More

    ಸಿಸಿ ರಸ್ತೆ ಕಾಮಗಾರಿ ಕಳಪೆ

    ತಲಕಾಡು: ಜೆಜೆಎಂ ಯೋಜನೆಯಡಿ ನಳ ಸಂಪರ್ಕ ಒದಗಿಸಲು ಇಲ್ಲಿನ ಬೀದಿಗಳಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ರಸ್ತೆಗಳನ್ನು ಅಗೆದಾಗ ಕಳಪೆ ಕಾಮಗಾರಿ ಆಗಿರುವುದು ಬೆಳಕಿಗೆ ಬಂದಿದೆ.

    ಇಲ್ಲಿನ ಆಶ್ರಯ ಬಡಾವಣೆಯಲ್ಲಿ 40 ಲಕ್ಷ ರೂ.ವೆಚ್ಚದಲ್ಲಿ ಮೂರು ಬೀದಿಗಳಲ್ಲಿ ಒಂದೂವರೆ ವರ್ಷದ ಹಿಂದೆ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗಿತ್ತು. ಇದೀಗ ಇದೇ ಬೀದಿಯಲ್ಲಿ ಜೆಜೆಎಂ ಯೋಜನೆಯಡಿ ನೂತನ ನಳ ಸಂಪರ್ಕ ಒದಗಿಸುವ ಕಾಮಗಾರಿ ಕೂಡ ಭರದಿಂದ ಸಾಗಿದೆ.

    ಇಲ್ಲಿನ ಪ್ರತಿ ಮನೆಗೂ ನಳ ಸಂಪರ್ಕ ಒದಗಿಸಲು ರಸ್ತೆಯ ಒಂದು ಮಗ್ಗುಲ ಕಡೆಗೆ ಮಾತ್ರ ನೀರು ಸರಬರಾಜಿಗೆ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಸಲಾಗಿದೆ. ಮತ್ತೊಂದು ಬದಿಯಲ್ಲಿ ನಳ ಸಂಪರ್ಕ ಒದಗಿಸಲು ಪ್ರತಿ ಮನೆಗೆ ಅಡ್ಡಲಾಗಿ ಕಾಂಕ್ರೀಟ್ ರಸ್ತೆಯನ್ನು ಅಗೆಯಲಾಗಿದೆ. ಹೀಗೆ, ಇಲ್ಲಿನ ರಸ್ತೆಯನ್ನು ಯಂತ್ರದ ಮೂಲಕ ಕಟ್ ಮಾಡಿದಾಗ ಕಾಂಕ್ರೀಟ್ ರಸ್ತೆ ಒಳಗಿನಿಂದ ಪೌಡರ್ ಪುಡಿ ಹೊರಬಂದಿದ್ದು, ಮೇಲ್ನೊಟಕ್ಕೆ ಕಳಪೆ ಕಾಮಗಾರಿ ಎಂಬುದು ಸಾಬೀತಾಗಿದೆ.

    ಕಾಂಕ್ರೀಟ್ ರಸ್ತೆಗೆ ಕಬ್ಬಿಣದ ಸರಳು ಬಳಸದೆ ಸಿಂಥೆಟಿಕ್ ಕಾಂಕ್ರೀಟ್ ಮಿಶ್ರಣದ ಮೂಲಕ ನವ ತಂತ್ರಜ್ಞಾನ ಬಳಸಿ ವಿಶೇಷವಾಗಿ ನಿರ್ಮಿಸಲಾಗಿದೆ. ನಿರ್ಮಿಸಿದ ಒಂದೂವರೆ ವರ್ಷದಲ್ಲೇ ಕಾಂಕ್ರೀಟ್ ರಸ್ತೆಯಲ್ಲಿನ ಜಲ್ಲಿ ಕಲ್ಲುಗಳು ಮೇಲೆದ್ದು ಕಾಣುತ್ತಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ರಸ್ತೆ ಕಾಮಗಾರಿ ನಡೆಯುವಾಗ ಜಿಲ್ಲಾ ಗುಣಮಾಪನಾ ಕೇಂದ್ರದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗುಣಮಟ್ಟ ಪರಿಶೀಲನೆ ನಡೆಸಿದ್ದರು.

    ನಳ ಸಂಪರ್ಕ ನಿವಾಸಿಗಳ ಅಸಮಾಧಾನ: ತಲಕಾಡಿನ ಪ್ರತಿ ಬೀದಿಯಲ್ಲಿನ ಕಾಂಕ್ರೀಟ್ ರಸ್ತೆಗಳು, ಅವೈಜ್ಞಾನಿಕ ನಳ ಸಂಪರ್ಕಕ್ಕೆ ಅಹುತಿಯಾಗಿವೆ. ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ಮನೆಯ ಹೊರಗಡೆ ಎಲ್ಲೆಂದರೆ ಅಲ್ಲಿ ನಳಗಳನ್ನು ಅಳವಡಿಸುತ್ತಿದ್ದು ಇದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ನಿವಾಸದ ಹೊರಭಾಗ ಅಳವಡಿಸುತ್ತಿರುವ ನಲ್ಲಿಗಳು ಹಳ್ಳಿಗಳಲ್ಲಿ ಬಹಿರ್ದೆಸೆಗೆ ಅವಕಾಶ ಮಾಡಿಕೊಡುತ್ತವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸದ್ಯದಲ್ಲೇ ಸಂಬಂಧಪಟ್ಟ ಜೆಇಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಕಾಂಕ್ರೀಟ್ ರಸ್ತೆ ನಿರ್ಮಿಸಿದ ಗುತ್ತಿಗೆದಾರ ಮೂರು ವರ್ಷ ರಸ್ತೆಯನ್ನು ನಿರ್ವಹಣೆ ಮಾಡಬೇಕಿದ್ದು, ಪರಿಶೀಲನೆಯಲ್ಲಿ ಕಳಪೆ ಕಾಮಗಾರಿ ಕಂಡುಬಂದರೆ ಗುತ್ತಿಗೆದಾರನ ವಿರುದ್ಧ ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ.
    ನಟೇಶ್, ಎಇಇ, ಲೋಕೋಪಯೋಗಿ ಇಲಾಖೆ, ತಿ.ನರಸೀಪುರ

    ಬೀದಿ ಪೈಪ್‌ಲೈನ್ ಕನೆಕ್ಷನ್‌ಗೆ ಹತ್ತಿರವಾಗಿರುವಂತೆ ಮನೆ ರಕ್ಷಣಾ ಗೋಡೆ ಒಳಗಡೆ ಅಥವಾ ಪೈಪ್‌ಲೈನ್ ಸಮೀಪದಲ್ಲಿದ್ದರೆ ಮನೆ ಒಳಗಡೆ ಜನತೆಗೆ ಅನುಕೂಲವಾಗುವಂತೆ ನಲ್ಲಿ ಸಂಪರ್ಕ ಒದಗಿಸಿಕೊಡಲು ಸೂಚನೆ ನೀಡಿದ್ದೇನೆ. ಗುತ್ತಿಗೆದಾರರು ಸೂಚನೆ ಪಾಲಿಸದಿದ್ದರೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಡುತ್ತೇನೆ.
    ರಶ್ಮಿ, ಎಇಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ತಿ.ನರಸೀಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts