More

    ಸಿದ್ದರಾಮಯ್ಯ ಅವರೇ, ವಿದೂಷಕರಂತೆ ವರ್ತಿಸಬೇಡಿ….!

    ಮೈಸೂರು: ಸಿದ್ದರಾಮಯ್ಯ ಅವರೇ, ನೀವು ಪ್ರಬುದ್ಧ ಅಂತಾ ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗಿ ವರ್ತಿಸುತ್ತಿದ್ದೀರಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹರಿಹಾಯ್ದರು.
    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಕಾಡು ಮನುಷ್ಯ ಎಂದಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಮೂಲಕ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಿದೂಷಕರಂತೆ ವರ್ತಿಸಬೇಡಿ, ರಾಜಕೀಯ ಮುತ್ಸದ್ಧಿಯಂತೆ ವರ್ತಿಸಿ ಎಂದೂ ಗುಟುರು ಹಾಕಿದರು.
    ನಿಮಗೆ ಏಕವಚನ, ಬಹುವಚನ ಗೊತ್ತಿಲ್ಲ. ಬೇರೆಯವರಿಗೆ ಸಂಧಿಪಾಠ ಮಾಡುತ್ತೀರಾ? ಆದರೆ, ಈಗ ಅಪ್ರಬುದ್ದರಾಗಿ ವರ್ತನೆ ಮಾಡುತ್ತಿದ್ದೀರಿ. ಆದರೆ, ಆಸ್ಥಾನದ ವಿದೂಷಕರ ರೀತಿ ವರ್ತಿಸದಿರಿ. ನೀವು ಬಳಸಿರುವ ಭಾಷೆಯನ್ನು ಯಾರೂ ಒಪ್ಪುವುದಿಲ್ಲ. ಇದು ಕಾಡಿನ ಜನರಿಗೆ ಮಾಡಿರುವ ಅವಮಾನ. ಕಾಡಿನ ಜನರನ್ನು ಹೀಯಾಳಿಸಿದ್ದೀರಿ. ಜನ ನಿಮ್ಮ ತಲೆ ಖಾಲಿಯಾಗಿ, ವಿವೇಚನೆ ಇಲ್ಲ ಅಂದುಕೊಳ್ಳುತ್ತಾರೆ ಎಂದು ಹರಿಹಾಯ್ದರು
    ಕಾಡು ಮನುಷ್ಯ ಅಂದರೆ ಅರಣ್ಯ ಸಂರಕ್ಷಕರಿಗೂ ಮಾಡುವ ಅಪಮಾನ. ಈಗ ಎಷ್ಟೋ ಜನರು ಕಾಡು ಜನಾಂಗದ ಜಾತಿ ಪ್ರಮಾಣಪತ್ರವನ್ನು ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಪಕ್ಷದ ರಾಜ್ಯಾಧ್ಯಕ್ಷರನ್ನು ಕಾಡು ಮನುಷ್ಯ ಅನ್ನೋದು ಸರಿಯೇ? ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ ಎಂದು ಚಾಟಿಬೀಸಿದರು.
    ಕನಕಪುರ ಬಂಡೆ ಎಂಬುದು ನಿಮ್ಮ ಅಭಿಮಾನಿಗಳು ಕೊಟ್ಟ ಬಿರುದುಗಳು. ಅಭಿಮಾನಿಗಳು ಬಿರುದು ಕೊಟ್ಟಾಗ ಸಂತೋಷ ಪಟ್ಟಿದ್ದೀರಿ. ಇದೀಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯೇ? ಎಂದು ಪ್ರಶ್ನಿಸಿದರು.
    ನೀವು ಒಬ್ಬ ಸ್ಟೇಟ್ಸ್‌ಮ್ಯಾನ್ ಆಗಿ ವರ್ತಿಸುವುದನ್ನು ಕಲಿಯಿರಿ. ನೀವು ಮುಖ್ಯಮಂತ್ರಿಯಾಗಿದ್ದವರು. ಇದೀಗ ಪ್ರತಿಪಕ್ಷದ ನಾಯಕರು. ಹೀಗಾಗಿ, ತಕ್ಷಣ ನಿಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಿರಿ ಎಂದೂ ಆಗ್ರಹಿಸಿದರು.
    ವೋಟ್ ಹಾಕಿ ಗೆಲ್ಲಿಸಿದರೆ ಕೋವಿಡ್ ರೋಗಕ್ಕೆ ಲಸಿಕೆ ಕೊಡ್ತೀರಾ ಎಂಬುದೇನೋ ಸರಿ. ಸೋಲಿಸಿ ಬಿಟ್ಟರೆ ಜನರನ್ನು ಸಾಯಿಸಿ ಬಿಡ್ತೀರಾ? ಎಂದು ಪ್ರಶ್ನಿಸುವ ಮೂಲಕ ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಬಿಜೆಪಿ ಪ್ರಣಾಳಿಕೆಯ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು.
    ಕರೊನಾ ವಿಚಾರವನ್ನು ರಾಜಕೀಯಕ್ಕೆ ತರಬೇಡಿ. ಯಾವುದೇ ಪಕ್ಷವಾಗಲಿ, ಕೋವಿಡ್ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ನೇರವಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts