More

    ಹಳೇ ಪಿಂಚಣಿಗೆ ಒತ್ತಾಯಿಸಿ ಸತ್ಯಾಗ್ರಹ, ಪ್ರಿಡಂ ಪಾರ್ಕ್​ನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ

    ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘದ ವತಿಯಿಂದ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಪ್ರಿಡಂ ಪಾರ್ಕ್​ನಲ್ಲಿ ಡಿ. 19ರಿಂದ ಅನಿರ್ದಿಷ್ಟ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಧಾರವಾಡ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಕರೆಣ್ಣವರ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಂಧ್ಯಾಕಾಲದ ಬದುಕಿನ ಭದ್ರತೆಗೆ ಆತಂಕ ತಂದಿರುವ ಎನ್​ಪಿಎಸ್ ಯೋಜನೆಯನ್ನು ವಿರೋಧಿಸಿ ಹಲವು ಹಂತದಲ್ಲಿ ಹೋರಾಟಗಳು ನಡೆದಿವೆ. ಎನ್​ಪಿಎಸ್ ನೌಕರರ ಸಂಘ ಪ್ರಾರಂಭಗೊಂಡು 2017ರಿಂದ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಳಗಾವಿ, ಬೆಂಗಳೂರು ಅಧಿವೇಶನ ಸಂದರ್ಭದಲ್ಲಿ ಧರಣಿ ನಡೆಸಲಾಗಿದೆ. ಆದರೆ, ಇದುವರೆಗೆ ಕೇವಲ ಭರವಸೆಗಳು ಸಿಕ್ಕಿವೆ ಎಂದು ಹೇಳಿದರು.

    ಈ ಎಲ್ಲ ಹಿನ್ನೆಲೆಯಲ್ಲಿ ಎನ್​ಪಿಎಸ್ ನೌಕರರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ನೌಕರರು ಪ್ರೀಡಂ ಪಾರ್ಕ್​ನಲ್ಲಿ ಸೇರಲಿದ್ದು, ಅನಿರ್ದಿಷ್ಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ ಎಂದರು.

    ಹಳೇ ಪಿಂಚಣಿ ಯೋಜನೆ ಜಾರಿ ಮಾಡಬೇಕು. ನೌಕರರ ಹಿತ ಕಾಪಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿರೋಜ್ ಗುಡೇನಕಟ್ಟಿ ತಿಳಿಸಿದರು.

    ಪರಮಾನಂದ ಶಿವಳ್ಳಿಮಠ, ಬಿ.ಪಿ. ದೇಸೂರ, ಎಂ.ಆರ್. ಕಬ್ಬೇರ, ಬಸವಂತಪ್ಪ ಕೇರಿ, ಶರಣು ಗರಗ ಇತರರು ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts