More

    ಸಿದ್ಧಗಂಗೆಯಲ್ಲಿ ಇಫ್ತಿಯಾರ್​ ಕೂಟ: ಸೌಹಾರ್ದತೆ, ಭಾವೈಕ್ಯತೆಯ ರಂಜಾನ್​

    ತುಮಕೂರು: ಪ್ರತಿನಿತ್ಯ ಒಂದಲ್ಲ ಒಂದು ಕೋಮುದ್ವೇಷ ಬಿತ್ತುವ ಟನೆಗಳ ನಡುವೆ ಸಿದ್ಧಗಂಗಾಮಠದಲ್ಲಿ ಸೌಹಾರ್ದತೆ ಹಾಗೂ ಭಾವೈಕ್ಯತೆಯ ರಂಜಾನ್​ ಆಚರಣೆ ಅಂಗವಾಗಿ ಇಫ್ತಿಯಾರ್​ ಕೂಟ ಏರ್ಪಡಿಸಲಾಗಿತ್ತು.

    ರಂಜಾನ್​ ಪ್ರಯುಕ್ತ ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಶ್ರೀಮಠದಲ್ಲಿ ಶುಕ್ರವಾರ ಸಂಜೆ ಇಫ್ತಿಯಾರ್​ ಕೂಟದಲ್ಲಿ ಭಾಗಿಯಾಗಿದ್ದು, ಮಠದ ಅಂಗಳದಲ್ಲಿ ಮೊದಲ ಬಾರಿ ಇಫ್ತಿಯಾರ್​ ಕೂಟ ಏರ್ಪಡಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಭೇಟಿ ಮಾಡಿ ಮುಖಂಡರು ಆಶೀರ್ವಾದ ಪಡೆದರು. ದೈನಂದಿನ ಉಪವಾಸವನ್ನು ನಿಲ್ಲಿಸಿ ಶ್ರೀಮಠದಲ್ಲಿಯೇ ಮುಸ್ಲಿಂ ಮುಖಂಡರು ಆಹಾರ ಸೇವಿಸಿದರು. ಈ ವೇಳೆ ನಗರದ ಮಾಜಿ ಶಾಸಕ ಎಸ್​.ರಫೀಕ್​ ಅಹ್ಮದ್​, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್​.ಆರ್​. ಮೆಹ್ರೋಜ್​ ಖಾನ್​ ಮತ್ತಿತರರು ಭಾಗಿಯಾಗಿದ್ದರು.

    ದೇವನೊಬ್ಬ ನಾಮ ಹಲವು: ಪವಿತ್ರವಾದ ಸಿದ್ಧಗಂಗಾಮಠದಲ್ಲಿ ಉಪವಾಸ ಆಚರಣೆ ಮಾಡಿದ್ದು, ಇಡೀ ಭಾರತದಲ್ಲಿ ಅಕ್ಷರ, ಅನ್ನ, ಆಶ್ರಯ ದಾಸೋಹ ಕಲ್ಪಿಸಿದ ಮಹಾಸಂತರಿದ್ದ ಈ ನೆಲವು ವಿಶೇಷವೆನಿಸಿದೆ. ಈ ಸಂತರ ಬೀಡಿನಲ್ಲಿ ಮುಸ್ಲಿಮರು ರಂಜಾನ್​ನಲ್ಲಿ ಶ್ರೀಮಠದ ಪ್ರಸಾದ ಸ್ವೀಕರಿಸುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಎಸ್​.ಆರ್​.ಮೆಹ್ರೋಜ್​ ಖಾನ್​ ಹೇಳಿದರು. ಭಾರತವು ಸೌಹಾರ್ದತೆ, ಸಹಬಾಳ್ವೆಗೆ ಹೆಸರಾದ ದೇಶ. ಹಿಂದು&ಮುಸ್ಲಿಂ, ಕೆಸ್ತ, ಸಿಖ್​, ಜೈನ ಧರ್ಮ ಸೇರಿ ಎಲ್ಲ ಧರ್ಮಿಯರು ಅಣ್ಣತಮ್ಮಂದಿರಂತೆ ಬಾಳುತ್ತಿದ್ದೇವೆ. ಎಲ್ಲ ಹಬ್ಬಗಳನ್ನು ಒಂದಾಗಿ ಆಚರಿಸುವುದು ನಮ್ಮ ವಿಶೇಷತೆ. ಸಿದ್ದಗಂಗೆಯ ನೆಲದಿಂದ ನಾವೆಲ್ಲಾ ಒಗ್ಗೂಡಿ ಎಲ್ಲ ಹಬ್ಬಹರಿದಿನಗಳನ್ನು ಆಚರಿಸುವ ನಿಟ್ಟಿನಲ್ಲಿ ಇಫ್ತಿಯಾರ್​ ಕೂಟ ಆಯೋಜಿಸಲಾಗಿತ್ತು. ದೇವನೊಬ್ಬ ನಾಮಹಲವು ಎಂಬಂತೆ ನಾವೆಲ್ಲಾ ಒಗ್ಗೂಡಿ ಬಾಳೋಣ ಎಂದರು. ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಸಹೋದರತ್ವಕ್ಕೆ ಮತ್ತೊಂದು ಹೆಸರೇ ಸಿದ್ಧಗಂಗಾ ಕ್ಷೇತ್ರ. ಸ್ವಾಮೀಜಿಯವರ ಸನ್ನಿಧಾನದಲ್ಲಿ ಇಫ್ತಿಯಾರ್​ ಕೂಟ ಆಚರಿಸುತ್ತಿದ್ದೇವೆ. ಭಾರತೀಯರು ಶಾಂತಿ, ಸೌಹಾರ್ದತೆಯಿಂದ ಬಾಳುವಂತೆ ಶ್ರೀಗಳು ಕರೆನೀಡಿದ್ದು, ಎಲ್ಲ ಜಾತಿ, ಧರ್ಮದವರಿಗೆ ತ್ರಿವಿಧದಾಸೋಹ ಕಲ್ಪಿಸಿರುವ ಮಠದ ಅಂಗಳದಲ್ಲಿ ಇಫ್ತಿಯಾರ್​ ಕೂಟ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್​ ಅಹ್ಮದ್​ ನಮನಗಳನ್ನು ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts