್ಲ. ನನಗೆ ಆ ವಿಷಯವೇ ತಿಳಿದಿಲ್ಲ. ದೆಹಲಿಯಲ್ಲಿ 50 ದೇಶಗಳ ಡೇರಿ ಶೃಂಗಸಭೆ ನಡೆಯಿತು. ಅಲ್ಲಿಗೆ ಹೋಗಿದ್ದೆ. 48 ವರ್ಷಗಳ ಹಿಂದೆ 1974 ರಲ್ಲಿ ವಿಶ್ವ ಡೇರಿ ಶೃಂಗಸಭೆ ನಡೆದಿತ್ತು. ಅದಾದ ನಂತರ ಈಗ ನಾಲ್ಕು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಭಾಗಿ ಆಗಲು ಹೋಗಿದ್ದೆ.’’
    -ಎಚ್.ಡಿ. ರೇವಣ್ಣ, ಶಾಸಕ, ಹೊಳೆನರಸೀಪುರ ಕ್ಷೇತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts