More

    ಸೋಮವಾರ ಬೆಳಗಾವಿ ಸುವರ್ಣಸೌಧ ಮುತ್ತಿಗೆ – ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಒತ್ತಾಯ

    ದಾವಣಗೆರೆ: ಕೃಷಿ ಕಾಯ್ದೆ ವಾಪಸಾತಿ ಹಾಗೂ ತುರ್ತು ಬರ ಪರಿಹಾರ ಕಾರ್ಯಕ್ರಮ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯಿಂದ ಡಿ.4ರಂದು ಬೆಳಗಾವಿ ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಸಮೀಪಿಸುತ್ತಿದ್ದು, ರೈತರಿಗೆ ಯಾವುದೇ ಉಪಯೋಗಕರ ಕೆಲಸ ಮಾಡಿಲ್ಲ. ಬದಲಾಗಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ವಿಷಕಾರಿ ಕಾನೂನು ಜಾರಿಗೊಳಿಸುವಲ್ಲಿ ತಲ್ಲೀನವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಕೃಷಿಭೂಮಿ ಮಾರಾಟ ಹೆಚ್ಚಾಗಿದ್ದು, ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಸುಮಾರು 35 ಸಾವಿರ ಕೋಟಿ ಆದಾಯ ಬರುತ್ತಿದೆ. ಇದಕ್ಕೆ ಜೋತು ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರನ್ನು ಬಲಿಕೊಡಲು ಹೊರಟಿದ್ದಾರೆ ಎಂದು ತಿಳಿಸಿದರು.
    ಸರ್ಕಾರ ಕೃಷಿಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಕೆ ಆಗದಂತೆ ಮುಂದಿನ ಪೀಳಿಗೆಗೆ ಉಳಿಸಬೇಕು. ಚುನಾವಣಾ ಪೂರ್ವದಲ್ಲಿ ಮಾತು ನೀಡಿದಂತೆ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
    ಸರ್ಕಾರ ರೈತರ ಪಂಪ್‌ಸೆಟ್‌ಗೆ ಅಕ್ರಮ ಸಕ್ರಮದಡಿ ನೀಡುತ್ತಿದ್ದ ಟ್ರಾನ್ಸ್‌ಫಾರಂ ಸೇರಿದಂತೆ ವಿದ್ಯುತ್ ಉಪಕರಣ ನೀಡುವುದನ್ನು ರದ್ದುಗೊಳಿಸಿದ್ದು, ರೈತರ ಹಿತದೃಷ್ಠಿಯಿಂದ ಈ ಅದೇಶ ಕೂಡಲೇ ಹಿಂಪಡೆಯಬೇಕು. ಎಂಎಸ್‌ಪಿ ಜಾರಿಯಾಗದೆ ರೈತರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಕೂಡಲೇ ಎಂಎಸ್‌ಪಿ ಶಾಸನಬದ್ದ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
    ರಾಜ್ಯದಲ್ಲಿ ಬರಗಾಲದಿಂದ ರೈತರ ಸ್ಥಿತಿ ಚಿಂತಾಜನಕವಾಗಿದ್ದು, ಸುಮಾರು 1 ಲಕ್ಷ ಕೋಟಿ ಬೆಳೆನಷ್ಟ ಉಂಟಾಗಿದೆ. ಆದರೆ, ಸರ್ಕಾರ ರೈತರಿಗೆ ವೈಜ್ಞಾನಿಕ ಬೆಳೆನಷ್ಟ ಪರಿಹಾರ ಒದಗಿಸಲು ಮುಂದಾಗಿಲ್ಲ. ರೈತರ ನೆರವಿಗಿಂತ ಅನ್ಯರಾಜ್ಯಗಳ ಚುನಾವಣೆಯೇ ಮುಖ್ಯವಾಗಿದೆ ಎಂದು ಟೀಕಿಸಿದ ಅವರು, ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
    ಕಬ್ಬಿಗೆ ಎಫ್‌ಆರ್‌ಪಿ ಜತೆಗೆ ಎಸ್‌ಎಪಿ ನೀಡಬೇಕು, ತೆಂಗಿಗೆ ವಿದೇಶಿ ಆಮದು ಸುಂಕ ಹೆಚ್ಚಿಸಬೇಕು, ಬರಗಾಲದ ಸಂದರ್ಭದಲ್ಲಿ ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ರೈತರ ಸಾಲ ವಸೂಲಾತಿಗೆ ಮುಂದಾಗಿದ್ದು, ತಕ್ಷಣ ಇದನ್ನು ನಿಲ್ಲಿಸದಿದ್ದರೆ ರೈತರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜ್ ದಾಗಿನಕಟ್ಟೆ, ಕಾಳೇಶ್ ಯಲೋದಹಳ್ಳಿ, ಕರೇಕಟ್ಟೆ ಖಲೀಮುಲ್ಲಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts