More

    ಸ್ತ್ರೀಯರು ರಾಜಕೀಯ ನಾಯಕತ್ವಕ್ಕಾಗಿ ಒಗ್ಗೂಡಲಿ  – ರೂಪಾ ಹಾಸನ ಆಶಯ – ಮಹಿಳಾ ರಾಜ್ಯ ಸಮ್ಮೇಳನ 

    ದಾವಣಗೆರೆ: ಸ್ತ್ರೀಯರು ಮತಬ್ಯಾಂಕ್ ಆಗದೆ, ಶೇ. 50ಕ್ಕೂ ಮೀರಿ ರಾಜಕೀಯ ನಾಯಕತ್ವ ಪ್ರತಿಷ್ಠಾಪಿಸುವಲ್ಲಿ ಒಗ್ಗೂಡಿ ಕೆಲಸ ಮಾಡುವ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ರೂಪಾ ಹಾಸನ ಆಶಿಸಿದರು.
    ನಗರದ ಬೀರಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ಶನಿವಾರ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ, ರಾಜ್ಯ ಮಟ್ಟದ ಏಳನೇ ಮಹಿಳಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
    ಮಹಿಳೆಯರ ಹೆಜ್ಜೆಗಳು ಬಹುಮುಖಿ ಆಗಬೇಕಿದೆ. ಎಲ್ಲ ರಂಗ, ಎಲ್ಲ ಹಂತದಲ್ಲೂ ಹೆಚ್ಚು ಸಶಕ್ತರಾಗಬೇಕಿದೆ. ಸಂವಿಧಾನದ ಸಮಾನತೆ ಆಶಯ ಜಾರಿಗಾಗಿ ಹೆಣ್ಣಿನ ಮೇಲಿನ ಕ್ರೌರ್ಯದ ವಿರುದ್ಧ ಕಾರ್ಯಯೋಜನೆ ಸಿದ್ಧಪಡಿಸಬೇಕಿದೆ. ಸರ್ಕಾರಗಳು ಮಂಡಿಸುವ ಬಜೆಟ್ ಪೂರ್ವದಲ್ಲೇ ಹೆಣ್ಣಿನ ಅಗತ್ಯತೆಗಳ ಹಕ್ಕೊತ್ತಾಯ ಬಿಡುಗಡೆ ಮಾಡಬೇಕಿದೆ ಎಂದು ಆಶಿಸಿದರು.
    ಮಾರುಕಟ್ಟೆಯಲ್ಲಿ ಬಹುದೊಡ್ಡ ಮಾರಾಟ ವಸ್ತುವಾಗಿರುವ ಹೆಣ್ಣುಮಕ್ಕಳು, ಲೈಂಗಿಕ ಸರಕಾಗಿಯೂ ಬಳಕೆಯಾಗುತ್ತಿರುವುದು ದುರಾದೃಷ್ಟಕರ. ದೇಶದಲ್ಲಿ 25 ಲಕ್ಷಕಕ್ಕೂ ಹೆಚ್ಚು ಯುವತಿಯರು ಕಳ್ಳಸಾಗಣೆ ಮೂಲಕ ಬಲವಂತದ ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಿರುವುದಾಗಿ ಮಹಿಳಾ ಮಕ್ಕಳ ಸಚಿವಾಲಯವು 20 ವರ್ಷದ ಹಿಂದೆಯೇ ದಾಖಲೆ ಬಿಡುಗಡೆ ಮಾಡಿದೆ.
    ಎನ್‌ಜಿಒ ಪ್ರಚೋದನೆ ಮೂಲಕ ಲೈಂಗಿಕ ಕಾರ್ಯಕರ್ತೆಯರು ಎಂಬ ಸಮುದಾಯ ಸೃಷ್ಟಿಯಾಗಿರುವುದು ದುರಂತ. ಮಹಿಳೆಯರೇ ಇಷ್ಟಪಟ್ಟು ವೇಶ್ಯಾವೃತ್ತಿ ಆಯ್ದುಕೊಂಡು ತಡೆಯಿಲ್ಲದಂತೆ ಹೆಣ್ಣಿನ ದೇಹ ವ್ಯಾಪಾರಕ್ಕೆ ಎಡೆಮಾಡಲು ಬಂಡವಾಳಶಾಹಿ ವ್ಯವಸ್ಥೆ ವ್ಯವಸ್ಥಿತ ಜಾಲ ರೂಪಿಸಿದೆ. ಇದರಿಂದ ನಾವು ಬಿಡಿಸಿಕೊಳ್ಳುವ ಬಗ್ಗೆಯೂ ನಾವಿಂದು ಆಲೋಚನೆ ಮಾಡಬೇಕಿದೆ ಎಂದು ಹೇಳಿದರು.
    ಹೆಣ್ಣಿನ ಮೇಲೆ ಪುರುಷರ ಕ್ರೌರ್ಯ, ಪ್ರಕ್ರಿಯೆಯಾಗಿ ಬೆಳೆದುಬಂದಿದೆ. ಹೀಗಾಗಿ ಬಹು ಆಯಾಮದಲ್ಲಿ ಹೆಣ್ಣು ಸಂಕುಲ ಉಳಿಸಬೇಕಿದೆ. ಹೆಣ್ಣಿನ ಸಂತತಿ ಸತ್ತುಹೋದರೆ ಮನುಕುಲವೇ ನಾಶವಾಗಲಿದೆ ಎಂಬ ಎಚ್ಚರ ಎಲ್ಲರಲ್ಲೂ ಬೇಕಿದೆ. ಪುರುಷ ಪ್ರಧಾನ ಸಮಾಜವನ್ನು ಬದಲಾವಣೆ ಮಾಡಿ ಸಮಾನತೆ ಆಶಯದ ಮೇಲೆ ಮಹಿಳೆಯರ ಔನ್ನತ್ಯಕ್ಕೆ ದಾರಿ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.
    ಮಹಿಳೆಯರು ಸಂಸ್ಕೃತಿಯ ನಿರ್ಮಾಪಕರು ಆಗಬೇಕಿದೆ. ಶಿಕ್ಷಣ ವಂಚಿತ ಗ್ರಾಮೀಣ ಹೆಣ್ಣುಮಕ್ಕಳು ಗೃಹೋದ್ಯಮ ಅಳಿವಿನಂಚಿನಲ್ಲಿರುವ ಹಿನ್ನೆಲೆಯಲ್ಲಿ ಅಡ್ಡದಾರಿಗೆ ಸಿಲುಕುತ್ತಿದ್ದಾರೆ. ಹೀಗಾಗಿ ಸಂಘಟನೆಗಳು ನಗರಕೇಂದ್ರಿತವಾಗದೆ ಹಳ್ಳಿ ಹೆಣ್ಣುಮಕ್ಕಳ ಕಡೆ ಮುಖ ಮಾಡಬೇಕು ಎಂದು ಆಶಿಸಿದರು.
    ಸ್ತ್ರೀಯರ ಮೇಲಿನ ಮಿತಿಮೀರಿದ ಕ್ರೌರ್ಯವನ್ನು ಖಂಡಿಸಿ ಮಾ.8ರಂದು ಎಲ್ಲ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಕರಾಳ ಮಹಿಳಾ ದಿನ ಆಚರಿಸುವ ಮೂಲಕ ಸರ್ಕಾರ ಮತ್ತು ಸಮಾಜಕ್ಕೆ ಮಹಿಳಾ ಸಶಕ್ತ ಪ್ರತಿರೋಧವನ್ನು ಪ್ರದರ್ಶಿಸಬೇಕು ಎಂದೂ ಮನವಿ ಮಾಡಿದರು.
    ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿ ಸ್ತ್ರೀಯರಿಗೆ ಧೈರ್ಯ ಇಲ್ಲದಂತೆ ಬದುಕಿಸಿರುವ ಸಮಾಜ, ನಮ್ಮನ್ನು ಎರಡನೇ ದರ್ಜೆ ನಾಗರಿಕಳಂತೆ ಪರಿಗಣಿಸುತ್ತಿದೆ. ಎಲ್ಲ ರಂಗದಲ್ಲಿ ಮುಂದಿರುವ ಮಹಿಳೆ ಸಮಾನತೆಯಲ್ಲಿ ಮುನ್ನುಗ್ಗಿಲ್ಲ. ಮೊದಲು ಮೌಢ್ಯಗಳಿಂದ ಹೊರಬರಬೇಕಿದೆ ಎಂದು ಆಶಿಸಿದರು.
    ಜಾತಿ-ಧರ್ಮ ಹಾಗೂ ಮತಗಳ ಹೆಸರಿನಲ್ಲಿ ಮಹಿಳೆಯರನ್ನು ವಿಭಜಿಸಲಾಗುತ್ತಿದೆ. ಬಂಡವಾಳಶಾಹಿಗಳಿಗೆ ಮಣೆ ಹಾಕಿರುವ ಎಲ್ಲ ಪಕ್ಷಗಳು ಮಹಿಳೆಗೆ ಸಾಮಾಜಿಕ ನ್ಯಾಯ ನೀಡಿಲ್ಲ. ಲೈಂಗಿಕ ಕಿರುಕುಳ ವಿರುದ್ಧ ಮಹಿಳಾ ಕುಸ್ತಿಪಟುಗಳು ಹೋರಾಟಕ್ಕಿಳಿದು ಸರ್ಕಾರ ಸ್ಪಂದಿಸದಿದ್ದಾಗ ಕೆಲವು ಕ್ರೀಡಾಪಟುಗಳು ಪದಕ, ಬಿರುದು ಹಿಂತಿರುಗಿಸಿದರು. ಸ್ತ್ರೀಯರ ಪರ ಹೋರಾಟಗಳಿಗೆ ಸಮಾಜ ಕೈಜೋಡಿಸಬೇಕು ಎಂದು ಆಶಿಸಿದರು.
    ಎಐಎಂಎಸ್‌ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಛಬ್ಬಿ ಮೊಹಂತಿ ಮಾತನಾಡಿ ದೇಶದಲ್ಲಿ ಸರ್ಕಾರ ಬದಲಾವಣೆ ಮಾಡಿದ ಮಾತ್ರಕ್ಕೆ ಸ್ತ್ರೀಯರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದು ತಪ್ಪುಕಲ್ಪನೆ. ನಮಗಿಂದು ಶಾಶ್ವತ ಸರ್ಕಾರ ಬೇಕಿದೆ. ಮಾನವೀಯತೆ ಸಾಯಬಾರದು ಎಂದು ಆಶಯ ವ್ಯಕ್ತಪಡಿಸಿದರು.
    ಎಐಎಂಎಸ್‌ಎಸ್ ರಾಷ್ಟ್ರೀಯ ಉಪಾಧ್ಯಕ್ಷೆ ಡಾ.ಸುಧಾ ಕಾಮತ್ ಮಾತನಾಡಿ ಇಂದು ಮಹಿಳೆಯರಲ್ಲೇ ರಕ್ತಹೀನತೆ, ಅಪೌಷ್ಟಿಕತೆ ಹೆಚ್ಚಿದೆ. ಜೋಸೆಫ್ ಬೋರ್ ಸಮಿತಿ ಆರೋಗ್ಯ ಸೇವೆಗಳ ಕುರಿತು 1946ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಶಿಫಾರಸುಗಳು ಶೈತ್ಯಾಗಾರದಲ್ಲೇ ಕೊಳೆಯುತ್ತಿದೆ. ಜಾಗತೀಕರಣದ ಬಳಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕತ್ತು ಹಿಸುಕಿ ಕಾರ್ಪೊರೇಟೀಕರಣ ಮಾಡಲಾಗಿದೆ. ಮಹಿಳೆಯರ ಪರವಾಗಿದ್ದ ಸೋವಿಯತ್ ಒಕ್ಕೂಟದ ಮಾದರಿ ಸರ್ಕಾರದ ಅಗತ್ಯವಿದೆ ಎಂದರು.
    ಕಾರ್ಯಕ್ರಮದಲ್ಲಿ ಎಐಎಂಎಸ್‌ಎಸ್‌ನ ರಾಷ್ಟ್ರೀಯ ಅಧ್ಯಕ್ಷೆ ಕೆಯಾ ಡೆ, ರಾಜ್ಯ ಕಾರ್ಯದರ್ಶಿ ಎಸ್. ಶೋಭಾ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷೆ ಡಾ.ಪಿ.ಎಂ. ಅನುರಾಧಾ, ಎಂ.ಆರ್.ಹಿರೇಮಠ್, ನಿವೃತ್ತ ಪ್ರಾಚಾರ್ಯ ಕೆ.ಎಸ್.ಈಶ್ವರಪ್ಪ, ಬಿ.ಟಿ.ಜಾಹ್ನವಿ, ಎಸ್. ರವಿನಾರಾಯಣ್, ಮಲ್ಲಿಕಾರ್ಜುನ ಗೊಳಸಂಗಿ ಇತರರಿದ್ದರು.
    ಸಮ್ಮೇಳನಕ್ಕೂ ಮುನ್ನ ಜಯದೇವ ವೃತ್ತದಿಂದ ಮೆರವಣಿಗೆ ನಡೆಸಲಾಯಿತು. ಪ್ರಮುಖರ ಸೂಕ್ತಿ, ಛಾಯಾಚಿತ್ರಗಳ ಪ್ರದರ್ಶನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts