More

    ಹನೂರು ಪಪಂ ವಾಣಿಜ್ಯ ಮಳಿಗೆ ಕಟ್ಟಡ ತೆರವು

    ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ

    ಹನೂರು: ಕೆ- ಶಿಪ್ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆ ಕಟ್ಟಡದ ತೆರವು ಕಾರ್ಯ ಶನಿವಾರ ಸಂಜೆ ಉಪವಿಭಾಗಾಧಿಕಾರಿ ಗೀತಾ ಹುಡೇದ ನೇತೃತ್ವದಲ್ಲಿ ಆರಂಭಿಸಲಾಯಿತು.

    ಕೊಳ್ಳೇಗಾಲದಿಂದ ಹನೂರಿನವರೆಗೆ 108 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಮಧುವನಹಳ್ಳಿಯಿಂದ ಹನೂರಿನವರೆಗೆ ಅಲ್ಲಲ್ಲಿ ತುಸು ದೂರ ಹೊರತುಪಡಿಸಿದರೆ ಇನ್ನುಳಿದೆಡೆ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಜತೆಗೆ ಕಾಮಗೆರೆ, ಮಂಗಲ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನು, ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಆದರೆ, ಹನೂರು ಪಟ್ಟಣದಲ್ಲಿ ಕೆಲವು ಕಾರಣಾಂತರದಿಂದ ರಸ್ತೆ ಬದಿಯಲ್ಲಿನ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿರಲಿಲ್ಲ. ಇದರಿಂದ ಕಾಮಗಾರಿ ಪೂರ್ಣಗೊಳಿಸಲು ತೊಡಕಾಗಿತ್ತು. ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದ್ದು, ತೀವ್ರ ಆಕ್ಷೇಪ ಕೇಳಿ ಬಂದಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಕಳೆದ ತಿಂಗಳು ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

    ಈ ದಿಸೆಯಲ್ಲಿ ಕೆ ಶಿಪ್ ಅಧಿಕಾರಿಗಳು ಅ.12ರಂದು ಕೆಲ ಕಟ್ಟಡಗಳ ತೆರವು ಕಾರ್ಯಕ್ಕೆ ಮುಂದಾಗಿದ್ದರಲ್ಲದೆ ಪಪಂ ಮಳಿಗೆಯ ಬಾಡಿಗೆದಾರರಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರು. ಈ ವೇಳೆ ಬಾಡಿಗೆದಾರರು ಮಳಿಗೆಯನ್ನು ಬಾಡಿಗೆ ಪಡೆಯುವಾಗ 25 ವರ್ಷ ಒಪ್ಪಂದವಾಗಿದ್ದು, ಇನ್ನು 9 ವರ್ಷ ಬಾಕಿ ಇದೆ. ಈಗಿರುವಾಗ ನಮಗೆ ಪರಿಹಾರ ನೀಡದೆ ಅಂಗಡಿಯನ್ನು ಖಾಲಿ ಮಾಡಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ನಮಗೆ ಪರಿಹಾರ ನೀಡಿ ಕಟ್ಟಡವನ್ನು ತೆರವುಗೊಳಿಸಿ ಎಂದು ಮನವಿ ಮಾಡಿದರು. ಹಾಗಾಗಿ ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ. ಜತೆಗೆ ಇನ್ನುಳಿದ ಕೆಲವರು ಸಹ ಅಂಗಡಿಗಳನ್ನು ಖಾಲಿ ಮಾಡಿರಲಿಲ್ಲ.

    ಈ ಹಿನ್ನ್ನೆಲೆಯಲ್ಲಿ ಅ.27ರಂದು ಅಪರ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅಧಿಕಾರಿಗಳ ಸಭೆ ನಡೆಸಿ ಕಟ್ಟಡಗಳನ್ನು ಶೀಘ್ರ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಈ ದಿಸೆಯಲ್ಲಿ ಶನಿವಾರ ಸಂಜೆ ಎಸಿ ಗೀತಾ ಹುಡೇದ ಅವರ ಸಮ್ಮುಖದಲ್ಲಿ ಮಳಿಗೆ ಕಟ್ಡಡಗಳ ತೆರವು ಕಾರ್ಯವನ್ನು ಆರಂಭಿಸಲಾಯಿತು.
    ಕೆ-ಶಿಪ್ ಎಇಇ ರಾಜು, ಪಪಂ ಮುಖ್ಯಾಧಿಕಾರಿ ಮೂರ್ತಿ, ಆರ್‌ಐ ಮಹದೇವಸ್ವಾಮಿ, ಗ್ರಾಮಲೆಕ್ಕಿಗ ಶೇಷಣ್ಣ ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts