More

    ಸ್ಮಾರ್ಟ್‌ಸಿಟಿ ಯೋಜನೆ ಹಗರಣಗಳ ಕೂಪ ; ತುಮಕೂರು ಪಾಲಿಕೆ ಸದಸ್ಯರ ಗಂಭೀರ ಆರೋಪ

    ತುಮಕೂರು: ತುಮಕೂರು ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಸಾರ್ವಜನಿಕ ಅಭಿಪ್ರಾಯಗಳಿಗೆ ಪುಷ್ಠಿ ನೀಡುವ ಚರ್ಚೆಗೆ ಮಹಾನಗರ ಪಾಲಿಕೆ ಸದಸ್ಯರೂ ಒಪ್ಪಿಕೊಂಡಿದ್ದು ಅವ್ಯವಾಹರ ತಡೆಯದಿದ್ದರೆ ಸ್ಮಾರ್ಟ್‌ಸಿಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸರ್ವಸದಸ್ಯರು ಸಾಮಾನ್ಯಸಭೆಯಲ್ಲಿಯೇ ರವಾನಿಸಿದರು.

    ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಮೇಯರ್ ರಿದಾಬೇಗಂ, ವಿರೋಧ ಪಕ್ಷದ ನಾಯಕ ಜೆ.ಕುಮಾರ್ ಈ ಬಗ್ಗೆ ಪ್ರಸ್ತಾಪಿಸಿ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಕಾಮಗಾರಿ ನಿರ್ಧರಿಸಿದ್ದಾರೆ. ಪಾಲಿಕೆ ಸದಸ್ಯರ ಗಮನಕ್ಕೂ ತರದೇ ಕಾಮಗಾರಿಯಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

    ಜೆ.ಕುಮಾರ್ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆ ಹಗರಣಗಳ ಕೂಪವಾಗಿದೆ, ಪ್ರತಿಯೊಂದು ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು. 15 ದಿನಗಳ ಒಳಗೆ ಸ್ಮಾರ್ಟ್‌ಸಿಟಿಯ ಎಲ್ಲ ದಾಖಲೆಗಳು ಮಹಾನಗರ ಪಾಲಿಕೆಗೆ ನೀಡಿ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು, ಇಲ್ಲದಿದ್ದರೆ ಸ್ಮಾರ್ಟ್‌ಸಿಟಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು, ಇದಕ್ಕೆ ಉಳಿದ ಸದಸ್ಯರು ಸಹಮತ ವ್ಯಕ್ತಪಡಿಸಿದರು..

    ಜೆಡಿಎಸ್ ಸದಸ್ಯ ಮಂಜುನಾಥ್ ಮಾತನಾಡಿ, ಸ್ಮಾರ್ಟ್‌ಸಿಟಿ ಕಾಮಗಾರಿ ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ, ಅಧಿಕಾರಿಗಳು ಲಂಚ ಹೊಡೆಯಲು ರೂಪಿಸಲಾಗಿದೆ, ಜನರ ಹಣದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು. ಮಾಜಿ ಮೇಯರ್ ರಿದಾ ಬೇಗಂ ಮಾತನಾಡಿ, ಎಲ್ಲ ಯೋಜನೆಗಳನ್ನು ಬದಲಾಯಿಸಲಾಗಿದೆ, ಪ್ರಾಜೆಕ್ಟ್‌ಗಳನ್ನು ಹೇಳದೆ ಕೇಳದೆ ಬದಲಾಯಿಸುವ ಅಧಿಕಾರ ಕೊಟ್ಟವರು ಯಾರು? ಯಾವ ಕೆಲಸವೂ ಸರಿಯಾಗಿ ನಡೆದಿಲ್ಲ. ನಗರದ ಜನ ಪ್ರತಿದಿನ ದೂರುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸದಸ್ಯ ಟಿ.ಎಂ.ಮಹೇಶ್ ಮಾತನಾಡಿ, ಇಂಜಿನಿಯರ್‌ಗಳನ್ನು ಬೆದರಿಸಿ ಸ್ಮಾರ್ಟ್‌ಸಿಟಿ ಕಾಮಗಾರಿ ಬಿಲ್ ಮಾಡಿಸಿಕೊಳ್ಳಲಾಗುತ್ತಿದೆ, ಅಮಾನಿಕೆರೆಗೆ ನೀರು ತುಂಬಿಸುವ ಯೋಜನೆ ವಿಲವಾಗಿದ್ದು ಇದರಲ್ಲಿಯೂ ಅವ್ಯವಹಾರ ನಡೆಸಿದೆ, ಸ್ಮಾರ್ಟ್‌ಸಿಟಿ ಯೋಜನೆ ಸಂಪೂರ್ಣ ವಿಲವಾಗಿದೆ. ನೆಲಕ್ಕೆ ಟೈಲ್ಸ್ ಹಾಕಿ ಬಿಲ್ ಮಾಡಿ, ಹಣ ದೋಚಲಾಗುತ್ತಿದೆ ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ ಎಂದು ಆರೋಪಿಸಿದರು.

    ಸದಸ್ಯರಾದ ಗಿರಿಜಾ, ಸೈಯದ್ ನಯಾಜ್ ಮತ್ತಿತರರು ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನಗಳಿದ್ದು ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ತರಾತುರಿಯಲ್ಲಿ ಸಭೆ ಕರೆಯಲಾಗಿದೆ, ಅಜೆಂಡಾ ಪ್ರತಿ ಕೂಡ ಕೊನೆಯ ಕ್ಷಣದಲ್ಲಿ ನೀಡಲಾಗಿದೆ ಎಂದು ಸದಸ್ಯ ಮನು ಸಭೆಯ ಆರಂಭದಲ್ಲಿಯೇ ಆಕ್ಷೇಪಿಸಿದ್ದರು. ಮೇಯರ್ ಬಿ.ಜಿ.ಕೃಷ್ಣಪ್ಪ, ಸಂಸದ ಜಿ.ಎಸ್.ಬಸವರಾಜು, ಉಪ ಮೇಯರ್ ನಾಜಿಮಾಬಿ, ಆಯುಕ್ತೆ ರೇಣುಕಾ ಇದ್ದರು.

    ಖಾಲಿ ನಿವೇಷನ ತೆರಿಗೆ ಇಳಿಸಲು ಒಪ್ಪಿಗೆ: ನಗರದಲ್ಲಿ ಖಾಲಿ ಇರುವ ನಿವೇಶನಗಳ ತೆರಿಗೆಯನ್ನು ಏಕಾಏಕಿ ಹೆಚ್ಚಿಸಿರುವ ಬಗ್ಗೆ ಸಂಸದ ಜಿ.ಎಸ್.ಬಸವರಾಜು ಸಭೆಯ ಆರಂಭದಲ್ಲಿಯೇ ಆಕ್ಷೇಪಿಸಿದರು. ಸಾಮಾನ್ಯಸಭೆಯಲ್ಲಿ ಒಪ್ಪಿಗೆ ಪಡೆಯದೆ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದು ಸದಸ್ಯರು ಕೂಡ ಸಂಸದರ ಕತೆ ದನಿಗೂಡಿಸಿದರು. ಕೂಡಲೇ ತೆರಿಗೆಯನ್ನು ಮೊದಲಿನಂತೆಯೇ ಇರಿಸಬೇಕು ಎಂದು ಎಲ್ಲ ಸಮಸ್ಯರು ನಿರ್ಣಯ ಕೈಗೊಂಡರು. ತೆರಿಗೆ ಪರಿಷ್ಕರಣೆ ಬಗ್ಗೆ ನಿರ್ಧರಿಸಲು ಪಾಲಿಕೆ ಸದಸ್ಯರ ಸಮಿತಿ ರಚಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ವರದಿ ನೀಡುವವರೆಗೂ 2021ರ ೆ.9ರ ಹಿಂದೆ ಇದ್ದ ತೆರಿಗೆಯನ್ನೇ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮೇಯರ್ ರಿದಾಬೇಗಂ ಹಾಗೂ ಆಯುಕ್ತೆ ರೇಣುಕಾ ನಡುವೆ ಮಾತಿನ ಚಕಮಕಿಯೂ ನಡೆಯಿತು. ಹಿಂದಿನ ತೆರಿಗೆ ಮರು ಅನುಷ್ಠಾನಕ್ಕೆ ತಿಂಗಳು ಸಮಯ ಬೇಕು ಎಂದ ಆಯುಕ್ತೆ ರೇಣುಕಾಗೆ ರಿದಾಬೇಗಂ ತೀವ್ರ ತರಾಟೆ ತೆಗೆದುಕೊಂಡರು,
    ಹೊಸ ಅಪ್‌ಡೇಟ್ ಏನೂ ಇಲ್ಲ, ಈ ಹಿಂದಿನ ತಂತ್ರಾಂಶವೇ ಆಗಿರುವುದರಿಂದ ಬ್ಯಾಕಪ್ ಇರುತ್ತದೆ. ಅಷ್ಟೊಂದು ಸಮಯ ಏಕೆ ಬೇಕು? ಹರಿಹಾಯ್ದರು. ಒಂದು ವಾರದಲ್ಲಿ ಹಿಂದಿನ ತೆರಿಗೆ ಮಾದರಿ ಜಾರಿಯಾಗಬೇಕು, ಇಲ್ಲದಿದ್ದರೆ ನಾನೇ ಕೋಡಿಂಗ್‌ಗೆ ಕೂರುತ್ತೇನೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts