More

    ಹಳಿಯಾಳದಲ್ಲಿ ಮೂರನೇ ಡಯಾಲಿಸಿಸ್ ಯಂತ್ರ

    ಹಳಿಯಾಳ: ತಾಲೂಕು ಆಸ್ಪತ್ರೆಯಲ್ಲಿ ಮೂರನೇ ಡಯಾಲಿಸಿಸ್ ಯಂತ್ರವನ್ನು ಅಳವಡಿಸಲಾಗಿದ್ದು, ಶುಕ್ರವಾರ ತಾಲೂಕು ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಹೊಸ ಡಯಾಲಿಸಿಸ್ ಯಂತ್ರಕ್ಕೆ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಅವರು, ಡಯಾಲಿಸಿಸ್​ಗಾಗಿ ತಾಲೂಕಿನ ಜನ ಹೊರ ಜಿಲ್ಲೆಗಳಿಗೆ ತೆರಳುವ ಸಮಸ್ಯೆ ತಪ್ಪಿಸಲು ಈ ಪ್ರಯತ್ನ ನಡೆಸಲಾಗಿದೆ. ಜನ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

    ಹೊಸ ಯಂತ್ರವನ್ನು ಶೀಘ್ರದಲ್ಲಿ ಒದಗಿಸಲು ಸಹಕರಿಸಿದ ಬಿಆರ್​ಎಸ್ ಸಂಸ್ಥೆಯ ಕುಶಾಲ ಶೆಟ್ಟಿ ಹಾಗೂ ಡಯಾಲಿಸಿಸ್ ತಂತ್ರಜ್ಞರಾದ ಮಂಜುನಾಥ ಅವರಿಗೆ ಅಭಿನಂದನೆ ಸಲ್ಲಿಸಿದರು.

    ತಾಲೂಕಾ ಆರೋಗ್ಯಾಧಿಕಾರಿ ಡಾ.ರಮೇಶ ಕದಂ ಮಾತನಾಡಿ, ಹಳಿಯಾಳ ಆಸ್ಪತ್ರೆಗೆ ತಂದಿರುವ ಹೆಚ್ಚುವರಿ ಯಂತ್ರದಿಂದ ಡಯಾಲಿಸಿಸ್ ಕೆಲಸದ ಒತ್ತಡ ಹಗುರವಾದಂತಾಗಿದೆ. ಸದ್ಯ ದಿನಕ್ಕೆ ಕೇವಲ 6 ರಿಂದ 7 ಜನರಿಗೆ ಸಿಗುತ್ತಿದ್ದ ಡಯಾಲಿಸಿಸ್ ಸೇವೆ ಇನ್ನು 8ರಿಂದ 10ಜನರಿಗೆ ಸಿಗಲಿದೆ ಎಂದು ವಿವರಿಸಿದರು. ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಪಂ ಸದಸ್ಯರಾದ ಲಕ್ಷ್ಮಿ ಕೊರ್ವೆಕರ್, ಮಹೇಶ್ವರಿ ಮಿಶಾಳೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಪುರಸಭಾ ಸದಸ್ಯ ಅಜರ್ ಬಸರಿಕಟ್ಟಿ ಉಪಸ್ಥಿತರಿದ್ದರು.

    ಉಪಕರಣ ತರಿಸುವಲ್ಲಿ ಯಶಸ್ವಿ: 2018ರಲ್ಲಿ ಇಲ್ಲಿನ ತಾಲೂಕು ಆಸ್ಪತ್ರೆಗೆ ಅವರು ಎರಡು ಡಯಾಲಿಸಿಸ್ ಯಂತ್ರಗಳನ್ನು ಒದಗಿಸಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಅದು ವರವಾಗಿತ್ತು. 16 ರಿಂದ 20 ಜನರು ಹೆಸರು ನೋಂದಾಯಿಸಿ ನಿರಂತರ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಇನ್ನೂ ಹಲವರು ಸಮೀಪದ ಧಾರವಾಡ, ಬೆಳಗಾವಿಗೆ ಹೋಗಿ ಖಾಸಗಿಯಾಗಿ ಈ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಲಾಕ್​ಡೌನ್​ನಿಂದಾಗಿ ಕಳೆದ ಒಂದೂವರೆ ತಿಂಗಳಿಂದ ಹೊರ ಜಿಲ್ಲೆಯ ಗಡಿಗಳು ಬಂದಾಗಿದ್ದವು. ಮೂತ್ರಪಿಂಡ ವೈಫಲ್ಯ ಹೊಂದಿದ ರೋಗಿಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಹೊರ ಜಿಲ್ಲೆಗಳಿಗೆ ಡಯಾಲಿಸಿಸ್​ಗೆ ತೆರಳಲು ಸಾಧ್ಯವಾಗಿರಲಿಲ್ಲ. ತಾಲೂಕು ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಡಯಾಲಿಸಿಸ್ ರೋಗಿಗಳ ಸಂಖ್ಯೆ ದ್ವಿಗುಣವಾಗಿತ್ತು. ಆದರೆ, ಎರಡೇ ಯಂತ್ರ ಇರುವುದರಿಂದ ಹೆಚ್ಚಿನ ಜನರಿಗೆ ಚಿಕಿತ್ಸೆ ಸಿಗದಂತಾಗಿತ್ತು.

    ಸಮಸ್ಯೆ ಅರಿತ ಶಾಸಕ ಆರ್.ವಿ.ದೇಶಪಾಂಡೆ ಜನರಿಗೆ ನೆರವಾಗಲು ಶ್ರಮಿಸಿದರು. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಿರ್ವಹಣೆ ಮಾಡುತ್ತಿರುವ ಉದ್ಯಮಿ ಬಿ.ಆರ್.ಶೆಟ್ಟಿ ಅವರು ಆರೋಗ್ಯ ಸಂಸ್ಥೆಯ ಜತೆ ಮಾತನಾಡಿ, ಮೂರನೇ ಹೊಸ ಡಯಾಲಿಸಿಸ್ ಯಂತ್ರ ತರಿಸುವಲ್ಲಿ ಯಶಸ್ವಿಯಾದರು. ಆದರೆ, ಯಂತ್ರ ಇರಿಸಲು ಜಾಗವಿರಲಿಲ್ಲ. ಘಟಕದ ಎಸಿಗಳು ಹಾಳಾಗಿದ್ದವು. ಅದನ್ನು ರಿಪೇರಿ ಮಾಡಲು ಲಾಕ್​ಡೌನ್ ಕಾರಣ ತಂತ್ರಜ್ಞರು ಸಿಗಲಿಲ್ಲ. ವಿ.ಆರ್. ದೇಶಪಾಂಡೆ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿ ಸ್ವತಃ ತೆರಳಿ ಎಸಿ ರಿಪೇರಿ ಮಾಡಿದರು. ವೈರಿಂಗ್, ಫ್ಲಂಬಿಂಗ್ ಕೆಲಸ ಮಾಡಿ ಶೀಘ್ರದಲ್ಲಿ ಯಂತ್ರ ಜನರ ಚಿಕಿತ್ಸೆಗೆ ಸಿಗುವ ವ್ಯವಸ್ಥೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts