More

    ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಿ

    ಹನೂರು: ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ದೊರಕುವ ಸವಲತ್ತುಗಳ ಪ್ರಯೋಜನವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದುವುದರ ಜತೆಗೆ ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಆರ್.ನರೇಂದ್ರ ಸಲಹೆ ನೀಡಿದರು.

    ಪಟ್ಟಣದ ಮೈಸೂರು ಮತ್ತು ಚಾ.ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಚೇರಿಯಲ್ಲಿ ಶನಿವಾರ ಲೊಕ್ಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹೊಸ ಸದಸ್ಯತ್ವ ಪಡೆದ ರೈತರಿಗೆ ಬೆಳೆಸಾಲ ಯೋಜನೆಯಡಿ ಸಾಲದ ಚೆಕ್ ವಿತರಿಸಿ ಮಾತನಾಡಿದರು.

    ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜ, ರಸಗೊಬ್ಬರ, ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಅಗತ್ಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಅಲ್ಲದೆ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಂಸಿಡಿಸಿಸಿ ಬ್ಯಾಂಕ್ ವತಿಯಿಂದಲೂ ಸಾಲ ನೀಡಲಾಗುತ್ತಿದೆ. ಈ ದಿಸೆಯಲ್ಲಿ 2022-23ನೇ ಸಾಲಿನಲ್ಲಿ ಲೊಕ್ಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 47 ರೈತ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ 45.62 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ರೈತರು ಸೌಲಭ್ಯದ ಪ್ರಯೋಜನ ಪಡೆದುಕೊಂಡು ಅಭಿವೃದ್ಧಿ ಹೊಂದುವ ಜತೆಗೆ ಸಕಾಲಕ್ಕೆ ಸಾಲ ಮರು ಪಾವತಿಸಬೇಕು ಎಂದು ಸಲಹೆ ನೀಡಿದರು.

    ಕಳೆದ ಅವಧಿಯಲ್ಲಿ ಎಂಸಿಡಿಸಿಸಿ ಅಧ್ಯಕ್ಷನಾಗಿದ್ದ ವೇಳೆ ಬ್ಯಾಂಕ್‌ಗಳ ಅಭಿವೃದ್ಧಿಗೆ ಅದರಲ್ಲೂ ಚಾ.ನಗರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ದಿಸೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾಲ ಸೌಲಭ್ಯ ಒದಗಿಸುವುದರ ಜತೆಗೆ ಹಲವು ಸವಲತ್ತುಗಳನ್ನು ನೀಡಲಾಗಿತ್ತು. ಇದರಲ್ಲಿ ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್‌ನಿಂದಲೂ ಹಲವು ಸವಲತ್ತುಗಳನ್ನು ನೀಡಿದ್ದು, ರೈತರು ಪ್ರಯೋಜನ ಪಡೆದಿದ್ದಾರೆ. ಹಾಗಾಗಿ ಬ್ಯಾಂಕ್ ಅಭಿವೃದ್ಧಿ ಹೊಂದುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಲೊಕ್ಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಎಂ.ಗುಣಶೇಖರ್, ಸಿಇಒ ಸುಂದರ್‌ರಾಜನ್, ಎಂಸಿಡಿಸಿಸಿ ಬ್ಯಾಂಕ್ ಜಿಲ್ಲಾ ಮೇಲ್ವಿಚಾರಕ ಯಾಮಣ್ಣ, ಹನೂರು ಬ್ಯಾಂಕ್ ವ್ಯವಸ್ಥಾಪಕ ಎಚ್.ಸೋಮಣ್ಣ, ಮೇಲ್ವಿಚಾರಕ ಡಿ.ಬಾಲಾಜಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts