More

    ಸ್ಥಗಿತಗೊಂಡ ಹಾಲು ಉತ್ಪಾದಕರ ಸಂಘ ಪುನಶ್ಚೇತನ

    ಸಿದ್ದಾಪುರ: ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಸ್ಥಗಿತಗೊಂಡ ಹಾಲು ಉತ್ಪಾದಕರ ಸಂಘಗಳನ್ನು ಪುನಶ್ಚೇತನಗೊಳಿಸಲಾಗುವುದು. ಜತೆಗೆ ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸಿ ಸಂಪೂರ್ಣ ಹೈನುಗಾರಿಕೆ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಧಾರವಾಡ ಹಾಲು ಒಕ್ಕೂಟದ್ದಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.

    ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಕಿಲವಳ್ಳಿಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ ಧಾರವಾಡ ಹಾಲು ಒಕ್ಕೂಟದ ಸಹಕಾರದಲ್ಲಿ ಕಿಲವಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಕ.ಹಾ.ಮ. ಸಂಜೀವಿನಿ ಯೋಜನೆಯಡಿ ಆಯೋಜಿಸಿದ್ದ ಗ್ರಾಮ ಮಟ್ಟದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.

    ಒಕ್ಕೂಟ ವ್ಯಾಪ್ತಿಯಲ್ಲಿ ನಿತ್ಯ 2 ಲಕ್ಷ 50 ಸಾವಿರ ಲೀಟರ್​ನಷ್ಟು ಹಾಲು ಶೇಖರಣೆ ಆಗುತ್ತಿದೆ. ಧಾರವಾಡ ಹಾಲು ಒಕ್ಕೂಟ ಈಗ ಸದೃಢವಾಗಿದ್ದು ಯಾವುದೇ ಋಣಭಾರ ಇಲ್ಲ. ಇತ್ತೀಚಿನ ದಿನಗಳಲ್ಲಿ ಹೈನೋದ್ಯಮದಲ್ಲಿ ತಂತ್ರಜ್ಞಾನ ಹೆಚ್ಚು ಬಳಕೆ ಆಗುತ್ತಿರುವದರಿಂದ ಪಾರದರ್ಶಕ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯನಿರ್ವಹಿಸಬೇಕು. ಹಾಲು ಉತ್ಪಾದಕರು ಒಕ್ಕೂಟದಿಂದ ಸಿಗುವ ಸೌಲಭ್ಯ ಹಾಗೂ ತರಬೇತಿ ಪಡೆದು ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಬೇಕು ಎಂದು ಸಲಹೆ ನೀಡಿದರು.

    ಕಿಲವಳ್ಳಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ನಯನಾ ಅಣ್ಣಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ, ತಾಪಂ ಸದಸ್ಯೆ ಗಿರಿಜಾ ಕಲ್ಲೇಶ ಗೌಡ, ಗ್ರಾಪಂ ಅಧ್ಯಕ್ಷೆ ಭಾರತಿ ಜಿ. ಹೆಗಡೆ, ಗ್ರಾಪಂ ಸದಸ್ಯ ರಾಮಚಂದ್ರ ನಾಯ್ಕ, ಸ್ಥಳೀಯ ಮುಖಂಡ ಎನ್.ಎಲ್. ಗೌಡ, ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಸಿ.ಎಸ್. ಪರಮೇಶ್ವರಪ್ಪ, ಶಬರಿ ಉಪಸ್ಥಿತರಿದ್ದರು.

    ಉಪನ್ಯಾಸ: ಗುಣಮಟ್ಟ ಹಾಗೂ ಶುದ್ಧ ಹಾಲು ಉತ್ಪಾದನೆ ಕುರಿತು ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿವೃತ್ತ ಉಪವ್ಯವಸ್ಥಾಪಕ ಡಿ.ಎಸ್. ಹೆಗಡೆ ಉಪನ್ಯಾಸ ನೀಡಿದರು. ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ, ಕಾರ್ಯದರ್ಶಿ ನೇತ್ರಾವತಿ ಗೌಡ, ರಾಧಾ ಜಿ. ನಾಯ್ಕ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts