More

    ಹರಿಪುರದಲ್ಲಿ ಶವಸಂಸ್ಕಾರ ಪ್ರಯಾಸಕರ

    ಶಿರಹಟ್ಟಿ: ಹರಿಪುರ ಗ್ರಾಮದಲ್ಲಿ ಯಾರಾದರೂ ಪ್ರಾಣ ಬಿಟ್ಟರೆ ಅವರ ಶವ ಸಂಸ್ಕಾರಕ್ಕೆ ತೆರಳುವವರು ನರಕಯಾತನೆ ಅನುಭವಿಸುವಂತಾಗಿದೆ.

    ಪ.ಪಂ. ಆಡಳಿತ ವ್ಯಾಪ್ತಿಯ ವಾರ್ಡ್- 2ರ ಹರಿಪುರವು ಪಟ್ಟಣದಿಂದ ಕೂಗಳತೆ ದೂರದಲ್ಲಿದೆ. ಈ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ರುದ್ರಭೂಮಿಯ ಸಮಸ್ಯೆಯು ನಿರಂತರವಾಗಿ ಕಾಡುತ್ತಿದೆ. ಈ ಹಿಂದೆ ಯಾರಾದರೂ ಮೃತಪಟ್ಟರೆ ಹೊಲವುಳ್ಳವರು ತಮ್ಮ ಜಮೀನುಗಳಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಆದರೆ, ಜಮೀನು ಇಲ್ಲದವರ ಪಾಡು ಹೇಳತೀರದಾಗಿತ್ತು. ಗ್ರಾಮಸ್ಥರ ಗೋಳು ತಪ್ಪಿಸಲು ಶಿರಹಟ್ಟಿಯ ಹಾಲಪ್ಪ ಬಾಬಣ್ಣವರ ಎಂಬುವರು ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಹಳ್ಳದ ಬದಿಯಲ್ಲಿನ ತಮ್ಮ 2 ಎಕರೆ ಪಾಳು ಭೂಮಿಯನ್ನು ಸ್ಮಶಾನಕ್ಕೆ ನೀಡಲು ಮುಂದಾಗಿದ್ದರಿಂದ ತುಸು ನೆಮ್ಮದಿ ಸಿಕ್ಕಿತ್ತು. ಆದರೆ, ಈ ಸ್ಮಶಾನ ಜಾಗದಲ್ಲಿ ಈಗ ಮುಳ್ಳು, ಕಂಟಿಗಳು ತುಂಬಿಕೊಂಡಿವೆ. ಹೀಗಾಗಿ, ಶವ ಸಂಸ್ಕಾರಕ್ಕೆ ಹೋಗುವವರು ನರಕಯಾತನೆ ಅನುಭವಿಸುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

    ಜಾಲಿ, ಕಂಟಿಗಳ ದರ್ಬಾರ್:

    ಸ್ಮಶಾನಕ್ಕೆ ತೆರಳುವ ದಾರಿಯುದ್ದಕ್ಕೂ ಜಾಲಿ ಕಂಟಿಗಳು ಬೆಳೆದಿದ್ದು, ಶವ ಹೊತ್ತು ಸಾಗುವುದು ಕಷ್ಟಸಾಧ್ಯವಾಗಿದೆ. ಮಳೆಗಾಲದಲ್ಲಂತೂ ತೀವ್ರ ತೊಂದರೆಯಾಗುತ್ತದೆ. ಇನ್ನು ಸ್ಮಶಾನ ಭೂಮಿ ಮುಳ್ಳು, ಕಂಟಿಗಳ ಆಗರವಾಗಿದ್ದು, ಅಲ್ಲಿಗೆ ತೆರಳುವವರಿಗೆ ನರಕಯಾತನೆ ನಿಶ್ಚಿತ. ಮಾರ್ಗ ಮಧ್ಯದಲ್ಲಿರುವ ಸಣ್ಣ ಹಳ್ಳದಲ್ಲಿ ಆಳುದ್ದದ ಕಂದಕ ಬಿದ್ದಿದ್ದು, ಅಲ್ಲಿ ಬರಿಗೈಯಲ್ಲೇ ನಡೆದುಕೊಂಡು ಹೋಗುವುದೇ ಕಷ್ಟಸಾಧ್ಯ. ಇನ್ನು ಶವ ಹೊತ್ತು ಸಾಗುವ ಪರಿಸ್ಥಿತಿ ದೇವರಿಗೇ ಪ್ರೀತಿ.

    ಜಾಲಿ, ಕಂಟಿ ತುಂಬಿಕೊಂಡಿದ್ದರಿಂದ ಸ್ಮಶಾನ ಭೂಮಿ ವಿಷ ಜಂತುಗಳ ಆವಾಸ ಸ್ಥಳವಾಗಿ ಮಾರ್ಪಡಾಗಿದೆ. ಶವ ಸಂಸ್ಕಾರಕ್ಕೆ ಹೋಗುವವರು ಜೀವ ಕೈಯಲ್ಲಿ ಹಿಡಿದುಕೊಂಡು ಭಯದಲ್ಲೇ ಇರಬೇಕು.

    ಕೂಡಲೆ ಅಧಿಕಾರಿಗಳು ಸ್ಮಶಾನ ಭೂಮಿಯಲ್ಲಿ ಜಾಲಿ, ಕಂಟಿಗಳನ್ನು ತೆರವುಗೊಳಿಸಿ, ಸ್ಮಶಾನ ಮಾರ್ಗವನ್ನು ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

    ಶವ ಇಟ್ಟು ಪ್ರತಿಭಟಿಸಿದ್ದ ಗ್ರಾಮಸ್ಥರು

    ಈ ಹಿಂದೆ ಸರ್ಕಾರಕ್ಕೆ ಭೂಮಿ ಖರೀದಿಸಲು ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಉರುಳಿದರೂ ಪ್ರಯೋಜನವಾಗದ್ದರಿಂದ ಭೂಮಾಲೀಕ ಬಾಬಣ್ಣ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ್ದರು. ಆಗ ಗ್ರಾಮಸ್ಥರೆಲ್ಲ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಕಚೇರಿ ಆವರಣದಲ್ಲಿಯೇ ಅಂತ್ಯಸಂಸ್ಕಾರ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಶೀಘ್ರದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ರುದ್ರಭೂಮಿ ನಿವೇಶನ ಖರೀದಿಸುವ ಭರವಸೆ ನೀಡಿದ್ದರು. ಅದರಂತೆ 2 ಎಕರೆ ಭೂಮಿಯನ್ನು ರಾಜ್ಯಪಾಲರ ಹೆಸರಿನಲ್ಲಿ ಖರೀದಿ ಮಾಡಲಾಗಿದೆ ಎನ್ನಲಾಗಿದೆ. ಶೀಘ್ರ ಸ್ಮಶಾನ ಜಾಗೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಅವರ ಗಮನ ಸೆಳೆದು ಅನುದಾನ ಕೋರಲಾಗಿದೆ ಎಂದು ಗ್ರಾಮದ ಪ್ರಮುಖರಾದ ಗಂಗಪ್ಪ ದೇಸಾಯಿಪಟ್ಟಿ, ಮಲ್ಲೇಶಪ್ಪ ಕಾಳಗಿ, ಬಾಲಚಂದ್ರ ದೇಸಾಯಿಪಟ್ಟಿ, ಶ್ರೀಶೈಲ ಮಣ್ಣೂರ, ಶಂಕ್ರಪ್ಪ ಕಾಳಗಿ ತಿಳಿಸಿದ್ದಾರೆ.

    ಸ್ಮಶಾನಕ್ಕೆ ನೀಡಲಾದ 2 ಎಕರೆ ಭೂಮಿ ರಾಜ್ಯಪಾಲರ ಹೆಸರಿನಲ್ಲಿ ಖರೀದಿಯಾಗಿದೆ. ಅದಕ್ಕೆ ತೆರಳಲು ಸುಗಮವಾದ ದಾರಿ ಮತ್ತು ರುದ್ರಭೂಮಿ ಅಭಿವೃದ್ಧಿ ಬಗ್ಗೆ ಸಂಬಂಧಿಸಿದ ಪಟ್ಟಣ ಪಂಚಾಯಿತಿಯವರು ಅನುದಾನ ನೀಡಿದರೆ ಗ್ರಾಮಸ್ಥರ ಬಹುದಿನಗಳ ಸಮಸ್ಯೆಗೆ ಪರಿಹಾರ ದೊರಕುತ್ತದೆ.

    | ಯಲ್ಲಪ್ಪ ಗೋಣೆಣ್ಣವರ

    ತಹಸೀಲ್ದಾರ್, ಶಿರಹಟ್ಟಿ

    ಶಾಸಕರ ಮತ್ತು ಪ.ಪಂ. ಅನುದಾನದಲ್ಲಿ ಸ್ಮಶಾನಕ್ಕೆ ತೆರಳುವ ಮಾರ್ಗ ಮತ್ತು ಸ್ಮಶಾನ ಜಾಗೆಯನ್ನು ಅಭಿವೃದ್ಧಿಪಡಿಸಲಾಗುವುದು.

    | ಮಹಾದೇವ ಗಾಣಿಗೇರ

    ಪ.ಪಂ. ವಾರ್ಡ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts