More

    ಹಳೇ ಹುಬ್ಬಳ್ಳಿಯಲ್ಲಿ ಜನಜಾತ್ರೆ



    ಹಳೇ ಹುಬ್ಬಳ್ಳಿ ಮಾರುಕಟ್ಟೆ, ಜನಜಾತ್ರೆ, ಶಾಂತಿನಗರ ಸ್ತಬ್ಧ, ಭರ್ಜರಿ ವ್ಯಾಪಾರ, Old Hubli Market, Janjatrai, Shantinagar Quiet, Great Business

    ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಮಾರುಕಟ್ಟೆ ಸಾಮಾನ್ಯ ದಿನಗಳಂತೆ ಭಾನುವಾರ ಜನಜಂಗುಳಿಯಿಂದ ಕೂಡಿತ್ತು. ದುರ್ಗದ ಬೈಲ್​ನಿಂದ ಇಂಡಿ ಪಂಪ್ ವೃತ್ತದವರೆಗೂ ಜನಜಾತ್ರೆ ಕಂಡುಬಂತು.

    ಮಾರುಕಟ್ಟೆ, ಬೀದಿ ಬದಿ ವ್ಯಾಪಾರಕ್ಕೆ ಅನುಮತಿ ಇಲ್ಲದಿದ್ದರೂ ಭರ್ಜರಿ ವ್ಯಾಪಾರ ವಹಿವಾಟು ಶುರುವಾಗಿತ್ತು. ಕೆಲವರು ರಸ್ತೆ ಮೇಲೆಯೇ ವ್ಯಾಪಾರ ಶುರು ಮಾಡಿದ್ದರು. ಗ್ರಾಹಕರು ಪರಸ್ಪರ ಅಂತರ ಮರೆತು ಗುಂಪು ಗುಂಪಾಗಿ ಖರೀದಿಗೆ ಮುಂದಾಗಿದ್ದರು. ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಬಂದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬೀದಿ ಬದಿ ವ್ಯಾಪಾರ ಬಂದ್ ಮಾಡುವಂತೆ ಸೂಚಿಸಿದರು.

    ಆಜಾದ್ ಕಾಲನಿ, ಶಾಂತಿನಗರ ಸ್ತಬ್ಧ

    ಇಲ್ಲಿನ ಕೇಶ್ವಾಪುರದ ಸೀಲ್​ಡೌನ್ ಪ್ರದೇಶಗಳಾದ ಆಜಾದ್ ಕಾಲನಿ ಹಾಗೂ ಶಾಂತಿನಗರ ಸ್ತಬ್ಧವಾಗಿದ್ದು, ಜನರ ಓಡಾಟ ವಿರಳವಾಗುತ್ತಿದೆ. ಮೊದ ಮೊದಲು ಔಷಧ ಖರೀದಿ, ಆಸ್ಪತ್ರೆಗೆ ಹೋಗುವುದು ಸೇರಿ ಮತ್ತಿತರ ನೆಪ ಹೇಳಿ ಬೀದಿಗೆ ಬರುತ್ತಿದ್ದ ಜನ ಇದೀಗ ಓಡಾಟ ಕಡಿಮೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಭಾನುವಾರ ಜನ ಸಂಚಾರ ವಿರಳವಾಗಿತ್ತು.

    ಕಂಟೇನ್ಮೆಂಟ್ ತೆರವಾದರೂ ಬ್ಯಾರಿಕೇಡ್ ಅಳವಡಿಕೆ

    ಹುಬ್ಬಳ್ಳಿ: ನಗರದ ಮುಲ್ಲಾ ಹಾಗೂ ಕರಾಡಿ ಓಣಿಗೆ ವಿಧಿಸಲಾಗಿದ್ದ ಕಂಟೇನ್ಮೆಂಟ್ ಜೋನ್ ಅನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಆದರೂ ಪೊಲೀಸ್ ಇಲಾಖೆ ಅಳವಡಿಸಿದ ಬ್ಯಾರಿಕೇಡ್ ಇನ್ನೂ ತೆರವುಗೊಳಿಸಿಲ್ಲ.

    ಕಮರಿಪೇಟೆಯ ಎರಡು ಓಣಿಗಳಲ್ಲಿ ಕರೊನಾ ಸೋಂಕಿತರು ಪತ್ತೆಯಾಗಿದ್ದರು. ಅವರೆಲ್ಲ ಗುಣಮುಖರಾಗಿ ಮನೆಗೆ ಬಂದಿದ್ದು, ಜಿಲ್ಲಾಡಳಿತ ಕಂಟೇನ್ಮೆಂಟ್ ಜೋನ್ ತೆರವುಗೊಳಿಸಲು ಸೂಚಿಸಿದೆ. ಆದರೂ ಪೊಲೀಸರು ಮುಂಜಾಗ್ರತಾ ಕ್ರಮದಿಂದ ಅಲ್ಲಲ್ಲಿ ಅಳವಡಿಸಿರುವ ಬ್ಯಾರಿಕೇಡ್ ತೆರವುಗೊಳಿಸಿಲ್ಲ. ಜನರ ದಟ್ಟಣೆ ಸೇರದಂತೆ ನಿಗಾ ವಹಿಸಿದೆ.

    ಪೊಲೀಸರ ಸರ್ಪಗಾವಲಿದೆ. ಅಲ್ಲಲ್ಲಿ ಜನ ಓಡಾಡುತ್ತಿದ್ದಾರೆ. ಆದರೆ ಗುಂಪು ಸೇರದಂತೆ ಪೊಲೀಸರು, ಜನರಿಗೆ ತಿಳಿಹೇಳುತ್ತಿದ್ದಾರೆ. ಜಿಲ್ಲಾಡಳಿತ ತೆರವುಗೊಳಿಸಲು ಸೂಚಿಸಿದರೂ ಸಂಚಾರಕ್ಕೆ ಮುಕ್ತಕ್ಕೆ ಏಕೆ ಅವಕಾಶ ನೀಡಿಲ್ಲ ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಪೊಲೀಸರು, ‘ನಿಮ್ಮ ರಕ್ಷಣೆ ನಮಗೆ ಮುಖ್ಯ’ ಎಂದು ತಿಳಿಹೇಳಿ ಸಾಗ ಹಾಕುತ್ತಿದ್ದಾರೆ.

    ಚೆಕ್​ಪೋಸ್ಟ್​ನಲ್ಲಿ ಗಂಟಲ ದ್ರವ ಸಂಗ್ರಹ ವ್ಯವಸ್ಥೆ

    ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದ ಬಳಿ ಅಗಡಿ ಕ್ರಾಸ್ ಚೆಕ್​ಪೋಸ್ಟ್​ನಲ್ಲಿ ಹೊರ ರಾಜ್ಯದಿಂದ ಬರುವ ಪ್ರಯಾಣಿಕರ ಗಂಟಲ ದ್ರವ ಹಾಗೂ ಕಫದ ಮಾದರಿ ಸಂಗ್ರಹಣೆಯ ವ್ಯವಸ್ಥೆ ಮಾಡಲಾಗಿದೆ.

    ಚೆಕ್​ಪೋಸ್ಟ್​ನಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ಒಂದು ತಂಡ 24/7 ಕೆಲಸ ನಿರ್ವಹಿಸುತ್ತಿದೆ. ಇದೀಗ ಚೆಕ್​ಪೋಸ್ಟ್​ನಲ್ಲೇ ಗಂಟಲ ದ್ರವ ಸಂಗ್ರಹಣೆಯ ವ್ಯವಸ್ಥೆ ಮಾಡಲಾಗಿದೆ.

    ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾವೇರಿ, ಶಿಗ್ಗಾಂವಿ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಬರುವ ಎಲ್ಲ ವಾಹನ ಸವಾರರ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಿ, ಮನೆ ವಿಳಾಸ, ಮೊಬೈಲ್ ಸಂಖ್ಯೆ ದಾಖಲಿಸಿಕೊಳ್ಳಲಾಗುತ್ತಿದೆ. ರೆಡ್ ಜೋನ್ ಜಿಲ್ಲೆಗಳಿಂದ ಬಂದು ಧಾರವಾಡದಲ್ಲಿ ಉಳಿದುಕೊಳ್ಳುವವರಿಗೆ ಛಾಪಾ ಹಾಕಿ ಹೋಂ ಕ್ವಾರಂಟೈನ್ ಮಾಡಲಾಗುವುದು. ಹೊರ ರಾಜ್ಯಗಳಿಂದ ಬಂದವರ ಗಂಟಲ ದ್ರವ, ಕಫದ ಮಾದರಿ ಸಂಗ್ರಹಿಸಿ, ಕ್ವಾರಂಟೈನ್​ಗಾಗಿ ಅವರನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗುವುದು ಎಂದು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts