More

    ಸೋಂಕಿತರ ಸಮಸ್ಯೆಗೆ ಡೋಂಟ್ ಕೇರ್!

    ರಾಣೆಬೆನ್ನೂರ: ಮೂರು ದಿನವಾದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಟ್ಯಾಬ್ಲೆಟ್ ಬೇಕು ಎಂದರೆ ಎರಡು ಮಹಡಿ ಇಳಿದು ಕೆಳಗೆ ಹೋಗಬೇಕು. ಕುಡಿಯಲು ಬಿಸಿ ನೀರು ಕೊಡುತ್ತಿಲ್ಲ. ಶೌಚಗೃಹಗಳು ಗಬ್ಬೆದ್ದು ನಾರುತ್ತಿದ್ದು, ಕಾಲಿಡಲೂ ಆಗುತ್ತಿಲ್ಲ. ಇಂತಹ ವಾತಾವರಣದಲ್ಲಿ ಕರೊನಾದಿಂದ ಗುಣವಾಗುವ ಭರವಸೆಯೇ ಕಳೆದುಹೋಗುತ್ತಿದೆ!

    ನಗರದ ಹಲಗೇರಿ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ನಿರ್ವಿುಸಿದ ಕೋವಿಡ್-19 ಕೇರ್ ಸೆಂಟರ್​ನ ರೋಗಿಗಳ ಅಳಲು ಇದು.

    ಕಟ್ಟಡದ ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಕೋವಿಡ್-19 ಸೋಂಕಿತ 23 ರೋಗಿಗಳನ್ನು ಇಡಲಾಗಿದೆ. ಆದರೆ, ವೈದ್ಯರು ರೋಗಿಗಳು ಇದ್ದ ಕಡೆ ತೆರಳಿ ಪರೀಕ್ಷೆ ಮಾಡುತ್ತಿಲ್ಲ. ಎರಡ್ಮೂರು ದಿನಕ್ಕೊಂದು ಬಾರಿ ಮಾತ್ರ ಬರುತ್ತಿದ್ದಾರೆ. ಅದು ಕೂಡ ನಾವೇ ಕೆಳಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಬೇಕು. ರೋಗಿಗಳಲ್ಲಿ ವೃದ್ಧರು, ಮಕ್ಕಳು ಇದ್ದಾರೆ. ಅವರು ಹೇಗೆ ಓಡಾಡಬೇಕು ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ವೈದ್ಯರು ಟ್ಯಾಬ್ಲೆಟ್ ತೆಗೆದುಕೊಳ್ಳಲು ಹೇಳಿದ ಬಳಿಕವೂ ಯಾವೊಬ್ಬ ಸಿಬ್ಬಂದಿ ಬಂದು ಟ್ಯಾಬ್ಲೆಟ್ ಕೊಡುತ್ತಿಲ್ಲ. ನಾವೇ ಎರಡು ಮಹಡಿ ಇಳಿದು ಹೋಗಿ ಟ್ಯಾಬ್ಲೆಟ್ ತೆಗೆದುಕೊಂಡು ಬರಬೇಕು. ಕುಡಿಯಲು ಬಿಸಿ ನೀರು ಕೇಳಿದರೆ ಕೊಡುತ್ತಿಲ್ಲ. ಇನ್ನು ಸ್ನಾನದ ವಿಚಾರ ದೂರದ ಮಾತಾಗಿದೆ. ಶೌಚಗೃಹಗಳು ಹೊಲಸು ತುಂಬಿ ಗಬ್ಬೆದ್ದು ನಾರುತ್ತಿವೆ. ಈ ದುರ್ವಾಸನೆಯಿಂದ ಕೊಠಡಿಯೊಳಗೆ ಇರಲು ಸಾಧ್ಯವಾಗುತ್ತಿಲ್ಲ. ಕರೊನಾಗಿಂತಲೂ ದುರ್ವಾಸನೆ ನಮ್ಮ ಜೀವ ಹಿಂಡುತ್ತಿದೆ. ಈವರೆಗೂ ಶೌಚಗೃಹಗಳನ್ನು ಸ್ವಚ್ಛಗೊಳಿಸಿಲ್ಲ. ಇಂಥಹ ವಾತಾವರಣದಲ್ಲಿ ನರಕಯಾತನೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ರೋಗಿಗಳು.

    ಗುಣಮಟ್ಟದ ಊಟ ಮರಿಚಿಕೆ: ಕೋವಿಡ್-19 ರೋಗಿಗಳಿಗೆ ರವೆ ಇಡ್ಲಿ, ಸೆಟ್ ದೋಸೆ, ಅಕ್ಕಿ ಇಡ್ಲಿ, ಬಿಸಿ ಬೇಳೆ ಬಾತ್ ಹಾಗೂ ಕಲ್ಲಂಗಡಿ, ಪಪ್ಪಾಯಿ, ಕರಬೂಜ್ ಹಣ್ಣು, ರೊಟ್ಟಿ, ಚಪಾತಿ, ಅನ್ನ-ಸಾಂಬಾರ್, ಮೊಟ್ಟೆ, ಹಾಲು, ಏಲಕ್ಕಿ ಬಾಳೆಹಣ್ಣು, ಬಿಸ್ಕತ್ ಸೇರಿ ಗುಣಮಟ್ಟದ ಆಹಾರ ನೀಡುವಂತೆ ಇಲಾಖೆ ಸೂಚಿಸಿದೆ. ಆದರೆ, ಇಲ್ಲಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಅವುಗಳನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ಹೀಗಾಗಿ ಬಹುತೇಕ ರೋಗಿಗಳು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರತೊಡಗಿದೆ.

    ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಹೋಗಿದ್ದು, ಸಂಬಂಧಪಟ್ಟವರು ಕೂಡಲೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಗೆ ಬಗೆಹರಿಸಿ ಎಂದು ಇಲ್ಲಿನ ಕೋವಿಡ್ ಸೋಂಕಿತರು ಒತ್ತಾಯಿಸಿದ್ದಾರೆ.

    ಮೂರು ದಿನದ ಹಿಂದೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಆಂಬುಲೆನ್ಸ್​ನಲ್ಲಿ ತಂದು ಕೇರ್ ಸೆಂಟರ್​ನಲ್ಲಿ ಇಟ್ಟಿದ್ದಾರೆ. ಆದರೆ, ಈವರೆಗೂ ಯಾವ ವೈದ್ಯರೂ ಬಂದು ನಮ್ಮನ್ನು ತಪಾಸಣೆ ಮಾಡಿಲ್ಲ. ಟ್ಯಾಬ್ಲೆಟ್ ಆದರೂ ಕೊಡಿ ಎಂದರೆ, ಇಲ್ಲಿರುವ ಸಿಬ್ಬಂದಿ ನೀವೇ ಕೆಳಗೆ ಬಂದು ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಒಂದು ಹನಿ ಬಿಸಿ ನೀರು ನೀಡುತ್ತಿಲ್ಲ. ಈ ರೀತಿ ನಡೆದುಕೊಳ್ಳುವುದಾದರೆ ನಮ್ಮನ್ನೇಕೆ ಇಲ್ಲಿ ತಂದಿಟ್ಟಿದ್ದಾರೆ. ವೃದ್ಧರಾದ ನಾವು ಕೆಳಗೆ ಮೇಲೆ ಓಡಾಡಲು ಆಗುತ್ತದೆಯೇ? ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು.
    | ಚಳಗೇರಿಯ 68 ವರ್ಷದ ವೃದ್ಧೆ, ಕೇರ್ ಸೆಂಟರ್​ನ ರೋಗಿ


    ಕೇರ್ ಸೆಂಟರ್​ನ ರೋಗಿಗಳನ್ನು ದಿನಕ್ಕೆ ಒಂದು ಬಾರಿ ತಪಾಸಣೆ ಮಾಡುತ್ತಿದ್ದೇವೆ. ವೈದ್ಯರು ಪ್ರತಿ ಬಾರಿ ಹೋದಾಗಲೂ ಪಿಪಿಇ ಕಿಟ್ ಹಾಕಿಕೊಂಡು ಹೋಗಬೇಕು. ಹೀಗಾಗಿ ದಿನಕ್ಕೆ ಒಂದೇ ಬಾರಿ ಹೋಗುತ್ತಿದ್ದಾರೆ. ಶೌಚಗೃಹದ ಸ್ವಚ್ಛತೆ ಬಗ್ಗೆ ಕ್ರಮ ವಹಿಸಲು ಸಂಬಂಧಿಸಿದ ಸಿಬ್ಬಂದಿಗೆ ಸೂಚಿಸುತ್ತೇನೆ. ಆದರೆ, ಅಲ್ಲಿರುವ ರೋಗಿಗಳು ಸಹ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಊಟದ ಸಮಸ್ಯೆ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು.
    | ಡಾ. ಸಂತೋಷಕುಮಾರ, ಟಿಎಚ್​ಒ, ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts