More

    ಸಿಬಿಐ ದಾಳಿ ಖಂಡಿಸಿ ಪ್ರತಿಭಟನೆ

    ಧಾರವಾಡ/ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ಅವಳಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

    ಧಾರವಾಡದಲ್ಲಿ ಪಾಲಿಕೆ ಕಚೇರಿ ಬಳಿಯ ಅಂಬೇಡ್ಕರ್ ಪುತ್ಥಳಿ ಎದುರು ಪ್ರತಿಭಟನೆ ನಡೆಸಿ, ‘ಸರ್ಕಾರದ ಅಂಗ ಸಂಸ್ಥೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ತನ್ನ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದೆ. ಅವುಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತಿದೆ. ಸುಖಾಸುಮ್ಮನೆ ವಿಪಕ್ಷ ನಾಯಕರ ಮೇಲೆ ಸಿಬಿಐ, ಇಡಿ ಸೇರಿ ಇತರ ಸಂಸ್ಥೆಗಳ ಮೂಲಕ ದಾಳಿ ಮಾಡಿಸಿ ಬೆದರಿಸುವ ತಂತ್ರ ಮಾಡುತ್ತಿದೆ’ ಎಂದು ಆರೋಪಿಸಿದರು.

    ಸದ್ಯ ಕರ್ನಾಟಕದಲ್ಲಿ ಉಪ ಚುನಾವಣೆ ಘೊಷಣೆಯಾಗಿದ್ದರಿಂದ ಕೆಪಿಸಿ ಅಧ್ಯಕ್ಷ ಶಿವಕುಮಾರ ಹಾಗೂ ಸಂಸದ ಡಿ.ಕೆ. ಸುರೇಶ ನಿವಾಸದ ಮೇಲೆ ದಾಳಿ ಮಾಡಿಸಿದೆ. ಇದು ಖಂಡನೀಯ. ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಎದುರಾಗಿದ್ದರಿಂದ ಈ ರೀತಿ ವಾತಾವರಣ ಸೃಷ್ಟಿಸಿದೆ ಎಂದು ದೂರಿದರು.

    ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ಸಲ್ಲಿಸಿದರು. ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಆನಂದ ಜಾಧವ, ಬಸವರಾಜ ಕಿತ್ತೂರ, ಪರಮೇಶ್ವರ ಕಾಳೆ, ಆನಂದ ಸಿಂಗನಾಥ, ರಘು ಲಕ್ಕಣ್ಣವರ, ಮಂಜು ಎಲ್., ಶಾಂತವ್ವ ಗುಜ್ಜಳ, ಪ್ರಭಾವತಿ ಒಡ್ಡಿನ, ಸುಮಾ ಮಿನಿಗನವರ, ಶಾಂತಾ ತೇಗೂರ, ಮಂಜು ಭೋವಿ, ಗೌರಿ ನಾಡಗೌಡ, ಆನಂದ ಮೂಶಣ್ಣವರ, ಈರಣ್ಣ ನಾಗಣ್ಣವರ, ಇತರರು ಇದ್ದರು.

    ಹುಬ್ಬಳ್ಳಿಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೆಲಕಾಲ ವಾಹನ ಸಂಚಾರ ತಡೆ ನಡೆಸಿದರು. ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಉಪ ಚುನಾವಣೆ ಸಮಯದಲ್ಲಿ ಪಕ್ಷದ ಶಕ್ತಿಯನ್ನು ಕುಗ್ಗಿಸಲು ಕೇಂದ್ರ ಬಿಜೆಪಿ ಹುನ್ನಾರ ನಡೆಸಿದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವಾಗಿದೆ. ಇಂಥ ಸೇಡಿನ ರಾಜಕೀಯ ನಿಲ್ಲಿಸಬೇಕು ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಆಗ್ರಹಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಶಹಜಮಾನ ಮುಜಾಹಿದ್, ನಾಗರಾಜ ಗೌರಿ, ಸುವರ್ಣ ಕಲ್ಲಕುಂಟ್ಲ, ಮೋಹನ ಹಿರೇಮನಿ, ರಜತ ಉಳ್ಳಾಗಡ್ಡಿಮಠ, ಪ್ರಕಾಶ ಬುರಬುರೆ, ರವಿಕುಮಾರ ಬಡ್ನಿ, ಎಂ.ಎಸ್. ಪಾಟೀಲ, ಚೇತನ ಬಿಜವಾಡ, ಶಾಕಿರ ಸನದಿ, ಮೆಹಮೂದ ಕೊಳೂರು, ಬಾಬಾಜಾನ ಮುಧೋಳ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts