More

    ಸುಖ ಜೀವನಕ್ಕೆ ಆಧ್ಯಾತ್ಮವೇ ಬೇರು -ರಂಭಾಪುರಿ ಜಗದ್ಗುರುಗಳ ಅಭಿಮತ -ಜನಜಾಗೃತಿ ಧರ್ಮ ಸಮಾವೇಶ

    ದಾವಣಗೆರೆ: ಮಾನವನ ಸುಖ ಜೀವನಕ್ಕೆ ಆಹಾರ, ಆರೋಗ್ಯದ ಜತೆಗೆ ಆಧ್ಯಾತ್ಮವೂ ಅತಿಮುಖ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
    ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯಿಂದ ನಗರದ ಅಭಿನವ ರೇಣುಕ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ಜನಜಾಗೃತಿ ಧರ್ಮ ಸಮಾವೇಶದ ನಾಲ್ಕನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಮನುಷ್ಯ ಸದಾ ಸುಖಾಪೇಕ್ಷಿ. ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸಂಪತ್ತು ಗಳಿಸಲು ಮತ್ತು ಉಳಿಸಲು ಬೇಕಾದಷ್ಟು ಸಮಯ ತೊಡಗಿಸುವ ಮಾನವ, ಆಧ್ಯಾತ್ಮ ಸಾಧನೆ ಮತ್ತು ಭಗವಂತನ ಸ್ಮರಣೆಗೆ ಕಾಲ ಮೀಸಲಿಡುತ್ತಿಲ್ಲ ಎಂದು ವಿಷಾಧಿಸಿದರು.
    ಆದರ್ಶ ಹಾಗೂ ನೆಮ್ಮದಿಯ ಬದುಕಿಗೆ ಆಧ್ಯಾತ್ಮ ಜ್ಞಾನ ಅವಶ್ಯಕ ಎಂಬುದಾಗಿ ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಜೀವನ ಮೌಲ್ಯಗಳು ಅಂತ್ಯವಾದರೆ ಮಾನವತೆಯೂ ಸಮಾಪ್ತಿಯಾಗಲಿದೆ. ಉಣ್ಣುವ ಅನ್ನದಲ್ಲಿ ಅಡಗಿರುವ ಆರೋಗ್ಯವನ್ನು ಮರೆತ ಮಾನವ, ಹಣ ಗಳಿಕೆಗಾಗಿ ಅದನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ವಿಷಾಧಿಸಿದರು.
    ಮಾನವ ಜೀವನದಲ್ಲಿ ಸುವರ್ಣ ಗಳಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಬೇಕು. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ನೈತಿಕ ನಿಯಮಗಳು ಶಾಶ್ವತ. ಬಿತ್ತಿದ ಬೀಜದಂತೆ ಫಸಲು ಕಾಣುವಂತೆಯೇ ಧರ್ಮಾಚರಣೆಯಿಂದ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
    ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಭೂಮಿಯ ವ್ಯಾಸಕ್ಕಿಂತ ಮನುಷ್ಯನ ಹವ್ಯಾಸಗಳು ಬೆಳೆಯುತ್ತಿವೆ. ಬುದ್ಧಿ ವಿಕಾಸವಾದಷ್ಟು ಭಾವನೆಗಳು ವಿಕಾಸಗೊಂಡಿಲ್ಲ. ಇದುವೇ ಇಂದಿನ ಎಲ್ಲ ಸಂಘರ್ಷಗಳಿಗೆ ಕಾರಣವಾಗಿದೆ ಎಂದರಲ್ಲದೇ ವೀರಶೈವರಿಗೆ ಇಷ್ಟಲಿಂಗ ಪೂಜೆಯೇ ಪ್ರಧಾನವಾಗಿದೆ ಎಂದರು.
    ನೇತೃತ್ವ ವಹಿಸಿದ್ದ ಮರಿಯಮ್ಮನಹಳ್ಳಿಯ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವೀರಶೈವ ಧರ್ಮದಲ್ಲಿನ ಶಿವತಪಸ್ಸು, ಶಿವಕರ್ಮ, ಶಿವಜ್ಞಾನ, ಶಿವಜಪ ಮತ್ತು ಶಿವಧ್ಯಾನ ಎಂಬ ಪಂಚ ಯಜ್ಞಗಳನ್ನು ಪರಿಪಾಲಿಸಿದರೆ ಸುಖದ ಜೀವನ ಪ್ರಾಪ್ತವಾಗಲಿದೆ ಎಂದು ಹೇಳಿದರು.
    ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ ಇಂಗ್ಲೆಂಡಿನವರಿಗೆ ವ್ಯಾಪಾರ, ಫ್ರಾನ್ಸ್‌ನವರಿಗೆ ರಾಜಕಾರಣ, ಜಪಾನ್‌ನವರಿಗೆ ಲಲಿತಕಲೆಯಂತೆಯೇ ಭಾರತೀಯರಿಗೆ ಆಧ್ಯಾತ್ಮವೇ ಆತ್ಮವಾಗಿದೆ ಎಂಬುದಾಗಿ ಸ್ವಾಮಿ ವಿವೇಕಾನಂದರು ಹೇಳಿದ್ದರು. ಮೆಕಾಲೆ ಶಿಕ್ಷಣದ ಪರಿಣಾಮವಾಗಿ ಇಂದಿನ ಯುವಪೀಳಿಗೆ ಆಧ್ಯಾತ್ಮದಿಂದ ದೂರ ಉಳಿದಿದೆ. ನಮ್ಮ ಸಂಸ್ಕೃತಿ-ಸಂಪ್ರದಾಯದ ಬಗ್ಗೆ ಕೀಳಿರಿಮೆ ಸಲ್ಲದು ಎಂದರು.
    ದೇಶದಲ್ಲಿ 30 ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. ಮಕ್ಕಳಲ್ಲಿ ಇದು ಆತ್ಮಗೌರವ, ಆತ್ಮಶಕ್ತಿಯನ್ನು ಇದು ಪ್ರಚೋದಿಸಲಿದೆ. ನೀತಿ ಜಾರಿ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
    ಕಾಂಗ್ರೆಸ್ ಮುಖಂಡ ಎಂ.ಟಿ.ಸುಭಾಶ್ಚಂದ್ರ ಮಾತನಾಡಿ ಕರ್ನಾಟಕದಲ್ಲಿ ವೀರಶೈವ ಲಿಂಗಾಯತಧರ್ಮ ಬಾರದೇ ಹೋಗಿದ್ದರೆ ಮತ್ತೊಂದು ಬಿಹಾರ್ ಆಗಿರುತ್ತಿತ್ತು. ಮಠಗಳು ಎಲ್ಲರಿಗೂ ಶಿಕ್ಷಣದ ಜತೆಗೆ ಸಂಸ್ಕೃತಿ ನೀಡಿವೆ. ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಹೊಣೆಗಾರಿಕೆ ಮಠಗಳಷ್ಟೇ ನಾಗರಿಕರ ಮೇಲಿದೆ ಎಂದರು.
    ಜಾತಿ-ಧರ್ಮಗಳ ನಡುವೆ ಸಂಘರ್ಷ, ಪಕ್ಷ ಹಾಗೂ ಅಂತಸ್ತಿನ ಭಿನ್ನಾಭಿಪ್ರಾಯದ ಇಂದಿನ ಸಂದರ್ಭದಲ್ಲಿ ಮಠಗಳು ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತದೆ ವೈಜ್ಞಾನಿಕತೆ ಜಾಗೃತಗೊಳಿಸಬೇಕು ಎಂದು ಆಶಿಸಿದರು. ಎಸ್ಸೆಸ್ ಆಸ್ಪತ್ರೆಯ ವೈದ್ಯ ಡಾ. ಎ.ಜೆ. ಮಲ್ಲಿಕಾರ್ಜುನ ಅವರಿಗೆ ‘ವೈದ್ಯ ರತ್ನಾಕರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಚನ್ನಗಿರಿಯ ಶ್ರೀ ಶಿವಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಎ.ಎಸ್.ಮೃತ್ಯುಂಜಯ, ದೇವರಮನೆ ಶಿವಕುಮಾರ್, ಉದ್ಯಮಿ ಬಸವರಾಜಪ್ಪ, ಬಿ.ವಿ.ಶಿವಾನಂದ, ವರ್ತಕ ಎಸ್.ಎಚ್. ಚಂದ್ರಶೇಖರಯ್ಯ, ಬಿ.ಎಸ್. ವೀರೇಶ್, ಎನ್‌ಎಂ. ತಿಪ್ಪೇಸ್ವಾಮಿ, ಟಿ.ರಮೇಶ್ ಇದ್ದರು. ಕೆ.ಬಿ.ನಾಗರಾಜ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts