More

    ಸ್ಕೋಡಾ ಅಂದ್ರೆ ಬಿಟ್​ಬಿಡ್ಬೇಕಾ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನೀನು ಐಷಾರಾಮಿ (ಸ್ಕೋಡಾ) ಕಾರಲ್ಲಿ ಬಂದರೆ ಸುಮ್ಮನೆ ಬಿಟ್ಟು ಬಿಡಬೇಕಾ ? ನಿನ್ನ ಮಾಸ್ಕ್ ಎಲ್ಲಿದೆ ? ಜೇಬಲ್ಲಿ ಯಾಕೆ ಇಟ್ಟುಕೊಂಡಿದ್ದೀಯಾ ? ಹೇ ಯಾರಪ್ಪ ಅಲ್ಲಿ, ಈ ಕಾರ್ ನಂಬರ್ ನೋಟ್ ಮಾಡ್ಕೊಳಿ.. ಡಾಕ್ಯುಮೆಂಟ್ ಚೆಕ್ ಮಾಡಿ… ಪಾಸ್ ಇಲ್ಲದೇ ಹೊರಗೆ ಬಂದ್ರೆ ಗಾಡಿ ಸೀಜ್ ಮಾಡಿ.. ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡ ಹಾಕಿ…

    ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್​ನಲ್ಲಿ ಮಂಗಳವಾರ ವಾಹನದವರ ಬೆವರಿಳಿಸಿದ ರೀತಿ ಇದು. ಲಾಕ್​ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕ್ರಮಕ್ಕೆ ಸ್ವತಃ ಆಯುಕ್ತರೇ ಫೀಲ್ಡ್​ಗೆ ಇಳಿಯುವ ಮೂಲಕ ವಾಹನ ಸವಾರರನ್ನು ತರಾಟೆಗೆ ತೆಗೆದುಕೊಂಡರು.

    ಇನ್ಸ್​ಪೆಕ್ಟರ್, ಹತ್ತಾರು ಸಿಬ್ಬಂದಿ ಜತೆಯಲ್ಲಿ ಮೂರು ಜೀಪ್​ಗಳಲ್ಲಿ ನಗರ ಪ್ರದಕ್ಷಿಣೆ ನಡೆಸಿದ ಅವರು, ಪ್ರಮುಖ ವೃತ್ತಗಳಲ್ಲಿ ನಿಂತು ವಾಹನಗಳ ತಪಾಸಣೆ ನಡೆಸಿದರು. ಧ್ವನಿವರ್ದಕ ಹಿಡಿದು ಸಾರ್ವಜನಿಕರಲ್ಲಿ ಲಾಕ್​ಡೌನ್ ಪಾಲಿಸುವಂತೆ ಜಾಗೃತಿ ಮೂಡಿಸಿದರು. ನ್ಯೂ ಕಾಟನ್ ಮಾರ್ಕೆಟ್​ನಲ್ಲಿ ಕೆಲವೇ ಕ್ಷಣಗಳಲ್ಲಿ ಹತ್ತಕ್ಕೂ ಹೆಚ್ಚು ಬೈಕ್, ಕಾರು ಜಪ್ತಿ ಮಾಡಿದರು.

    ಸ್ಕೋಡಾ ಕಾರಿನಲ್ಲಿ ಜುಮ್ ಎನ್ನುವಂತೆ ಬಂದ ವ್ಯಕ್ತಿಯೊಬ್ಬನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ಕಾರ್ ವಶಕ್ಕೆ ಪಡೆಯಲು ಅಧೀನ ಅಧಿಕಾರಿಗಳೀಗೆ ಸೂಚಿಸಿದರು. ಹೆಲ್ಮೆಟ್ ಧರಿಸದ ಸವಾರರೊಬ್ಬರ ಪತ್ನಿ ಬಂದು ಆಸ್ಪತ್ರೆಗೆ ಹೊರಟಿದ್ದಾಗಿ ಹೇಳಿಕೊಂಡಾಗ, ದಂಡ ಕಟ್ಟಿಸಿಕೊಂಡು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಲಾಕ್​ಡೌನ್ ಹಾಗೂ ಕಂಟೈನ್​ವೆುಂಟ್ ಪ್ರದೇಶಗಳಲ್ಲಿ ಜನರ ಅನಗತ್ಯ ಓಡಾಟ ನಿಯಂತ್ರಿಸಲೆಂದು ಪೊಲೀಸ್ ಆಯುಕ್ತರು ಸ್ವತಃ ಫೀಲ್ಡ್​ಗೆ ಇಳಿದಿರುವ ಕಾರಣ ಕೆಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.

    ಚೀತಾ ಹದ್ದಿನ ಕಣ್ಣು: ಪೊಲೀಸ್ ಆಯುಕ್ತರ ಜತೆಗೆ ಚೀತಾ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಪೊಲೀಸ್ ಸಿಬ್ಬಂದಿ ವಾಹನ ಸವಾರರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಆಯುಕ್ತರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಬೆನ್ನಟ್ಟಿ ಹಿಡಿದು ದಂಡ ವಿಧಿಸಿದರು. ಅನಗತ್ಯವಾಗಿ ಓಡಾಡುವ ಪಾದಚಾರಿಗಳನ್ನು ತಡೆದು ಪ್ರಶ್ನಿಸಿ, ಖಡಕ್ ಎಚ್ಚರಿಕೆ ನೀಡಿದರು.

    ಮಂಗಳವಾರ ಬೆಳಗ್ಗೆ ಚನ್ನಮ್ಮ ವೃತ್ತದಲ್ಲಿ ಅನಗತ್ಯವಾಗಿ ತಿರುಗುತ್ತಿದ್ದ ವಾಹನ ಸವಾರರನ್ನು ಪೊಲೀಸರು ತಡೆದು, ವಿಚಾರಿಸಿದರು. ಹವ್ಯಾಸಕ್ಕಾಗಿ ಓಡಾಡಿದರೆ ವಾಹನ ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಲಾಕ್​ಡೌನ್ ಸ್ವಲ್ಪ ಸಡಿಲಿಕೆಯಿಂದಾಗಿ ಕೆಲಸದ ನಿಮಿತ್ತ ಸಂಚರಿಸುವವರ ಸಂಖ್ಯೆಯಲ್ಲಿ ಮಂಗಳವಾರ ಹೆಚ್ಚಳ ಕಂಡುಬಂದಿತು.

    ಬ್ಯಾರಿಕೇಡ್ ಸರಿಸಿ ಬೈಕಲ್ಲಿ ಪರಾರಿ ! : ಕರೊನಾ ಸೋಂಕಿತ ವ್ಯಕ್ತಿಗಳ ಮನೆ ಇರುವ ಕರಾಡಿ ಓಣಿ, ಮುಲ್ಲಾ ಓಣಿ ಸುತ್ತಮುತ್ತ ಕಂಟೈನ್​ವೆುಂಟ್ ಪ್ರದೇಶದಲ್ಲಿ ಕೆಲ ಜನ ರಾಜಾರೋಷವಾಗಿ ರಸ್ತೆಗೆ ಇಳಿಯುತ್ತಿದ್ದಾರೆ.

    ಕರಾಡಿ ಓಣಿ ಪಕ್ಕದ ಗವಿ ಓಣಿಯಲ್ಲಿ ಬ್ಯಾರಿಕೇಡ್ ಸರಿಸಿ ಮತ್ತೆ ಯಥಾಸ್ಥಿತಿಗೆ ಬ್ಯಾರಿಕೇಡ್ ಇಟ್ಟು ಬೈಕ್​ನಲ್ಲಿ ತೆರಳುತ್ತಿದ್ದ ದೃಶ್ಯ ಮಂಗಳವಾರ ಕಂಡುಬಂತು. ಮಕ್ಕಳು ರಸ್ತೆಯಲ್ಲೇ ಬ್ಯಾಡ್ಮಿಂಟನ್ ಆಡಿದರೆ, ಯುವಕರು ಕಟ್ಟೆಯ ಮೇಲೆ ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದು, ಸಾಮಾಜಿಕ ಅಂತರ ಪಾಲಿಸುತ್ತಿರಲಿಲ್ಲ.

    ಪೊಲೀಸರಿಲ್ಲ: ಮುಲ್ಲಾ ಓಣಿ, ಕರಾಡಿ ಓಣಿ, ಗವಿ ಓಣಿ ಸೇರಿ ಕಂಟೈನ್​ವೆುಂಟ್ ಪ್ರದೇಶದಲ್ಲಿ ಪೊಲೀಸರು ಅಷ್ಟಾಗಿ ಕಂಡುಬರಲಿಲ್ಲ. ಡಾಕಪ್ಪ ವೃತ್ತದಲ್ಲಿ ಭದ್ರತೆಗೆ ನಿಯೋಜಿಸಿದ್ದ ಶಿಗ್ಗಾಂವಿಯ ಕೆಎಸ್​ಆರ್​ಪಿ ಸಿಬ್ಬಂದಿಯನ್ನೂ ನೂರಾನಿ ಮಾರ್ಕೆಟ್ ಮತ್ತಿತರೆಡೆಗೆ ಸ್ಥಳಾಂತರಿಸಲಾಗಿದೆ. ಜನ ನಿರ್ಭೀತಿಯಿಂದ ಓಡಾಡಲು ಇದೂ ಒಂದು ಕಾರಣವಾಗಿದೆ.

    ಅಲ್ಲಿ ವಿರಳ…: ಸೀಲ್​ಡೌನ್ ಘೊಷಣೆಯಾಗಿರುವ ಕೇಶ್ವಾಪುರ ಆಜಾದ್ ಕಾಲನಿಯಲ್ಲಿ ಮಂಗಳವಾರ ವಿರಳ ಜನ ಸಂಚಾರ ಕಂಡುಬಂದಿತು. ಔಷಧ ಅಂಗಡಿ ಸೇರಿ ಅಗತ್ಯ ವಸ್ತುಗಳ ಖರೀದಿಗಷ್ಟೇ ಜನರು ರಸ್ತೆಯಲ್ಲಿ ತಿರುಗುತ್ತಿದ್ದರು. ಸೀಲ್​ಡೌನ್ ಪ್ರದೇಶದಿಂದ ಹೊರಬರಲು ಯತ್ನಿಸುತ್ತಿದ್ದ ಕೆಲವರನ್ನು ಪೊಲೀಸರು ಮರಳಿ ಕಳುಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts