More

    ಸುರಕ್ಷತಾ ಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ

    ಕಾರವಾರ: ಉತ್ತರ ಕನ್ನಡ ಕರೊನಾ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಲಾಕ್​ಡೌನ್ ನಿಯಮಾವಳಿ ಸಡಿಲವಾದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

    ಸಾರ್ವಜನಿಕರ ಪ್ರತಿ ಕಾರ್ಯಚಟುವಟಿಕೆಗಳ ಬಗ್ಗೆಯೂ ಪೊಲೀಸ್ ಹಾಗೂ ಇತರ ಇಲಾಖೆಗಳು ನಿಗಾ ಇಡಲು ವಿಜಿಲೆನ್ಸ್ ವ್ಯವಸ್ಥೆ ಗಟ್ಟಿಗೊಳಿಸುವ ಕಾರ್ಯ ಚಾಲ್ತಿಯಲ್ಲಿದೆ. ಗ್ರಾಮೀಣ ಭಾಗದಲ್ಲಿ ರಚನೆ ಮಾಡಿದಂತೆ ಶಹರ ಪ್ರದೇಶದಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರ ನೇತೃತ್ವದಲ್ಲಿ ಟಾರ್ಸ್ಕ್​ಫೋರ್ಸ್ ಸಮಿತಿ ರಚಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೊನಾ ವಾರ್ ರೂಂ ಸೋಮವಾರದಿಂದ ಕಾರ್ಯಾಚರಣೆ ಮಾಡಲಿದೆ. ಅಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಪ್ರತಿಯೊಬ್ಬರ ಮಾಹಿತಿ ಇರಲಿದೆ. ಸದ್ಯ ಅಂಗಡಿ ಮುಂಗಟ್ಟುಗಳು ತೆರೆಯುತ್ತಿರುವುದರಿಂದ ಅವುಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡುವ ಕಾರ್ಯವನ್ನು ಪೊಲೀಸರು ವಹಿಸಿಕೊಂಡಿದ್ದಾರೆ. ನಗರದ ಔಷಧ, ಕಿರಾಣಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಗುರುತುಗಳನ್ನು ಜಿಲ್ಲಾದ್ಯಂತ ಮಾಡಿಸಲಾಗಿದೆ.

    ಕರೊನಾ ಸೋಂಕಿತ ಗುಣಮುಖ, ಬಿಡುಗಡೆ: ಜಿಲ್ಲೆಯಲ್ಲಿ ದುಬೈನಿಂದ ಆಗಮಿಸಿದ್ದ ಭಟ್ಕಳ ಮೂಲದ ಕರೊನಾ ಸೋಂಕಿತ (ಪಿ. 260, ಗರ್ಭಿಣಿಯ ಪತಿ) ಗುಣಮುಖರಾಗಿದ್ದಾರೆ. ಪ್ರಯೋಗಾಲಯದಲ್ಲಿ ಅವರ ರೋಗ ಪರೀಕ್ಷೆ ವರದಿಗೆ ನೆಗೆಟಿವ್ ಬಂದಿದ್ದು, ಗುರುವಾರ ಕಾರವಾರ ಅರಗಾದ ಪತಂಜಲಿ ನೌಕಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರನ್ನು ಭಟ್ಕಳದ ಖಾಸಗಿ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗುತ್ತದೆ. ಮಾ. 22 ರಂದು ಭಟ್ಕಳದಲ್ಲಿ ಮೊದಲ ಕರೊನಾ ಪ್ರಕರಣ ಕಾಣಿಸಿಕೊಂಡಿತ್ತು. ಏ. 14 ರಂದು 11ನೇ ಪ್ರಕರಣ ಕಾಣಿಸಿಕೊಂಡಿತ್ತು. ಈಗ ಎಲ್ಲರೂ ಗುಣಮುಖರಾದಂತಾಗಿದೆ. ಕರೊನಾ ತಗುಲಿದ ಎಲ್ಲ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಅವರ ಗಂಟಲ ದ್ರವದ ಮಾದರಿಯನ್ನು ಪರಿಶೀಲಿಸಲಾಗಿತ್ತು. ಯಾರಿಗೂ ರೋಗ ಇಲ್ಲ ಎಂಬುದು ಖಚಿತವಾಗಿದೆ.
    19 ಲಕ್ಷ ರೂ. ದಂಡ ವಸೂಲಿ: ಲಾಕ್​ಡೌನ್ ನಿಯಮ ಮೀರಿ ಹೊರ ಬಂದ ಆರೋಪದ ಮೇಲೆ ಕಳೆದ 36 ದಿನಗಳಲ್ಲಿ ಜಿಲ್ಲೆಯಲ್ಲಿ 263 ಪ್ರಕರಣ ದಾಖಲಿಸಲಾಗಿದೆ. 159 ಜನರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಶಿವ ಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಂದ ಒಟ್ಟು 19, 27,750 ರೂ. ದಂಡ ವಸೂಲಿ ಮಾಡಲಾಗಿದೆ. ಇದುವರೆಗೆ 278 ವಾಹನಗಳನ್ನು ಸೀಜ್ ಮಾಡಲಾಗಿದ್ದು, ಇನ್ನೂ 99 ವಾಹನಗಳನ್ನು ಬಿಡುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ.

    ಕೇವಲ ಸರ್ಕಾರ ಮತ್ತು ಆಡಳಿತವನ್ನು ದೂರುವುದರಿಂದ ಏನೂ ಸಾಧ್ಯವಿಲ್ಲ. ಎಲ್ಲರ ಸಹಕಾರವಿದ್ದರೆ ನಾವು ಕರೊನಾ ವಿರುದ್ಧದ ಹೋರಾಟ ಗೆಲ್ಲಬಹುದು.
    | ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts