More

    ಸೋಂಕಿತರ ವಿಷಯದಲ್ಲಿ ರಾಜಿಯಿಲ್ಲ

    ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅವಶ್ಯಕತೆ ಬಿದ್ದರೆ 200 ಹಾಸಿಗೆ ಹೊಂದಿರುವ ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗುವುದು. ಸೋಂಕಿತರ ಚಿಕಿತ್ಸೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಎಂತಹ ಪರಿಸ್ಥಿತಿಯನ್ನೂ ಎದುರಿಸುವಂತಹ ಸಾಮರ್ಥ್ಯ ಹೊಂದಿದೆ ಎಂದರು. ನಗರದಲ್ಲಿರುವ ಕೋವಿಡ್ 19 ಆಸ್ಪತ್ರೆ ಜತೆಗೆ ಜಿಲ್ಲೆಯ ಎಲ್ಲ ಮುರಾರ್ಜಿ ವಸತಿ ಶಾಲೆಗಳಲ್ಲಿ ಸೋಂಕಿತರಿಗೆ ಔಷಧೋಪಚಾರ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಆಯಾ ತಾಲೂಕಿನಲ್ಲಿರುವ ಎಲ್ಲ ಮುರಾರ್ಜಿ ವಸತಿ ಶಾಲೆಗಳನ್ನು ಸ್ವಚ್ಛಗೊಳಿಸಿ ಶುಚಿಯಾಗಿಟ್ಟುಕೊಳ್ಳಬೇಕೆಂದು ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಸದ್ಯಕ್ಕೆ ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ 30 ಕೇಂದ್ರಗಳನ್ನು ಗುರುತಿಸಿದ್ದು 1315 ಹಾಸಿಗೆಗಳು ಲಭ್ಯವಿವೆ ಎಂದರು.

    ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದ್ದು. ಈ ಕುರಿತು ಖಾಸಗಿ ವೈದ್ಯರೊಂದಿಗೆ ಚರ್ಚೆ ಮಾಡಲಾಗಿದೆ. 200 ಹಾಸಿಗೆ ಸಾಮರ್ಥ್ಯ ಇರುವಂತಹ ಖಾಸಗಿ ಆಸ್ಪತ್ರೆಗಳನ್ನು ನೀಡಬೇಕು ಎಂದು ಖಾಸಗಿ ವೈದ್ಯರಿಗೆ ತಿಳಿಸಲಾಗಿದ್ದು, ಶೀಘ್ರ ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

    ಕರೊನಾ ವೈರಸ್ ಹಾವಳಿ ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿ ಮನೆಮನೆ ಸರ್ವೆ ಕಾರ್ಯ ಭರದಿಂದ ಸಾಗಿದೆ. ಮನೆಮನೆ ಸವೇ ಕಾರ್ಯದಲ್ಲಿ ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹಾಸನ, ಕೊಪ್ಪಳ, ಧಾರವಾಡ ಪ್ರಥಮ ಮೂರು ಸ್ಥಾನದಲ್ಲಿದ್ದರೆ ನಾಲ್ಕನೇ ಸ್ಥಾನದಲ್ಲಿ ಗದಗ ಜಿಲ್ಲೆ ಇದೆ. ಕರೊನಾ ನಿಯಂತ್ರಣದಲ್ಲಿ ತೊಡಗಿರುವ ಜಿಲ್ಲೆಯ ಆರೋಗ್ಯ ಇಲಾಖೆ ಶ್ಲಾಘನೀಯ ಎಂದರು.

    16 ಸಾವಿರ ಪಿಪಿಇ ಕಿಟ್: ಜಿಲ್ಲೆಯಲ್ಲಿ ಒಟ್ಟು 48 ಕಂಟೇನ್ಮೆಂಟ್ ವಲಯಗಳಿದ್ದವು. ಇದೀಗ ಅವುಗಳ ಸಂಖ್ಯೆ ಕಡಿಮೆಯಾಗಿದ್ದು, ಸದ್ಯ 33 ಕಂಟೇನ್ಮೆಂಟ್ ಜೋನ್​ಗಳಿವೆ. ನಗರದ ಗದಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 16 ಸಾವಿರ ಪಿಪಿಇ ಕಿಟ್ ದಾಸ್ತಾನಿದ್ದು, ಅಗತ್ಯಬಿದ್ದರೆ ತಕ್ಷಣಕ್ಕೆ ಮತ್ತೆ 10 ಸಾವಿರ ಕಿಟ್ ತರಿಸಲಾಗುವುದು. ಸೋಂಕಿತರ ಬಗ್ಗೆ ಅಸಡ್ಡೆ ತೋರಿದರೆ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ಯಾರಿಗೆ ಲಾಭ ಮಾಡಿಕೊಡಬೇಕು?: ಶಾಸಕ ಎಚ್.ಕೆ. ಪಾಟೀಲರಿಗೆ ಮಾಡಲು ಕೆಲಸವಿಲ್ಲ. ಉದ್ಯೋಗ ಇಲ್ಲದ ಅವರು ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಕೋವಿಡ್-19 ವಿಷಯದಲ್ಲಿ ರಾಜಕಾರಣ ಬೆರೆಸುತ್ತಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಜಿಮ್ಸ್​ನಲ್ಲಿ 16 ಸಾವಿರ ಪಿಪಿಇ ಕಿಟ್​ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಆದರೂ ಶಾಸಕ ಎಚ್.ಕೆ. ಪಾಟೀಲ ಅವರು ಪಿಪಿಇ ಕಿಟ್​ಗಳು ಇಲ್ಲ. ಖಾಸಗಿಯವರಿಂದ ಖರೀದಿಸಬೇಕು ಎಂದು ಹೇಳುತ್ತಿರುವುದೇಕೆ? ನಾವು ಯಾರಿಂದ ಪಿಪಿಇ ಕಿಟ್ ಖರೀದಿ ಮಾಡಬೇಕು. ಯಾರಿಗೆ ಲಾಭ ಮಾಡಿಕೊಡಬೇಕು ಎಂದು ಅವರೇ ತಿಳಿಸಲಿ ಎಂದು ತಿರುಗೇಟು ನೀಡಿದರು.

    ಜಿಲ್ಲೆಯಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು. 1ರಂದು ಜಿಪಂ ಸಭಾಂಗಣದಲ್ಲಿ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಕರೊನಾ ನಿಯಂತ್ರಿಸುವ ಕುರಿತು ರ್ಚಚಿಸಲಾಗುವುದು.
    | ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts