More

    ಸೀಜ್ ಮಾಡಿದ ವಾಹನ ಸುಮ್ಮನೆ ಕೊಡಲ್ಲ – ಡಿಸಿಪಿ ಡಾ. ವಿಕ್ರಂ ಆಮ್ಟೆ ಎಚ್ಚರಿಕೆ

    ಬೆಳಗಾವಿ: ಲಾಕ್‌ಡೌನ್ ವೇಳೆಯಲ್ಲಿ ಅನಗತ್ಯವಾಗಿ ಓಡಾಡುವ ಜನರ ಬೈಕ್, ವಾಹನಗಳನ್ನು ಒಮ್ಮೆ ಸೀಜ್ ಮಾಡಿದರೆ ಅವುಗಳನ್ನು ಸಾರ್ವಜನಿಕರು ಕೋರ್ಟ್ ಮೂಲಕವೇ ಬಿಡಿಸಿಕೊಳ್ಳಬೇಕಾಗುತ್ತದೆ ಎಂದು ಡಿಸಿಪಿ ಡಾ. ವಿಕ್ರಂ ಆಮ್ಟೆ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಗಂಭೀರವಾಗಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜನರೂ ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ. ಆದರೂ ಕೆಲವರು ಅನಗತ್ಯ ಸಂಚಾರ ಮಾಡುತ್ತಿದ್ದಾರೆ ಎಂದರು.

    ದಿನದ 24 ಗಂಟೆಯೂ ಕಠಿಣ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಸೋಮವಾರಕ್ಕೆ ಹೋಲಿಸಿದರೆ, ಮಂಗಳವಾರ ಜನರ ಓಡಾಟ ಬಹಳಷ್ಟು ಕಡಿಮೆಯಾಗಿತ್ತು. ಅನವಶ್ಯವಾಗಿ ಓಡಾಡಿದ 150ಕ್ಕೂ ಹೆಚ್ಚು ಜನರ ಬೈಕ್ ಸೀಜ್ ಮಾಡಲಾಗಿದೆ. 230 ಜನರ ವಿರುದ್ಧ ಮಾಸ್ಕ್, ದೈಹಿಕ ಅಂತರ ಕಾಯ್ದುಕೊಳ್ಳದ್ದಕ್ಕೆ ಪ್ರಕರಣ ದಾಖಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಇನ್ನಷ್ಟು ಕಠಿಣ ಆಗಲಿದ್ದು, ಜನರು ಅನಿವಾರ್ಯವಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು.

    ಕರೊನಾ ಚೈನ್‌ಬ್ರೇಕ್ ಮಾಡಲು ಸಹಕರಿಸಬೇಕು. ಇದಲ್ಲದೆ, ಮುಂಬರುವ ಬಸವ ಜಯಂತಿ ಹಾಗೂ ರಂಜಾನ್ ಹಬ್ಬ ಸೇರಿ ಇತರ ಹಬ್ಬಗಳಿಗೆ ಅವಕಾಶವಿರುವುದಿಲ್ಲ. ಈಗಿರುವ ಸಂದರ್ಭದಲ್ಲಿ ಎಲ್ಲವನ್ನೂ ನಿರ್ಬಂಧಿಸಲಾಗಿದೆ. ಹೀಗಾಗಿ, ಈಗಾಗಲೇ ಆಯಾ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದು, ಕರೊನಾ ತಡೆಗೆ ಎಲ್ಲ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದು ಡಿಸಿಪಿ ಡಾ. ಆಮ್ಟೆ ತಿಳಿಸಿದರು.

    ನಾನು ಡಾಕ್ಟರ್ ಎಂದ ಫಾರ್ಮಸಿಸ್ಟ್!: ಮಂಗಳವಾರದ 2ನೇ ದಿನದ ಲಾಕ್‌ಡೌನ್ ಪರಿಶೀಲನೆಗಾಗಿ ಖುದ್ದು ಫೀಲ್ಡ್‌ಗೆ ಇಳಿದಿದ್ದ ಡಿಸಿಪಿ ವಿಕ್ರಂ ಆಮ್ಟೆ, ನಗರದ ಅಶೋಕ ವೃತ್ತದಲ್ಲಿ ವಾಹನಗಳ ತಪಾಸಣೆ ನಡೆಸಿದರು. ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಹಾಗೂ ಕಾರುಗಳನ್ನು ಜಪ್ತಿ ಮಾಡಿದರು.

    ತಪಾಸಣೆ ವೇಳೆ ವ್ಯಕ್ತಿಯೋರ್ವ, ‘ನಾನು ಡಾಕ್ಟರ್ ಇದೀನಿ, ನನಗೆ ರೂಲ್ಸ್ ಗೊತ್ತಿವೆ’ ಎಂದು ಡಿಸಿಪಿ ಬಳಿ ವಾದಿಸಿದರು. ಅಲ್ಲದೆ, ಆ ವ್ಯಕ್ತಿ ಔಷಧ ಅಂಗಡಿ ಪರವಾನಗಿ ತೋರಿಸಿದ್ದರಿಂದ ಆತನನ್ನು ತರಾಟೆಗೆ ತೆಗೆದುಕೊಂಡ ವಿಕ್ರಂ ಆಮ್ಟೆ, ‘ವೈದ್ಯರು ಹಾಕುವ ಏಪ್ರಾನ್ ಹಾಕಿಕೊಳ್ಳಬೇಡ. ಏಪ್ರಾನ್ ಬಿಚ್ಚಿ ಬೈಕ್ ತೆಗೆದುಕೊಂಡು ಹೋಗು’ ಎಂದರು. ಬಳಿಕ ಏಪ್ರಾನ್ ಬಿಚ್ಚಿ ಬ್ಯಾಗ್‌ನಲ್ಲಿಟ್ಟುಕೊಂಡ ಆ ಫಾರ್ಮಸಿಸ್ಟ್, ಮನೆಗೆ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts