More

    ಸುಳವಾಡಿ ಕೇಸ್ ಸಂತ್ರಸ್ತರ ಪರ ಲೋಲಾಕ್ಷಿ ವಾದ


    ಚಾಮರಾಜನಗರ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹನೂರು ತಾಲೂಕಿನ ಸುಳವಾಡಿಯ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ವಿಷ ಪ್ರಸಾದ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ಕೋರ್ಟ್‌ನಲ್ಲಿ ಮತ್ತೆ ಸರ್ಕಾರಿ ಅಭಿಯೋಜಕಿ ಲೋಲಾಕ್ಷಿ ವಾದ ಮಂಡಿಸಲಿದ್ದಾರೆ.
    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದ್ದಕ್ಕಿದ್ದಂತೆಯೇ ಕಳೆದ ತಿಂಗಳು ಈ ಕೇಸ್‌ನಲ್ಲಿ ಸಂತ್ರಸ್ತರ ಪರವಾಗಿ ವಾದ ಮಾಡುತ್ತಿದ್ದ ಟಿ.ಎಚ್.ಲೋಲಾಕ್ಷಿ ಅವರನ್ನು ಮೈಸೂರಿನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ವರ್ಗಾವಣೆ ವಿಚಾರ ಬದಲಾವಣೆ ಆಗದಿದ್ದರೂ ಪ್ರಕರಣದ ವಿಚಾರಣೆ ಸಂಬಂಧ ತಿರುವು ಸಿಕ್ಕಿದೆ. ಮತ್ತೆ ಲೋಲಾಕ್ಷಿ ಅವರನ್ನು ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.

    ವಿರೋಧ ವ್ಯಕ್ತವಾಗಿತ್ತು: ಸುಳವಾಡಿ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ವಾದ ಮಾಡುತ್ತಿರುವ ವಕೀಲರನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ಸುದ್ದಿ ಸಾರ್ವಜನಿಕ ವಲದಯಲ್ಲಿ ಕಳೆದ ತಿಂಗಳು ಭಾರಿ ಚರ್ಚೆಗೆ ಗ್ರಾಸವಾಗಿ ವಿರೋಧ ವ್ಯಕ್ತವಾಗಿತ್ತು. ಕೊಳ್ಳೇಗಾಲದಲ್ಲಿ ಪ್ರಗತಿ ಪರ ಸಂಘಟನೆಗಳು ಟಿ.ಎಚ್.ಲೋಲಾಕ್ಷಿ ಅವರ ವರ್ಗಾವಣೆಯನ್ನು ಖಂಡಿಸಿದ್ದವು. ನಾಗರಿಕ ಹಿತರಕ್ಷಣಾ ಸಮಿತಿ ನಟರಾಜು ಮಾಳಿಗೆ ‘ಲೋಲಾಕ್ಷಿ ವರ್ಗಾವಣೆ ರಾಜಕೀಯ ಪ್ರೇರಿತವಾಗಿದೆ. ಸುಳವಾಡಿ ಪ್ರಕರಣದ ತಪ್ಪಿತಸ್ಥರನ್ನು ಕಾಪಾಡುವ ಉದ್ದೇಶದಿಂದ ವರ್ಗಾವಣೆ ಮಾಡಲಾಗುತ್ತಿದೆ. ಮುಂದೆ ಇದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

    ರೈತ ಮುಖಂಡ ಶೈಲೇಂದ್ರ, ಕರ್ನಾಟಕ ಯುವ ಶಕ್ತಿ ವೇದಿಕೆ ಜಿಲ್ಲಾಧ್ಯಕ್ಷ ಸಿದ್ದಪ್ಪಾಜಿ, ಪ್ರಗತಿಪರ ಸಂಘಟನೆ ಸಂಚಾಲಕ ದಿಲೀಪ್, ಶಂಕರ್, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಎಚ್. ಅವಿನಾಶ್, ಉಪಾಧ್ಯಕ್ಷ ಎಸ್.ನಂದ, ಅಯಜ್, ದಲಿತ ಸಂಘ ಸಮಿತಿ ನಿಂಗರಾಜು ಮತ್ತು ಇತರರು ಪ್ರತಿಭಟನೆ ಮಾಡುವುದಾಗಿಯೂ ತಿಳಿಸಿದ್ದರು.

    ಯಾವ ಹಂತದಲ್ಲಿದೆ ವಿಚಾರಣೆ?: ಕೋರ್ಟ್‌ನಲ್ಲಿ ಸುಳವಾಡಿ ಪ್ರಕರಣದ ಸಂಬಂಧ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಪ್ರಸ್ತುತ 20 ಸಾಕ್ಷಿಗಳ ವಿಚಾರಣೆ ಮುಗಿದಿದೆ. ಈ ಪ್ರಕರಣದಲ್ಲಿ ಅಂದಾಜು 350ಕ್ಕೂ ಹೆಚ್ಚು ಜನ ಸಾಕ್ಷಿದಾರರು ಇದ್ದಾರೆ. ಇವರೆಲ್ಲರ ವಿಚಾರಣೆ ನಡೆಯಬೇಕಿದೆ. ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನಿಗಾಗಿ ಸುಪ್ರೀಂಕೋರ್ಟ್‌ವರೆಗೂ ಹೋಗಿ ಹಿನ್ನಡೆ ಅನುಭವಿಸಿರುವುದು ಗೊತ್ತಿರುವ ವಿಚಾರ. ಎರಡನೇ ಆರೋಪಿ ಅಂಬಿಕಾ ಚಾಮರಾಜನಗರ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡ ಬಳಿಕ ಹೈಕೋರ್ಟ್ ಮೆಟ್ಟಿಲೇರಿ ಅಲ್ಲೂ ಜಾಮೀನು ನಿರಾಕರಣೆಯಾಗಿತ್ತು. ಕೆಲವು ತಿಂಗಳ ಹಿಂದೆ ಮತ್ತೆ ಜಿಲ್ಲಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಹಿನ್ನಡೆ ಉಂಟಾಯಿತು. ಉಳಿದ ಆರೋಪಿಗಳಾದ ಮಾದೇಶ್ ಮತ್ತು ದೊಡ್ಡಯ್ಯ ಬಂಧನವಾದ ಪ್ರಾರಂಭಿಕ ದಿನಗಳಲ್ಲಿ ಜಿಲ್ಲಾ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು ಎಂದು ಈ ಪ್ರಕರಣದ ವಿಚಾರಣೆಯ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಕ್ಷಿ ತಿಳಿಸಿದ್ದಾರೆ.

    ಡಿ.14ರಂದು ಆಗಿದ್ದೇನು?: 2018ರ ಡಿ.14ರಂದು ಸುಳವಾಡಿಯ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲು ಪ್ರಸಾದ (ಬಾತ್) ತಯಾರಿಸಲಾಗಿತ್ತು. ಇದನ್ನು ಸೇವಿಸಿದ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರು. ಪ್ರಸಾದದಲ್ಲಿ ವಿಷ ಮಿಶ್ರಣವಾಗಿರುವುದು ತಿಳಿಯಿತು. ಇದನ್ನು ಸೇವಿಸಿದ್ದ 17 ಭಕ್ತರು ಮೃತಪಟ್ಟರು. 120ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರು. ತನಿಖೆ ನಡೆಸಿದ ಪೊಲೀಸರು ಸಾಲೂರು ಮಠದ ಅಂದಿನ ಕಿರಿಯ ಶ್ರೀಗಳಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್, ದೊಡ್ಡಯ್ಯ ಅವರನ್ನು ಬಂಧಿಸಿದ್ದರು.

    ಬೇರೆ ಕಡೆಗೆ ವರ್ಗಾವಣೆಯಾಗಿದ್ದರೂ ಸುಳವಾಡಿ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಮತ್ತೆ ನನ್ನನ್ನೇ ನೇಮಕ ಮಾಡಲಾಗಿದೆ. ಈ ಪ್ರಕರಣದ ವಿಚಾರದಲ್ಲಿ ಸಂತ್ರಸ್ತರ ಪರವಾಗಿ ನ್ಯಾಯ ದೊರಕಿಸಿಕೊಡುವುದಾಗಿ ಸಾರ್ವಜನಿಕರು ನನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸುಳವಾಡಿ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕಿ ಟಿ.ಎಚ್.ಲೋಲಾಕ್ಷಿ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts