More

    ಸೇವಾ ಮನೋಭಾವದಿಂದ ನೆರವಾಗಿ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸಲಹೆ, ಉಚಿತ ನೇತ್ರ ತಪಾಸಣೆ ಶಿಬಿರ

    ಆನೇಕಲ್: ಸೇವಾ ಮನೋಭಾವದಿಂದ ಸಹಾಯ ಮಾಡಿದರೆ ಅದು ಸಾಕಷ್ಟು ಜನರಿಗೆ ಉಪಯೋಗವಾಗುತ್ತದೆ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅಭಿಪ್ರಾಯಪಟ್ಟರು.

    ಪಟ್ಟಣದ ಹೆಣ್ಣುಮಕ್ಕಳ ಸರ್ಕಾರಿ ಶಾಲೆಯಲ್ಲಿ ಸ್ವಾಸ್ಥ್ಯ ಕಣ್ಣಿನ ಆಸ್ಪತ್ರೆ ವತಿಯಿಂದ ಭಾನುವಾರ ಆಯೋಜಿಸಿದ್ದ ಮಧುಮೇಹಿಗಳಿಗೆ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

    ಕರೊನಾ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ 1 ಕೋಟಿ ಮಾಸ್ಕ್ ವಿತರಿಸಿದ್ದೇವೆ, ಅದೇ ರೀತಿ ಸ್ವಾಸ್ಥ್ಯ ಕಣ್ಣಿನ ಆಸ್ಪತ್ರೆಯವರೂ ಸಹಾಯ ಮಾಡಿದ್ದಾರೆ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಂದೆ ಇನ್ನಷ್ಟು ಇಂಥ ಸೇವಾಕಾರ್ಯಗಳಾಗಬೇಕು ಎಂದು ತಿಳಿಸಿದರು.

    ಕರೊನಾ ಸಂದರ್ಭದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಸಾವಿನಲ್ಲೂ ಚಲ್ಲಾಟ ಆಡಿರುವುದು ಬೇಸರದ ಸಂಗತಿ, ವೈದ್ಯೋ ನಾರಾಯಣೋ ಹರಿ ಎನ್ನುವ ಪದಕ್ಕೆ ಗೌರವ ಬರಬೇಕಾದರೆ ವೈದ್ಯರು ಕೂಡ ಸನ್ನಡತೆ ಹಾಗೂ ಬಡವರ ಸೇವೆ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.

    ಕೃಷಿಯಿಂದ ದೂರವಾಗದಿರಿ: ಈ ಹಿಂದೆ ಆನೇಕಲ್ ತಾಲೂಕಿನಲ್ಲಿ ಕೃಷಿ ಸಂಪದ್ಭರಿತವಾಗಿದ್ದು, ಎಲ್ಲೆಡೆಯೂ ಹಚ್ಚ ಹಸಿರು ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಸಂಪ್ರದಾಯ ಮಾಯವಾಗುತ್ತಿದ್ದು, ಭೂಮಿಯನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ, ನಾವು ರೈತ ಪದ್ಧತಿಯಿಂದ ದೂರವಾಗಬಾರದು ಎಂದು ಪಿಜಿಆರ್ ಸಿಂಧ್ಯಾ ಹೇಳಿದರು.

    ಪುರಸಭಾ ಅಧ್ಯಕ್ಷ ಎನ್. ಎಸ್. ಪದ್ಮನಾಭ ಮಾತನಾಡಿ, ಆನೇಕಲ್ ಪಟ್ಟಣದ ಜನರಿಗೆ ನೇತ್ರ ತಪಾಸಣೆ ಶಿಬಿರ ಆಯೋಜಿಸಿರುವುದು ಮಾದರಿ ಕಾರ್ಯವಾಗಿದೆ. ಸ್ವಾಸ್ಥ್ಯ ಕಣ್ಣಿನ ಆಸ್ಪತ್ರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ ಆಶಿಸಿದರು.
    ವೈದ್ಯ ಡಾ. ಸಿ.ಬಿ.ಮೋಹನ್ ಮಾತನಾಡಿ, ಸಕ್ಕರೆ ಕಾಯಿಲೆಗೆ ಪ್ರಮುಖ ಕಾರಣ ಜೀವನ ಶೈಲಿ ಹಾಗೂ ಆಹಾರ ಪದ್ಧತಿ. ಇದನ್ನು ನಿಯಂತ್ರಿಸಲು ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದರು.

    ನೇತ್ರ ತಜ್ಞೆ ಡಾ. ಶ್ರೀಲಕ್ಷ್ಮೀ ಶ್ರೀನಿವಾಸನ್ ಮಾತನಾಡಿ, ಮಧುಮೇಹದಿಂದ ಕಣ್ಣಿಗೆ ಯಾವ ರೀತಿ ತೊಂದರೆಯಾಗುತ್ತದೆ. ಅದರಿಂದ ನಮ್ಮನ್ನು ನಾವು ರಕ್ಷಿಸಿಗೊಳ್ಳುವುದು ಹೇಗೆ ಎನ್ನುವ ಬಗ್ಗೆ ಅರಿವು ಇರಬೇಕು. ಮಧುಮೇಹದಿಂದ ಕಣ್ಣಿನ ದೃಷ್ಟಿಯಲ್ಲಿ ತೊಂದರೆ ಉಂಟಾಗಿ ನಾಲ್ಕನೇ ಹಂತ ತಲುಪುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು. ಪ್ರಾರಂಭದಲ್ಲೇ ಸಣ್ಣ ಚಿಕಿತ್ಸೆಯಿಂದ ಸಮಸ್ಯೆ ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎಂದರು.

    ಸುಮಾರು 120 ಜನರು ತಪಾಸಣೆ ಮಾಡಿಸಿಕೊಂಡರು. ಬಿಇಒ ನರಸಿಂಹರಾಜು, ನಿವೃತ್ತ ಶಿಕ್ಷಕ ಶ್ರೀನಿವಾಸನ್, ಪುರಸಭಾ ಉಪಾಧ್ಯಕ್ಷೆ ಲಲಿತಾ ಲಕ್ಷ್ಮೀನಾರಾಯಣ್, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಡಾ. ವೈ.ಚಿನ್ನಪ್ಪ ಚಿಕ್ಕಹಾಗಡೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts