More

    ಸೊರಗುತ್ತಿದೆ ಹೊಸಕೋಟೆಯ ಸಿದ್ಧಾರ್ಥ ನಗರ, ವಾರ್ಡ್ 7ರ ಅಭಿವೃದ್ಧಿಗೆ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮೂಲಸೌಕರ್ಯ ಇದ್ದರೂ ನಿರ್ವಹಣೆ ಇಲ್ಲ

    ಮಂಜುನಾಥ್ ಎಸ್.ಸಿ. ಹೊಸಕೋಟೆ
    ನಗರದ ವಾರ್ಡ್ ನಂ.7ರ ಸಿದ್ಧಾರ್ಥ ನಗರದಲ್ಲಿ ಮೋರಿ, ಕೊಳವೆಬಾವಿಗಳ ಅಸಮರ್ಪಕ ನಿರ್ವಹಣೆಯಿಂದ ಇಡೀ ವಾರ್ಡ್ ಕೊಳಚೆ ಪ್ರದೇಶದಂತೆ ಆಗಿದೆ. ಇದರಿಂದಾಗಿ ಆಧುನಿಕ ಬಡಾವಣೆಯ ಬದಲು ಯಾವುದೋ ಕುಗ್ರಾಮದಲ್ಲಿ ವಾಸವಾಗಿರುವಂತೆ ಭಾಸವಾಗುತ್ತಿದೆ.

    ರಸ್ತೆಯಲ್ಲೇ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಾಕಲಾಗಿದೆ. ಇದರಿಂದಾಗಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮೋರಿ ಸ್ವಚ್ಛಗೊಳಿಸಿ ತಿಂಗಳುಗಳೇ ಕಳೆದಿವೆ. ತ್ಯಾಜ್ಯನೀರು ಸಂಗ್ರಹಗೊಂಡು ಸುತ್ತಮುತ್ತ ದುರ್ನಾತ ಹಬ್ಬಿದೆ. ಸೊಳ್ಳೆ ಹಾವಳಿ ಮಿತಿ ಮೀರಿದೆ.

    ಕೊಳವೆಬಾವಿಗಳಲ್ಲಿ ಮಣ್ಣು ತುಂಬಿಕೊಂಡಿದೆ. ನೀರು ಸರಿಯಾಗಿ ಬಾರದೆ ಅವನ್ನು ಮುಚ್ಚಲಾಗಿದೆ. ಅವನ್ನು ದುರಸ್ತಿಪಡಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ವಾರ್ಡ್‌ನಾದ್ಯಂತ ನೀರಿನ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.
    ಇಲ್ಲಿಯ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕಾಂಪೌಂಡ್ ಬಳಿ ಕಸದ ರಾಶಿ ನಿರ್ಮಾಣವಾಗಿದೆ. ಗಿಡ-ಗಂಟಿಗಳು ಬೆಳೆದಿದ್ದು, ಅನೈರ್ಮಲ್ಯ ವಾತಾವರಣ ಉಂಟಾಗಿದೆ. ಸುತ್ತಮುತ್ತ ಹಾದು ಹೋಗಿರುವ ಮೋರಿ ಸ್ವಚ್ಛಗೊಳಿಸಿಲ್ಲ. ಸೊಳ್ಳೆ ಹಾವಳಿ ಹೆಚ್ಚಾಗಿ ಮಕ್ಕಳು ನಾನಾ ಬಗೆಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ದೂರಿದರು.

    ಸಮಸ್ಯೆಗಳನ್ನು ಪರಿಹರಿಸಲು ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇರುವ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಸೌಲಭ್ಯ ನೀಡಬೇಕು.
    ಗೋಪಾಲಯ್ಯ, ವಾರ್ಡ್ ನಿವಾಸಿ

    ಹಕ್ಕುಪತ್ರ ಕೊಡಿ: ವಾರ್ಡ್ ನಂ.7ರ ವ್ಯಾಪ್ತಿಯ ಗೌತಮ್ ಕಾಲನಿ ಹಾಗೂ ಸಿದ್ಧಾರ್ಥ ನಗರದ ಬಹುತೇಕ ಭಾಗ ಕೊಳಚೆ ಪ್ರದೇಶವಾಗಿವೆ. ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಲ್ಲಿ ಜನರು 7-8 ದಶಕಗಳಿಂದಲೂ ವಾಸವಾಗಿದ್ದಾರೆ. ಆದರೆ ಕೆಲವರ ಬಳಿ ಸೂಕ್ತ ದಾಖಲೆ ಇಲ್ಲವಾಗಿವೆ. ಇದರಿಂದಾಗಿ ನಿವಾಸಿಗಳಿಗೆ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ವೇ ಮಾಡಿ, ದಾಖಲೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಅದರಂತೆ ತಹಸೀಲ್ದಾರ್ ಹಾಗೂ ನಗರಸಭೆ ಮುಖ್ಯಾಧಿಕಾರಿಗಳು ಜಂಟಿ ಸರ್ವೇ ಕೈಗೊಂಡಿದ್ದು, ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ. ಜತೆಗೆ ಜಿಲ್ಲಾಧಿಕಾರಿ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯೂ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಮಾತ್ರ ಇಲ್ಲಿನ ಜನರಿಗೆ ಹಕ್ಕುಪತ್ರಗಳು ಸಿಗಲಿವೆ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಮುಂದಾಗಬೇಕು ಎಂದು ಸ್ಥಳೀಯರಾದ ಶಿವಮ್ಮ ಆಗ್ರಹಿಸಿದ್ದಾರೆ.

    ಸಂಪರ್ಕ ರಸ್ತೆ ದುರಸ್ತಿಗೆ ನಗರಸಭೆಯಿಂದ ಮಂಜೂರಾತಿ ದೊರೆತಿದೆ. ಕೆಲ ದಿನಗಳಲ್ಲೇ ಕಾಮಗಾರಿ ಆರಂಭವಾಗಲಿದೆ. ಕೆಟ್ಟಿರುವ ಕೊಳವೆಬಾವಿಗಳನ್ನು ದುರಸ್ತಿಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದಷ್ಟು ಬೇಗ ಈ ಕಾರ್ಯ ಕೈಗೊಂಡು, ಈ ಭಾಗದ ನೀರಿನ ಸಮಸ್ಯೆ ಪರಿಹರಿಸಲಾಗುವುದು.
    ಶೋಭಾ ಶಿವಾನಂದ್, ನಗರಸಭೆ ಸದಸ್ಯೆ

    ಕರೊನಾ ಮೂರನೇ ಅಲೆ ಸಂದರ್ಭದಲ್ಲಿ ಮೇಕ್‌ಶ್‌ಟಿ ಆಸ್ಪತ್ರೆ ನಿರ್ಮಾಣ ಹಾಗೂ ಇನ್ನಿತರ ಕೆಲಸಗಳಿಗೆ ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗಿತ್ತು. ಇದರಿಂದಾಗಿ ಸಿದ್ದಾರ್ಥ ನಗರದ ಭಾಗದಲ್ಲಿ ಸ್ವಚ್ಚತೆ ಸಮಸ್ಯೆ ಕಂಡುಬಂದಿದೆ. ಕೂಡಲೇ ಈ ಭಾಗದಲ್ಲಿ ಮೋರಿ ಸ್ವಚ್ಛಗೊಳಿಸುವ ಜತೆಗೆ ರಸ್ತೆಯಲ್ಲಿ ಸಂಗ್ರಹವಾಗಿರುವ ಕಸ ತೆರವುಗೊಳಿಸಲಾಗುವುದು.
    ಬಾಲು, ಹಿರಿಯ ಆರೋಗ್ಯ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts