More

    ಹನುಮಧ್ವಜ ಆರೋಹಣಕ್ಕೆ ಆಗ್ರಹ -ಬಿಜೆಪಿ ಪ್ರತಿಭಟನೆ

    ದಾವಣಗೆರೆ: ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ತೆರವುಗೊಳಿಸಲಾದ ಹನುಮಧ್ವಜ ಮರಳಿ ಆರೋಹಣ ಮಾಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು, ಮುಖಂಡರು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದರು.
    ಪಕ್ಷದ ಜಿಲ್ಲಾ ಕಚೇರಿ ಆವರಣದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಯದೇವ ವೃತ್ತದ ಮೂಲಕ ಪಿಬಿ ರಸ್ತೆಯಲ್ಲಿ ಸಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಿದರು.
    ಕೆರಗೋಡಿನಲ್ಲಿ ಅಲ್ಲಿನ ಗ್ರಾಪಂ ಸರ್ವಾನುಮತದ ನಿರ್ಣಯದೊಂದಿಗೆ ಸ್ವಂತ ವೆಚ್ಚದಲ್ಲಿ ಭಾನುವಾರ ಹನುಮ ಧ್ವಜಾರೋಹಣ ಮಾಡಲಾಗಿತ್ತು. ಸರ್ಕಾರ, ಜಿಲ್ಲಾ ಸಚಿವರು, ಸ್ಥಳೀಯ ಶಾಸಕರ ಪ್ರಚೋದನೆಯಿಂದ ಅದನ್ನು ಇಳಿಸಲಾಗಿದೆ. ಈ ವಿಚಾರದಲ್ಲಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
    ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಅವಮಾನಿಸಲಾಗಿದೆ. ಇದು ಖಂಡನೀಯ. ರಾಜ್ಯ ಸರ್ಕಾರ ನಿರಂತರವಾಗಿ ಹಿಂದು ಹಾಗೂ ಶ್ರೀರಾಮ ವಿರೋಧಿ ಆಡಳಿತ ನಡೆಸುತ್ತಿದೆ. ಒಂದು ಕೋಮಿನ ಪರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಹಿಂದು ಸಮಾಜಕ್ಕೆ ಗೌರವ ಕೊಡುವ ಮಾದರಿಯಲ್ಲಿ ಸರ್ಕಾರ ನಡೆದುಕೊಳ್ಳಬೇಕೆಂದು ಒತ್ತಾಯಿಸಿದರು.
    ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೇಸರಿ ಧ್ವಜ, ಭಗವಾಧ್ವಜ ಕಂಡರೆ ಪಾಕಿಸ್ತಾನದಂತೆ ವಿರೋಧ ಮಾಡುತ್ತಾರೆ. ಕಾಂಗ್ರೆಸಿಗರು ಧ್ವಜವಿರೋಧಿ ಮನಸ್ಥಿತಿಯಲ್ಲಿದ್ದಾರೆ ಎಂದು ದೂರಿದರು.
    ದಾವಣಗೆರೆ ತುಂಬಾ ಜಿಲ್ಲಾ ಉಸ್ತುವಾರಿ ಸಚಿವರ ಜಾಹೀರಾತು ಫಲಕಗಳು ವರ್ಷದಿಂದಲೂ ಇವೆ. ಇವು ನಗರಪಾಲಿಕೆ ಕಣ್ಣಿಗೆ ಕಾಣುತ್ತಿಲ್ಲವೆ. ಅಧಿಕಾರಿಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕಾಂಗ್ರೆಸ್ ಆಡಳಿತದಲ್ಲಿ ಹಿಂದುಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದ್ದು ಇದೊಂದು ಕೆಟ್ಟ ಆಡಳಿತ. ಸರ್ಕಾರದ ಈ ವರ್ತನೆ ಮುಂದುವರಿದಲ್ಲಿ ರಾಜ್ಯ ಹಾಗೂ ದೇಶವ್ಯಾಪಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
    ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಾಜ್ಯದಲ್ಲಿ ಟಿಪ್ಪು-ಬಾಬರ್ ಆಡಳಿತ ನಡೆಯುತ್ತಿದೆ. ಸತತ 500 ವರ್ಷದ ಸತತ ಹೋರಾಟದ ಬಳಿಕ ಶ್ರೀರಾಮಮಂದಿರ ನಿರ್ಮಾಣವಾಗಿದ್ದು, ಕಾಂಗ್ರೆಸ್‌ಗೆ ಮರ್ಮಾಘಾತ ಆಗಿದೆ. ಅಲ್ಪಸಂಖ್ಯಾತರಿಗೆ 2700 ಕೋಟಿ ರೂ. ನೀಡುವ ಮೂಲಕ ತುಷ್ಟೀಕರಣ ಮಾಡುವ ಸರ್ಕಾರಕ್ಕೆ ರೈತರ ಕಣ್ಣೀರು ಕಾಣುವುದಿಲ್ಲವೆ ಎಂದು ಪ್ರಶ್ನಿಸಿದರು.
    ಡಿ.ಕೆ.ಶಿವಕುಮಾರ್ ತಾವು ಶಿವಭಕ್ತ ಎಂದು ಹೇಳಿಕೊಂಡರೆ, ಸಿದ್ದರಾಮಯ್ಯ ನನ್ನ ಹೆಸರಿನಲ್ಲಿ ರಾಮನಿದ್ದಾನೆ ಎಂದು ಹೇಳಿಕೊಳ್ಳುತ್ತಾರೆ. ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ಮುಂದುವರಿಸಿದಲ್ಲಿ ಸಹಿಸುವುದಿಲ್ಲ. ಸರ್ಕಾರಕ್ಕೆ ಶ್ರೀರಾಮ ಕರಸೇವಕರ ಶಾಪ ತಟ್ಟಲಿದೆ. ತಾಕತ್ತಿದ್ದರೆ ಹಿಂದುಗಳನ್ನು ಬಂಧಿಸಲಿ ಎಂದು ಹೇಳಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ಭಾರತದ ಆತ್ಮವೇ ಅಧ್ಯಾತ್ಮ. ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮದಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಅಸ್ತಿತ್ವಕ್ಕೆ ಬಂದಿದೆ. ಇದು ಬಿಜೆಪಿ ಅಥವಾ ಆರೆಸ್ಸೆಸ್‌ನ ಮಂದಿರವಲ್ಲ. ರಾಷ್ಟ್ರದ ದೇವಸ್ಥಾನವಾಗಿದೆ. ವಿದೇಶಿಗರೂ ಕೂಡ ಬಾಲರಾಮನ ಪ್ರತಿಷ್ಠಾಪನೆ ಕಂಡು ಖುಷಿ ಪಟ್ಟಿದ್ದಾರೆ ಎಂದು ಹೇಳಿದರು.
    ಚಿತ್ರದುರ್ಗದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯನವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದು ಸರಿಯಲ್ಲ. ಇದೇನು ಕಾಂಗ್ರೆಸ್‌ನ ಸಂಸ್ಕೃತಿಯಾ ಎಂದೂ ಪ್ರಶ್ನಿಸಿದರು.
    ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್, ಮುಖಂಡರಾದ ವೀರೇಶ್ ಹನಗವಾಡಿ, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್. ಬಿ.ಜಿ.ಅಜಯಕುಮಾರ್, ಎಸ್.ಟಿ.ವೀರೇಶ್, ಪಿ.ಸಿ.ಶ್ರೀನಿವಾಸ್, ಯಶವಂತರಾವ್ ಜಾಧವ್, ಚಂದ್ರಶೇಖರ ಪೂಜಾರ್, ಬಸವರಾಜ ನಾಯ್ಕ, ಸತೀಶ್ ಕೊಳೇನಹಳ್ಳಿ, ಧನಂಜಯ ಕಡ್ಲೆಬಾಳ್, ಬಿ.ಎಸ್. ಜಗದೀಶ್, ಲಕ್ಷ್ಮಣ್, ಶಿವನಗೌಡ ಪಾಟೀಲ್, ಯಶೋದಾ ಯಗ್ಗಪ್ಪ, ಚೇತನಾ ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts