More

    ಸಿದ್ಧರಾಮೇಶ್ವರರು ಸಕಲ ಜೀವರಾಶಿಗಳ ರಕ್ಷಕ

    ಚಿತ್ರದುರ್ಗ: ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸುವುದರೊಂದಿಗೆ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದ, ಜನ-ಜಾನುವಾರು ಸೇರಿ ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸಿ ಸಮಾಜದ ಏಳಿಗೆಗೆ ಶ್ರಮಿಸಿದ ಮಹಾಪುರುಷ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಸೋಮವಾರ ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
    12ನೇ ಶತಮಾನದಲ್ಲೇ ಕೆರೆ-ಕಟ್ಟೆಗಳನ್ನು ಕಟ್ಟಲು ಸಿದ್ಧರಾಮೇಶ್ವರರು ಆದ್ಯತೆ ನೀಡಿದ್ದರು. ಕರ್ಮಯೋಗಿ, ಕಾಯಕಯೋಗಿ, ಶಿವಯೋಗಿ ಸಿದ್ಧರಾಮೇಶ್ವರರು ಬೋಧನೆ, ವಚನಗಳ ರಚನೆಯೊಂದಿಗೆ ಕಾಯಕದ ಮೂಲಕ ಸಮಾಜದ ಸೇವೆ ಮಾಡಿದ್ದಾರೆ ಎಂದರು.
    ಆದರ್ಶ ಸಮಾಜಕ್ಕಾಗಿ ಮಹನೀಯರ ದಾರಿದೀವಿಗೆಯಲ್ಲಿ ನಾವೆಲ್ಲರೂ ನಡೆಯಬೇಕಿದೆ. ಸಿದ್ಧರಾಮೇಶ್ವರರ ವಿಚಾರಧಾರೆಗಳನ್ನು ರೂಢಿಸಿಕೊಳ್ಳಬೇಕಿದೆ. ನಾವಿಂದು ಮಹಾನ್ ದಾರ್ಶನಿಕರು, ಚಿಂತಕರ ವಿಚಾರಧಾರೆಗಳಿಂದ ದೂರವುಳಿಯುತ್ತಿದ್ದೇವೆ ಎಂದು ಬೇಸರಿಸಿದ ಅವರು, ದಾರ್ಶನಿಕರ ವಿಚಾರಧಾರೆಗಳನ್ನು ಅರಿತಾಗ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.
    ಶ್ರಮ ಜೀವಿ ಭೋವಿ ಸಮಾಜ ಕಾಯಕನಿಷ್ಠ ಸಮಾಜವೂ ಆಗಿದೆ. ಮೀಸಲು ಸೌಲಭ್ಯಗಳನ್ನು ಬಳಸಿಕೊಂಡು ಸಮಾಜ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಿದೆ. ಸಮುದಾಯದಲ್ಲಿ ಕೆಲವರು ಅಲೆಮಾರಿ ಜೀವನ ಸಾಗಿಸುತ್ತಿದ್ದು, ಕೆಲಸಕ್ಕೆ ಹೋಗಬೇಕಾದರೆ ಯಾವುದೇ ಕಾರಣಕ್ಕೂ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಬಾರದು ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಈ ಸಂಬಂಧ ಸಮಾಜದ ಮುಖಂಡರು ಜಾಗೃತಿ ಮೂಡಿಸಬೇಕು ಎಂದರು.
    ಸಾಹಿತಿ ಪ್ರೊ.ಬಸವರಾಜ ಟಿ.ಬೆಳಗಟ್ಟ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿದರು. ಮೊಳಕಾಲ್ಮೂರು ತಾಲೂಕು ಸಿದ್ದಯ್ಯನಕೋಟೆ ನುಂಕೇಶ್ ತಂಡದವರು ವಚನ ಗಾಯನ ಪ್ರಸ್ತುತ ಪಡಿಸಿದರು.
    ಎಎಸ್‌ಪಿ ಅಬ್ದುಲ್‌ಖಾದರ್, ತಹಸೀಲ್ದಾರ್ ನಾಗವೇಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜನ, ಜಿಲ್ಲಾ ಭೋವಿ ಸಮಾಜದ ಕಾರ‌್ಯದರ್ಶಿ ಎಚ್.ಲಕ್ಷ್ಮಣ್, ಮುಖಂಡರಾದ ಡಿ.ಸಿ.ಮೋಹನ್, ಲಕ್ಷ್ಮಣಪ್ಪ, ಸತೀಶ್, ಭರತ್, ಶ್ರೀನಿವಾಸ್ ಮಳಲಿ, ಆನಂದ್, ರವಿಕುಮಾರ್ ಮತ್ತಿತರರು ಇದ್ದರು.

    *ಅಗ್ರಗಣ್ಯರಲ್ಲಿ ಪ್ರಥಮರು
    ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಜೇಡರದಾಸಿಮಯ್ಯ, ಅಕ್ಕಮಹಾದೇವಿ ಮತ್ತಿತರ ಅಗ್ರಗಣ್ಯರಲ್ಲಿ ಶಿವಯೋಗಿ ಶ್ರೀ ಸಿದ್ಧರಾಮರು ಪ್ರಥಮ ಸ್ಥಾನದಲ್ಲಿದ್ದವರು ಎಂದು ಸಾಹಿತಿ ಪ್ರೊ.ಬಸವರಾಜ ಟಿ.ಬೆಳಗಟ್ಟ ಹೇಳಿದರು. ಸಿದ್ಧರಾಮರು ವಚನ, ಸ್ವರವಚನ, ಬಸವಸ್ತ್ರೋತ್ರ, ತ್ರಿವಧಿ, ಅಷ್ಟಾವರಣ ಸ್ತ್ರೋತ್ರದ ತ್ರಿವಧಿ, ಸಂಕೀರ್ಣ ತ್ರಿವಧಿ ಸೇರಿ ವೈವಿಧ್ಯಮಯ ಸಾಹಿತ್ಯ ರಚಿಸಿದ್ದಾರೆ ಎಂದರು. ವಚನ ಮತ್ತು ಸ್ವರವಚನಗಳಲ್ಲಿ ಸಿದ್ಧರಾಮೇಶ್ವರ ಅಂಕಿತನಾಮ ಕಪಿಲಸಿದ್ದ ಮಲ್ಲಿಕಾರ್ಜನ ಅಂತಾ ಇದ್ದರೆ, ತ್ರಿವಧಿಗಳಲ್ಲಿ ಯೋಗಿನಾಥ ಎಂದಿದ್ದು, 12ನೇ ಶತಮಾನದಲ್ಲಿ 2 ಅಂಕಿತನಾಮವಿರುವ ಏಕೈಕ ವ್ಯಕ್ತಿ ಸಿದ್ಧರಾಮರು. ಇವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಸಂಗತಿಗಳು, ಧರ್ಮ ತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ವಿಷಯಗಳ ವಚನಗಳು ಪ್ರಧಾನವಾಗಿ ಕಂಡುಬಂದಿವೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts