More

    ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚನೆ

    ಹೊನ್ನಾವರ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮಂಗಳವಾರ ಕೊಂಚ ಕಡಿಮೆಯಾಗಿದೆ. ಆದರೆ, ಘಟ್ಟದ ಮೇಲ್ಭಾಗದ ಸಿದ್ದಾಪುರ ಮತ್ತು ಸಾಗರ ತಾಲೂಕುಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಶರಾವತಿ ನದಿ ತುಂಬಿ ಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯದ ನೀರು ಬಿಡುವ ಮುನ್ನೆಚ್ಚರಿಕೆ ನೀಡಲಾಗಿದೆ.

    ಶರಾವತಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಏರಿಕೆಯಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 1,819 ಅಡಿ ಇದ್ದು, ಮಂಗಳವಾರ 1,812 ಅಡಿಗಳವರೆಗೆ ತುಂಬಿದೆ. 44,367 ಕ್ಯೂಸೆಕ್ ಒಳಹರಿವು ಆಗಿದೆ. ಇದೇ ರೀತಿ ನೀರಿನ ಒಳಹರಿವು ಮುಂದುವರಿದರೆ ಜಲಾಶಯದ ಗರಿಷ್ಠ ಮಟ್ಟ ಮೀರಬಹುದಾಗಿದೆ. ಲಿಂಗನಮಕ್ಕಿ ಆಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚಾದ ನೀರನ್ನು ಹೊರ ಬಿಡಲಾಗುವುದು. ಲಿಂಗನಮಕ್ಕಿ ಜಲಾಶಯದಿಂದ ಹೊರಬಿಟ್ಟ ನೀರು ಗೇರುಸೊಪ್ಪ ಜಲಾಶಯವನ್ನು ಮೀರಿದಾಗ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿ ಪಾತ್ರದಲ್ಲಿ ವಾಸಿಸುವ ಜನರಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಭಾಗದ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಅಂತಿಮ ಸೂಚನೆ ನೀಡಿದ್ದಾರೆ.

    ತಾಲೂಕಿನಲ್ಲಿ ಮಳೆ ಕಡಿಮೆಯಾಗಿದ್ದರೂ ಘಟ್ಟದ ಮೇಲ್ಭಾಗದಲ್ಲಿ ಮಳೆ ಹೀಗೆ ಮುಂದುವರಿದರೆ ನೆರೆ ಹಾವಳಿ ಸೃಷ್ಟಿಯಾಗುವುದೇನೋ ಎಂದು ನದಿ ಪಾತ್ರದ ತಗ್ಗು ಪ್ರದೇಶದ ಜನರು ಆತಂಕಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts