More

    ಸೀಲ್​ಡೌನ್ ಪ್ರದೇಶದ ಜನರ ಸಮಸ್ಯೆ ಆಲಿಕೆ

    ಸವಣೂರ: ಸೀಲ್​ಡೌನ್​ಗೆ ಒಳಪಡಿಸಿರುವ ಪಟ್ಟಣದ ಎಸ್.ಎಂ. ಕೃಷ್ಣ ನಗರಕ್ಕೆ ಶನಿವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನಗರದಲ್ಲಿ ಪರಿಸ್ಥಿತಿ ಅವಲೋಕಿಸಿ, ಸ್ಥಳೀಯ ನಿವಾಸಿಗಳ ಆರೋಗ್ಯ ವಿಚಾರಿಸಿದ ಸಚಿವರು, ಸಾರ್ವಜನಿಕರ ಸಮಸ್ಯೆ ಆಲಿಸಿ ಆತ್ಮಸ್ಥೈರ್ಯ ತುಂಬಿದರು.

    ಈ ವೇಳೆ ಮಹಿಳೆಯೊಬ್ಬರು, ಮನೆಯಲ್ಲಿ ತುಂಬು ಗರ್ಭಿಣಿ ಇದ್ದು, ಆಸ್ಪತ್ರೆಗೆ ತೆರಳಲು ಪರದಾಡುವಂತಾಗಿದೆ ಎಂದು ಸಮಸ್ಯೆ ಹೇಳಿಕೊಂಡರು. ಕೂಡಲೇ ಸ್ಪಂದಿಸಿದ ಬೊಮ್ಮಾಯಿ ಅವರು, ಸ್ಥಳೀಯ ಕುಟುಂಬಗಳಲ್ಲಿನ ಗರ್ಭಿಣಿ ಹಾಗೂ ಬಾಣಂತಿಯರನ್ನು ಗುರುತಿಸಿ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡಲು ಟಿಎಚ್​ಒ ಡಾ. ಚಂದ್ರಕಲಾ ಜೆ. ಅವರಿಗೆ ಸೂಚಿಸಿದರು.

    ಇನ್ನೂ ಕೆಲ ಮಹಿಳೆಯರು, ದುಡಿಯಲು ದುಡಿಮೆ ಇಲ್ಲ, ಕೈಯಲ್ಲಿ ಕಾಸಿಲ್ಲ. ತರಕಾರಿ ಹಾಗೂ ದಿನಸಿ ಖರೀದಿಸಲು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಆಗ ಮಹಿಳೆಯರಿಗೆ ಧೈರ್ಯ ಹೇಳಿದ ಸಚಿವ ಬೊಮ್ಮಾಯಿ, ನಿಮ್ಮ ಪರಿಸ್ಥಿತಿ ಬಗ್ಗೆ ನನಗೆ ಗೊತ್ತಿದೆ. ಈಗಾಗಲೇ ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ಉಚಿತ ಪಡಿತರ, ದಿನಸಿ ಕಿಟ್ ಹಾಗೂ ಹಾಲು ವಿತರಣೆ ಕೈಗೊಳ್ಳಲಾಗುತ್ತಿದೆ. ನಾಳೆಯಿಂದ ಎಸ್.ಎಂ. ಕೃಷ್ಣ ನಗರದಲ್ಲಿ ವಾಸವಾಗಿರುವ ಎಲ್ಲ ಕುಟುಂಬಸ್ಥರಿಗೆ ತರಕಾರಿ ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಇದೇ ಸಂದರ್ಭದಲ್ಲಿ ಸವಣೂರ ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೀಲ್​ಡೌನ್ ಪ್ರದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರಿಮಿನಾಶಕ ಸಿಂಪಡಣೆ, ಶುದ್ಧ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 14 ಸೇರಿ 32 ಜನರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಅವರಲ್ಲಿ ಮುಂಬೈನಿಂದ ಬಂದ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಉಳಿದ 30 ಜನರ ವರದಿ ನೆಗೆಟಿವ್ ಬಂದಿವೆ. ಸೋಂಕಿತ ವ್ಯಕ್ತಿಯ ಪ್ರಯಾಣ ಮಾಹಿತಿ ಕಲೆ ಹಾಕಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಸೀಲ್​ಡೌನ್ ಪ್ರದೇಶದಲ್ಲಿ 12 ಜನರನ್ನು ರ್ಯಾಂಡ್​ವå್ ಟೆಸ್ಟ್​ಗೆ ಒಳಪಡಿಸಲಾಗಿದೆ. ಪ್ರಥಮ ಹಂತದಲ್ಲಿ 100 ಮೀಟರ್ ವ್ಯಾಪ್ತಿಯ ಜನರ, ನಂತರದಲ್ಲಿ 200 ಮೀ. ವ್ಯಾಪ್ತಿಯಲ್ಲಿರುವವರ ತಪಾಸಣೆ, ಹೀಗೆ ಸಂಪೂರ್ಣ ಎಸ್.ಎಂ. ಕೃಷ್ಣ ನಗರ ಹಾಗೂ ರಾಜೀವ ಗಾಂಧಿ ನಗರದಲ್ಲಿ ವಾಸವಾಗಿರುವ ಜನರ ಆರೋಗ್ಯ ತಪಾಸಣೆಗೆ ಒಳಪಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ ಎಂದರು.

    ನಂತರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಐಸೋಲೇಶನ್ ವಾರ್ಡ್​ಗಳನ್ನು ವೀಕ್ಷಿಸಿ, ಕೋವಿಡ್ ಚಿಕಿತ್ಸಾ ಸೇವೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಗೆ ಅಭಿನಂದಿಸಿದರು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜು, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಡಿವೈಎಸ್​ಪಿ ಒ.ಬಿ. ಕಲ್ಲೇಶಪ್ಪ, ಸಿಪಿಐ ಜಿ.ಎಂ. ಶಶಿಧರ, ತಾ.ಪಂ. ಎಡಿ ಎಸ್.ಎಚ್. ಅಮರಾಪೂರ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ, ಇತರರು ಇದ್ದರು.

    ಸವಣೂರ ಪಟ್ಟಣವನ್ನು ಬಫರ್ ಜೋನ್ ಎಂದು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸವಣೂರಿನ ಜನರು ಇಲ್ಲಿಯವರೆಗೆ ಸಹಕಾರ ನೀಡುತ್ತ ಬಂದಿದ್ದಾರೆ. ಆದರೆ, ಈಗಿನ ಸಂದರ್ಭದಲ್ಲಿ ಸಹಕಾರ ನೀಡುವುದು ಬಹುಮುಖ್ಯ. ಸೀಲ್​ಡೌನ್ ಆಗಿರುವುದರಿಂದ ಕಂಟೈನ್ಮೆಂಟ್ ಜೋನ್ ಹಾಗೂ ಬಫರ್ ಜೋನ್​ಗಳಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts