More

    ಸ್ವಂತ ಖರ್ಚಿನಲ್ಲಿ ಪರಿವರ್ತಕ, ವಿದ್ಯುತ್ ಸಂಪರ್ಕಕ್ಕೆ ಆದೇಶ: ಬಿಜೆಪಿ ವಿರೋಧ, 10ಕ್ಕೆ ಪ್ರತಿಭಟನೆ

    ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ಸಹಿತ ಮೂಲ ಸೌಲಭ್ಯ ಒದಗಿಸುವ ಯೋಜನೆ ಕೈಬಿಟ್ಟಿರುವ ರಾಜ್ಯ ಸರ್ಕಾರ, ಸ್ವಂತ ಖರ್ಚಿನಲ್ಲೇ ವಿದ್ಯುತ್ ಸಂಪರ್ಕ ಪಡೆಯುವ ಆದೇಶ ಮಾಡಿರುವುದು ರೈತ ವಿರೋಧಿಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ದೂರಿದರು.
    ಬರ ಹಿನ್ನೆಲೆಯಲ್ಲಿ ಮುಂಗಾರು ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಯೋಜನೆ ರದ್ದುಪಡಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
    ಹಿಂದೆಲ್ಲ 20 ಸಾವಿರ ರೂ. ನೋಂದಣಿ ಶುಲ್ಕ ಕಟ್ಟಿದರೆ ವಿದ್ಯುತ್ ಪರಿವರ್ತಕ ಸಹಿತ ಒಳಗೊಂಡಂತೆ ಎಲ್ಲ ರೀತಿಯ ಅಗತ್ಯ ಮೂಲ ಸೌಲಭ್ಯ ಸಿಗುತ್ತಿತ್ತು. ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ಡಿ.ಎಂ. ವಿನೋದ್‌ಕುಮಾರ್ ಅ.7ರಂದು ಹೊರಡಿಸಿದ ಈ ಆದೇಶದಿಂದಾಗಿ ಸೆ.22ರಿಂದ ರೈತರು ವಿದ್ಯುತ್ ಸಂಪರ್ಕಕ್ಕೆ 4-5 ಲಕ್ಷ ರೂ. ಖರ್ಚು ಮಾಡಬೇಕಾಗಿದೆ ಎಂದು ಹೇಳಿದರು.
    ಸರ್ಕಾರ ಕೂಡಲೇ ನೂತನ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ನ. 10ರಂದು ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ದಾವಣಗೆರೆಯಲ್ಲಿ ಅಂದು ಪಂಚಮಸಾಲಿ ಸಮಾಜದ ಹೋರಾಟ ನಡೆಯುವ ಹಿನ್ನಲೆಯಲ್ಲಿ ಬೇರೆ ದಿನಗಳಂದು ಪ್ರತಿಭಟನೆ ಆಯೋಜಿಸಲಾಗುವುದು ಎಂದು ತಿಳಿಸಿದರು.
    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ರೈತರ ಆತ್ಮಹತ್ಯೆಯಾಗಿವೆ. ಹಗಲು ವೇಳೆ ವಿದ್ಯುತ್ ಸಿಗದೇ ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ಅನ್ನದಾತರು ಬಸವಳಿದಿದ್ದಾರೆ. ರೈತಪರ ಉಯೋಜನಗಳಾದ ಕಿಸಾನ್‌ಸಮ್ಮಾನ್, ರೈತ ವಿದ್ಯಾನಿಧಿ, ಭೂ ಚೇತನ, ಭೂ ಸಿರಿ, ರೈತ ಶಕ್ತಿ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮೊದಲಾದ ಯೋಜನೆಗಳನ್ನು ಅನುದಾನದ ಕೊರತೆ ನೆಪವೊಡ್ಡಿ ರದ್ದು ಮಾಡಿರುವುದು ಸರಿಯಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಟೀಕಿಸಿದರು.
    ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಐದು ಗ್ಯಾರಂಟಿಗಳ ಜಾರಿ ಮೂಲಕ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ರೈತರು, ಜನಸಾಮಾನ್ಯರ ಮೇಲೆ ಇನ್ನಿಲ್ಲದ ತೆರಿಗೆ ಹಾಕುತ್ತಿದೆ ಎಂದು ಹೇಳಿದರು.
    ರಾಜ್ಯ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ಬಿ.ಎಂ. ಸತೀಶ್ ಮಾತನಾಡಿ, ಮುಖ್ಯಮಂತ್ರಿಯವರೇ ಇಂಧನ ಇಲಾಖೆ ಸಭೆ ನಡೆಸುತ್ತಿರುವುದನ್ನು ನೋಡಿದರೆ ಇಂಧನ ಸಚಿವರು ಕಳೆದುಹೋಗಿದ್ದಾರೆ ಎನಿಸುತ್ತದೆ. ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ನೀಡುವುದಾಗಿ ಸಿಎಂ ಹೇಳಿದ್ದಾರೆ. ಅದರಂತೆ ನಡೆದುಕೊಳ್ಳಲಿ. ಅಡೆತಡೆಯಿಲ್ಲದೆ ವಿದ್ಯುತ್ ಪೂರೈಸಲಿ ಎಂದು ಆಗ್ರಹಿಸಿದರು.
    ಮೋರ್ಚಾದ ಧನಂಜಯ ಕಡ್ಲೇಬಾಳು, ಬಸವರಾಜ್ ಕಡ್ಲೇಬಾಳು, ಎ.ಎಂ. ಶಿವಪ್ರಕಾಶ್, ಬಿ.ಕೆ. ಶಿವಕುಮಾರ್, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಕುಂದುವಾಡದ ಗಣೇಶಪ್ಪ, ಅಣಜಿ ಗುಡ್ಡಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts