More

    ಹಷೋದ್ಗಾರದ ಮಧ್ಯೆ ರಥೋತ್ಸವ

    ಧಾರವಾಡ; ಇಲ್ಲಿಯ ಮುರುಘಾ ಮಠದಲ್ಲಿ ಶ್ರೀಮದಥಣಿ ಮುರು ಘೇಂದ್ರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಭಕ್ತರ ಹಷೋದ್ಗಾರದೊಂದಿಗೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

    ಮಠದ ಆವರಣದಲ್ಲಿ ಸಂಜೆ 4 ಗಂಟೆಗೆ ಚಿತ್ರದುರ್ಗ ಬಸವ ಕೇಂದ್ರ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ರಥೋತ್ಸವಕ್ಕೆ ಚಾಲನೆ ನೀಡಿದರು.

    ಸರ್ವಾಲಂಕೃತ ರಥವು ಡಿಪೋ ವೃತ್ತದವರೆಗೂ ಸಾಗಿ, ಮರಳಿ ಮಠಕ್ಕೆ ಆಗಮಿಸಿತು. ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ‘ಹರ ಹರ ಮಹಾದೇವ…’ ಎಂದು ಜೈಕಾರ ಹಾಕುವುದರೊಂದಿಗೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಕೃತಾರ್ಥರಾದರು.

    ರಥದ ಮುಂಭಾಗದಲ್ಲಿದ್ದ ಯುವಕರ ದಂಡು ಶ್ರೀಮದಥಣಿ ಮುರುಘೇಂದ್ರ ಶಿವಯೋಗಿಗಳಿಗೆ ಜೈಕಾರ ಹಾಕಿ, ನಂದಿಕೋಲು ಹಿಡಿಯುತ್ತ ಸಾಗಿತು. ಜಾನಪದ ಕಲಾತಂಡಗಳು ಹಾಗೂ ಸಂಗೀತ ವಾದ್ಯಗಳು ರಥೋತ್ಸವಕ್ಕೆ ಮೆರುಗು ನೀಡಿದವು.

    ರುದ್ರಾಕ್ಷಿ, ಹೂವುಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಶ್ರೀಮದಥಣಿ ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರ ಇಡಲಾಗಿತ್ತು. ರಥಯಾತ್ರೆಯ ಮಾರ್ಗದ ಇಕ್ಕೆಲದಲ್ಲಿ ನಿಂತಿದ್ದ ನೂರಾರು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸಾರ್ವಜನಿಕರು ಪೂಜೆ ಸಲ್ಲಿಸಿ, ಭಕ್ತಿಯಿಂದ ನಮಸ್ಕರಿಸಿದರು.

    ರಥೋತ್ಸವದಲ್ಲಿ ಜಾನಪದ ಮೇಳಗಳ ಪ್ರದರ್ಶನ, ವೀರಗಾಸೆ, ಜಗ್ಗಲಗಿ ಮೇಳ ಸೇರಿದಂತೆ ನಾಡಿನ ಸಾಂಸ್ಕೃತಿಕ ಸಿರಿಯನ್ನು ಸಾರುವ ಪ್ರದರ್ಶನಗಳು ಗಮನ ಸೆಳೆದವು. ಧಾರವಾಡ, ಹುಬ್ಬಳ್ಳಿ, ನವಲಗುಂದ, ನರಗುಂದ, ಗದಗ, ಹಾವೇರಿ, ಹಳಿಯಾಳ ಸೇರಿದಂತೆ ವಿವಿಧ ಪಟ್ಟಣಗಳು, ಗ್ರಾಮಗಳ ಜನರು; ಮುರುಘಾ ಮಠದ ಪ್ರಸಾದ ನಿಲಯದ ನಿಲಯದ ಹಳೇ ವಿದ್ಯಾರ್ಥಿಗಳು ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಶ್ರೀ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಶ್ರೀ ಗುರುಸಿದ್ಧ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಶ್ರೀ ವಿರೂಪಾಕ್ಷ ಸ್ವಾಮೀಜಿ, ಮಠದ ಆಡಳಿತ ಮಂಡಳಿ ಪದಾಧಿಕಾರಿಗಳು, ಇತರರು ಇದ್ದರು. ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಭಕ್ತರಿಗೆ ಲಿಂಗ ದೀಕ್ಷೆ: ಶ್ರೀಮದಥಣಿ ಮುರುಘೇಂದ್ರ ಶಿವಯೋಗಿಗಳವರ ಜಾತ್ರೆ ಅಂಗವಾಗಿ ಮಂಗಳವಾರ ಬೆಳಗ್ಗೆ 4 ಗಂಟೆಗೆ ಜಂಗಮ ವಟುಗಳಿಗೆ ಹಾಗೂ ಭಕ್ತರಿಗೆ ಲಿಂಗ ದೀಕ್ಷೆ ನೀಡಲಾಯಿತು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts