More

    ಸಿದ್ದರಾಮಯ್ಯ ಹೇಗೆ ವಕೀಲಿಕಿ ಮಾಡಿದರೋ?

    ಹುಬ್ಬಳ್ಳಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅದು ಹೇಗೆ ವಕೀಲಿಕಿ ಮಾಡಿದರೋ ಗೊತ್ತಿಲ್ಲ. ಸ್ವತಃ ನ್ಯಾಯಾಲಯವೇ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ವಣಕ್ಕೆ ಹಸಿರು ನಿಶಾನೆ ತೋರಿರುವಾಗ, ಆ ಜಾಗ ವಿವಾದಾತ್ಮಕ ಎಂಬ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

    ನಗರದಲ್ಲಿ ಸೋಮವಾರ ಆಯೋಜಿಸಿದ್ದ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇದೇ ರೀತಿಯ ವರ್ತನೆ ಮುಂದುವರಿಸಿದರೆ ಅಲ್ಪಸಂಖ್ಯಾತರ ಮತಗಳೂ ಕಾಂಗ್ರೆಸ್​ಗೆ ಬಾರದ ದುಸ್ಥಿತಿ ನಿರ್ವಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ವಣಕ್ಕೆ ಅಲ್ಪಸಂಖ್ಯಾತರೂ ದೇಣಿಗೆ ನೀಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಥ್ ನೀಡುತ್ತಿದ್ದಾರೆ ಎಂದರು. ಈ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಮಂದಿರ ನಿರ್ವಣಕ್ಕೆ ತಕ್ಷಣ ದೇಣಿಗೆ ಘೋಷಿಸುವುದು ಒಳಿತು. ಇಲ್ಲದಿದ್ದರೆ ಇಬ್ಬರೂ ಮೂರ್ಖರಾಗುವುದು ಖಚಿತ ಎಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಾಂಗ್ರೆಸ್ ಅಪ್ರಬುದ್ಧ ರಾಜಕೀಯ ಪಕ್ಷ. 150 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್​ಗೆ ವಯಸ್ಸಾಗಿದೆ. ಆ ಪಕ್ಷವನ್ನು ಮನೆಗೆ ಕಳುಹಿಸುವ ಮೂಲಕ ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಗೆ ಜಯ ದೊರಕಿಸಿಕೊಡುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ತಿಳಿಸಿದರು. ಕೆಲ ತಿಂಗಳುಗಳಲ್ಲಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಘೋಷಣೆಯಾಗಲಿವೆ. ಈ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್ ಮುಕ್ತವಾಗಬೇಕು. ಇದಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ, ‘ಸ್ವಚ್ಛ ಸಂಡೆ ’ಅಭಿಯಾನದ ಮಾದರಿಯಲ್ಲಿ ಎಲ್ಲ ಮೋರ್ಚಾಗಳು ವಿಶೇಷ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ತಿಪ್ಪಣ್ಣ ಮಜ್ಜಗಿ, ರಾಧಾಬಾಯಿ ಸಫಾರೆ, ಮಲ್ಲಿಕಾರ್ಜುನ ಸಾವಕಾರ, ಸವಿತಾ ಅಮರಶೆಟ್ಟಿ, ಮಹೇಂದ್ರ ಕೌತಾಳ, ಸಂತೋಷ ಚವ್ಹಾಣ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ವಿಜಯಾನಂದ ಶೆಟ್ಟಿ ಹಾಗೂ ಇತರರಿದ್ದರು.

    ದಿಶಾ ರವಿ ಅವರನ್ನು ಬೆಂಬಲಿಸಿ ಐ ಆಮ್ ದಿಶಾ ಎಂಬ ಅಭಿಯಾನವನ್ನು ಕಾಂಗ್ರೆಸ್ ಹಾಗೂ ಬೆಂಬಲಿತ ಪಕ್ಷಗಳ ಕಾರ್ಯಕರ್ತರು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ದಾವುದ್ ಇಬ್ರಾಹಿಂನನ್ನು ಬಂಧಿಸಿದಲ್ಲಿ ಆಗಲೂ ಐ ಆಮ್ ದಾವುದ್ ಎಂಬ ಅಭಿಯಾನ ನಡೆಸಿದರೂ ಅಚ್ಚರಿ ಇಲ್ಲ.
    |ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts