More

    ಹಕ್ಕುಗಳು ಮತ್ತು ಸಂರಕ್ಷಣೆ ಕಾಯ್ದೆಗಳ ಮುಕ್ತ ಚರ್ಚೆಯಾಗಲಿ

    ಚಿಕ್ಕಬಳ್ಳಾಪುರ: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಸಲಹೆ ನೀಡಿದರು.

    ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಕುರಿತು ಶುಕ್ರವಾರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ರಕ್ಷಣಾ ಘಟಕ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಶೋಷಣೆಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ತರವಾಗಿದ್ದು, ಕಾನೂನು ನೆರವಿನ ಮೂಲಕ ಬಾಲ್ಯ ವಿವಾಹ, ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿ ಸಾಮಾಜಿಕ ಪಿಡುಗುಗಳಿಗೆ ಕಡಿವಾಣ ಹಾಕಬೇಕು ಎಂದು ಕರೆ ನೀಡಿದರು.

    ಮಕ್ಕಳ ದೌರ್ಜನ್ಯ ತಡೆ, ಹಕ್ಕುಗಳು ಮತ್ತು ಸಂರಕ್ಷಣೆ ಕಾಯ್ದೆಗಳ ಕುರಿತು ಮುಕ್ತವಾಗಿ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಾಗಾರ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ನ್ಯಾಯಾಧೀಶ ನಟರಾಜ್ ಸಲಹೆ ನೀಡಿದರು.

    ಎಲ್ಲ ಇಲಾಖೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಕಾಯ್ದೆಗಳ ಸಮರ್ಪಕ ಅನುಷ್ಠಾನ ಸಾಧ್ಯವಾಗುತ್ತದೆ, ಮಗುವಿನ ಪಾಲನೆ ಮತ್ತು ರಕ್ಷಣೆಯಲ್ಲಿ ಜವಾಬ್ದಾರಿ ಮರೆಯಬಾರದು ಎಂದರು.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎಂ.ಯೋಗೀಶ್ ಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲಕ್ಷ್ಮೀದೇವಮ್ಮ ಇತರರಿದ್ದರು.

    ನಿಯಮ ಮೀರುವುದು ತಪ್ಪು: ಸಂತ್ರಸ್ತ ಮಗುವಿನ ವಿಚಾರಣೆ, ರಕ್ಷಣೆಯ ನಿಯಮಗಳ ಬಗ್ಗೆ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಇರಬೇಕು. ಪೊಲೀಸರು ಸಮವಸ್ತ್ರದಲ್ಲಿ ಮಾತನಾಡಿಸುವುದು ಇಲ್ಲವೇ ಠಾಣೆಯಲ್ಲಿರಿಸುವುದು ತಪ್ಪು. ಪ್ರಕರಣ ಬೆಳಕಿಗೆ ಬಂದಾಗಿನಿಂದ ನ್ಯಾಯ ಒದಗಿಸುವವರೆಗೂ ಮಗುವಿನ ಹಿತ ಕಾಪಾಡುವಲ್ಲಿ ಎಚ್ಚರಿಕೆ ವಹಿಸಬೇಕು, ಆದರೆ ಬಹುತೇಕ ಸಂದರ್ಭದಲ್ಲಿ ಈ ನಿಯಮಗಳನ್ನು ಮೀರುತ್ತಿರುವುದು ವಿಷಾಧನೀಯ ಎಂದು ನ್ಯಾಯಾಧೀಶ ನಟರಾಜ್ ಬೇಸರ ವ್ಯಕ್ತಪಡಿಸಿದರು.

    ಸರಿ-ತಪ್ಪುಗಳ ಅರಿವು ಮೂಡಿಸಿ: ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯ, ಛಲ ಬೆಳೆಸಬೇಕು. ಸರಿ ತಪ್ಪುಗಳನ್ನು ತಿಳಿದುಕೊಂಡು ಒಳ್ಳೆಯ ಮಾರ್ಗದಲ್ಲಿ ನಡೆಯುವಂತಾಗಲು ಪ್ರೋತ್ಸಾಹಿಸಬೇಕು ಎಂದು ಜಿಪಂ ಸಿಇಒ ಬಿ.ಫೌಜೀಯಾ ತರುನ್ನುಮ್ ಸಲಹೆ ನೀಡಿದರು. ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ರೂಪಿಸಲಾದ ಕಾನೂನು, ನಿಯಮಗಳನ್ನು ಪ್ರತಿಯೊಬ್ಬರು ಅರಿಯಬೇಕು. ಆಗ ಮಾತ್ರ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ಮತ್ತು ಅಗತ್ಯ ನೆರವು ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts