More

    ಸೈನಿಕರನ್ನು ಗುರಿಯಾಗಿಟ್ಟುಕೊಂಡು ಚರ್ಚೆ ಬೇಡ

    ಹುಬ್ಬಳ್ಳಿ: ಸೈನಿಕರನ್ನು ಗುರಿಯಾಗಿಟ್ಟುಕೊಂಡು ಮಾಧ್ಯಮಗಳಲ್ಲಿ ಚರ್ಚೆ ನಡೆಸುವುದು ಸರಿಯಲ್ಲ. ಇದರಿಂದ ಸೈನಿಕರ ಮನೋಬಲ ಕುಸಿಯುತ್ತದೆ ಎಂದು ನಿವೃತ್ತ ಏರ್ ಕಮೊಡೋರ್ ಸಿ.ಎಸ್. ಹವಾಲ್ದಾರ್ ಹೇಳಿದರು.

    ಧಾರವಾಡ ಜಿಲ್ಲಾ ಪೂರ್ವ ಸೈನಿಕರ ಸಂಘದ ವತಿಯಿಂದ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ರಾಜಕೀಯ ಪಕ್ಷಗಳು ಮಾಧ್ಯಮಗಳಲ್ಲಿ ಸೈನಿಕರ ಬಗ್ಗೆ ಚರ್ಚೆ ನಡೆಸುವುದು ಹೆಚ್ಚುತ್ತಿದೆ. ಇದರಿಂದ ಸೈನಿಕರ ಕುಟುಂಬದವರೂ ಆತಂಕಕ್ಕೆ ಈಡಾಗುತ್ತಾರೆ ಎಂದರು.

    ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಂತೆ ಸೈನ್ಯವು ಕಾರ್ಯಾಚರಣೆ ನಡೆಸುತ್ತದೆ. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಸೈನ್ಯದ ಮಟ್ಟಿಗೆ ಅಲ್ಲಿರುವುದು ಸರ್ಕಾರವಷ್ಟೇ. ರಾಜಕೀಯಕ್ಕೂ ಸೈನ್ಯಕ್ಕೂ ಸಂಬಂಧ ಇಲ್ಲ. ಹೀಗಾಗಿ ಮಾಧ್ಯಮಗಳಲ್ಲಿ ರಾಜಕೀಯದ ಬಗ್ಗೆ ಚರ್ಚೆ ನಡೆಯಲಿ; ಸೈನ್ಯದ ಬಗ್ಗೆ ಋಣಾತ್ಮಕ ಚರ್ಚೆಗಳು ಬೇಡ ಎಂದು ಸಲಹೆ ನೀಡಿದರು.

    ಚೀನಾದ ಸೈನಿಕರೊಂದಿಗೆ ನಡೆದ ಹೊಡೆದಾಟದಲ್ಲಿ ಗಾಯಗೊಂಡ ಭಾರತೀಯ ಸೈನಿಕರ ಮನೋಬಲ ಹೆಚ್ಚಿಸಲು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲಡಾಖ್​ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಸೇನಾ ಆಸ್ಪತ್ರೆಗೂ ಭೇಟಿ ನೀಡಿದರು. ಆ ಆಸ್ಪತ್ರೆಯ ಬಗ್ಗೆ ಅನೇಕ ಚರ್ಚೆಗಳು ಮಾಧ್ಯಮದಲ್ಲಿ ನಡೆದವು, ಅವು ಅಗತ್ಯವಿರಲಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಈ ರೀತಿಯಾಗಿ ರ್ಚಚಿಸುವವರು ವೈಯಕ್ತಿಕ ಹಿತಾಸಕ್ತಿಗಾಗಿ ದೇಶದ ಹಿತಾಸಕ್ತಿ ಬಲಿಕೊಡದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

    ಚೀನಾ ಆಪ್​ಗಳನ್ನು ಬಹಿಷ್ಕರಿಸುವ ಮೂಲಕ ಈಗಾಗಲೇ ಭಾರತ ಸರ್ಕಾರ ಆ ದೇಶಕ್ಕೆ ತಕ್ಕ ಶಾಸ್ತಿ ಮಾಡಿದೆ. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರತೆ ಯೋಜನೆ ಸದುಪಯೋಗಪಡಿಸಿಕೊಳ್ಳುವ ಮೂಲಕ ಶಸ್ತ್ರಾಸ್ತ್ರಗಳನ್ನು ದೇಶಿಯವಾಗಿಯೇ ಉತ್ಪಾದಿಸಲು ಪ್ರಾಮುಖ್ಯತೆ ನೀಡಬೇಕು. ವಿದೇಶಗಳ ಮೇಲೆ ಅವಲಂಬನೆ ಕಡಿಮೆ ಮಾಡಬೇಕು. ಹೀಗಾದಲ್ಲಿ ಸೈನಿಕರ ಮನೋಬಲವೂ ಹೆಚ್ಚುತ್ತದೆ ಎಂದು ಹವಾಲ್ದಾರ್ ಅವರು ತಿಳಿಸಿದರು.

    ನಿವೃತ್ತ ಸೇನಾಧಿಕಾರಿಗಳಾದ ವಿರೂಪಾಕ್ಷಪ್ಪ ಗಿಡ್ಡನವರ, ಸುಭಾಸ ದೇದಾರಿ, ಮೋಹನ ಚಿತ್ತಳೆ ಸುದ್ದಿಗೋಷ್ಠಿಯಲ್ಲಿದ್ದರು.

    ಬೆಂಬಲ ಪತ್ರ ಸಲ್ಲಿಕೆ: ಸಾಮಾಜಿಕ ಜಾಲತಾಣ ಸೇರಿ ಇತರ ಮಾಧ್ಯಮಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ವಿರೋಧವಾಗಿ ಚರ್ಚೆ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳ ವರ್ತನೆಯನ್ನು ಖಂಡಿಸಿರುವ ಧಾರವಾಡ ಡಿಸ್ಟ್ರಿಕ್ಟ್ ವೆಟೆರನ್ಸ್ ಪೋರಮ್ ದೇಶದ ಭದ್ರತೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಳ್ಳುತ್ತಿರುವ ನಿರ್ಧಾರಗಳಿಗೆ ಬೆಂಬಲ ವ್ಯಕ್ತಪಡಿಸಿದೆ. ನಿವೃತ್ತ ಏರ್ ಕಮೊಡೋರ್ ಸಿ.ಎಸ್. ಹವಾಲ್ದಾರ್ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರನ್ನು ಭೇಟಿಯಾದ ಫೋರಮ್ ಪದಾಧಿಕಾರಿಗಳು, ಸಚಿವ ಜೋಶಿ ಮೂಲಕ ಕೇಂದ್ರ ಸರ್ಕಾರಕ್ಕೆ ಬೆಂಬಲದ ಪತ್ರ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts